ADVERTISEMENT

ರಟ್ಟೀಹಳ್ಳಿ: ನಿರ್ವಹಣೆ ಇಲ್ಲದೆ ಪಾಳುಬಿದ್ದ ಕಟ್ಟಡ

ಜಯಂತಿಗೆ ಆಚರಣೆಗೆ ಸೀಮಿತವಾದ ಅಂಬೇಡ್ಕರ್ ಸಮುದಾಯ ಭವನ

ಪ್ರದೀಪ ಕುಲಕರ್ಣಿ
Published 17 ಜೂನ್ 2025, 4:45 IST
Last Updated 17 ಜೂನ್ 2025, 4:45 IST
ರಟ್ಟೀಹಳ‍್ಳಿ ಪಟ್ಟಣದ ಶಿರಗಂಬಿ ರಸ್ತೆ ಜನತಾ ಪ್ಲಾಟ್ ಬಳಿ ನಿರ್ಮಾಣಗೊಂಡ ಅಂಬೇಡ್ಕರ್ ಭವನದ ಕಿಟಕಿಯ ಗಾಜು ಒಡೆದಿದ್ದು, ಸೂಕ್ತ ನಿರ್ವಹಣೆಯಿಲ್ಲದೆ ಕಟ್ಟಡ ಪಾಳುಬಿದ್ದಿದೆ
ರಟ್ಟೀಹಳ‍್ಳಿ ಪಟ್ಟಣದ ಶಿರಗಂಬಿ ರಸ್ತೆ ಜನತಾ ಪ್ಲಾಟ್ ಬಳಿ ನಿರ್ಮಾಣಗೊಂಡ ಅಂಬೇಡ್ಕರ್ ಭವನದ ಕಿಟಕಿಯ ಗಾಜು ಒಡೆದಿದ್ದು, ಸೂಕ್ತ ನಿರ್ವಹಣೆಯಿಲ್ಲದೆ ಕಟ್ಟಡ ಪಾಳುಬಿದ್ದಿದೆ   

ರಟ್ಟೀಹಳ್ಳಿ: ಪಟ್ಟಣದ ಶಿರಗಂಬಿ ರಸ್ತೆಯ ಜನತಾ ಪ್ಲಾಟ್‌ನಲ್ಲಿ 2020ನೇ ಸಾಲಿನಲ್ಲಿ ಅಂದಾಜು ₹1.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಭವ್ಯವಾದ ಅಂಬೇಡ್ಕರ್ ಭವನ ಸೂಕ್ತ ನಿರ್ವಹಣೆಯಿಲ್ಲದೆ ಪಾಳುಬಿದ್ದಿದ್ದು, ವರ್ಷಕ್ಕೊಮ್ಮೆ ಜರುಗುವ ಅಂಬೇಡ್ಕರ್ ಜಯಂತಿ ಆಚರಣೆಗೆ ಮಾತ್ರ ಸೀಮಿತವಾಗಿದೆ.

ಸೂಕ್ತ ಕಾಂಪೌಂಡ್ ಇಲ್ಲದೆ ಕಟ್ಟಡದ ಆವರಣವು ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ. ಕಿಟಕಿ ಗಾಜುಗಳು ಒಡೆದು ಹಾಳಾಗಿವೆ. ಕಟ್ಟಡದ ಸುತ್ತಲೂ ಮುಳ್ಳು- ಗಿಡಗಂಟಿಗಳು ಬೆಳೆದು ವಿಷಜಂತುಗಳ ಕೂಪವಾಗಿ ಮಾರ್ಪಟ್ಟಿದೆ. ಸ್ಥಳೀಯವಾಗಿ ಪಟ್ಟಣ ಪಂಚಾಯಿತಿ ನೇತೃತ್ವದಲ್ಲಿ ಭವನಕ್ಕೆ ಉಸ್ತುವಾರಿ ಸಮಿತಿ ರಚನೆ ಮಾಡಿ ಸೂಕ್ತ ನಿರ್ವಹಣೆಗೆ ಆಸ್ಪದ ನೀಡಿದ್ದರೆ ಕಟ್ಟಡ ಸುಸ್ಥಿತಿಯಲ್ಲಿರುತ್ತಿತ್ತು ಎಂಬುದು ಸ್ಥಳೀಯರ ಮಾತು. ಆದರೆ ಸಮಾಜ ಕಲ್ಯಾಣ ಅಧಿಕಾರಿಗಳು ಸೂಕ್ತ ಮುತುವರ್ಜಿ ವಹಿಸದೆ ನಿರ್ಲಕ್ಷ್ಯದಿಂದಾಗಿ ಭವ್ಯವಾದ ಕಟ್ಟಡ ಪಾಳುಬಿದ್ದಿದೆ.

ಅಂಬೇಡ್ಕರ್ ಭವನದಲ್ಲಿ ವಿವಿಧ ಸಂಘಟನೆಗಳ ಕಾರ್ಯಕ್ರಮಗಳು, ಸಾರ್ವಜನಿಕರ ಮತ್ತು ಅಂಬೇಡ್ಕರ್ ಭವನದ ಅಕ್ಕಪಕ್ಕದಲ್ಲಿನ ದಲಿತ ಸಮಾಜದ ನಿವಾಸಿಗಳ ಶುಭ ಸಮಾರಂಭಗಳು ನೆರವೇರಬೇಕಿತ್ತು. ಆದರೆ ಕಟ್ಟಡದಲ್ಲಿ ಮೂಲಸೌಕರ್ಯ ಕೊರತೆಯಿಂದಾಗಿ ಭವನ ಪಾಳುಬಿದ್ದಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಪ್ರತಿವರ್ಷ ಅಂಬೇಡ್ಕರ್ ಜಯಂತಿ ಆಚರಣೆ ಮಾತ್ರ ಇಲ್ಲಿ  ನಡೆಯುತ್ತಿದ್ದು, ಉಳಿದಂತೆ ಯಾವುದೇ ಕಾರ್ಯಕ್ರಮಗಳು ಜರುಗಿಲ್ಲ.

ADVERTISEMENT

‘ಶಿರಗಂಬಿ ರಸ್ತೆಯಿಂದ ಸುಮಾರು 300 ಮೀಟರ್ ದೂರ ಇರುವ ಭವನಕ್ಕೆ, ಅರ್ಧದಷ್ಟು ಮಾತ್ರ ಕಚ್ಚಾ  ಸಿ.ಸಿ. ರಸ್ತೆ ನಿರ್ಮಾಣವಾಗಿದ್ದು, ಉಳಿದಂತೆ ಕಚ್ಚಾ ರಸ್ತೆಯೇ ಇದೆ. ಇದರಿಂದಾಗಿ ಮಳೆಗಾಲದಲ್ಲಿ ಕಾರ್ಯಕ್ರಮ ಆಯೋಜಿಸುವುದು ದೊಡ್ಡ ಸಮಸ್ಯೆಯಾಗುತ್ತಿದೆ’ ಎನ್ನುತ್ತಾರೆ ದಲಿತ ಮುಖಂಡ ಹನುಮಂತಪ್ಪ ಗಾಜೇರ.

‘ಅಂಬೇಡ್ಕರ್ ಭವನದಲ್ಲಿ ವೇದಿಕೆಯು ಪೂರ್ವಾಭಿಮುಖವಾಗಿ ಇರುವ ಬದಲು, ಪಶ್ಚಿಮಾಭಿಮುಖವಾಗಿ ಇರುವ ಕಾರಣ ಇಲ್ಲಿ ಮದುವೆಯಂತಹ ಶುಭ ಸಮಾರಂಭ ಆಯೋಜಿಸಲು ಯಾರೂ ಮುಂದೆ ಬರುತ್ತಿಲ್ಲ. ವೇದಿಕೆಯನ್ನು ಪೂರ್ವಾಭಿಮುಖವಾಗಿ ನಿರ್ಮಿಸಬೇಕಿತ್ತು. ಭವನದ ಸೂಕ್ತ ನಿರ್ವಹಣೆಗಾಗಿ ಒಂದು ಸಮಿತಿ ರಚನೆ ಮಾಡಿದಲ್ಲಿ ಕಟ್ಟಡವನ್ನು ಸುರಕ್ಷಿತ ಹಾಗೂ ಸ್ವಚ್ಛತೆಯಿಂದ ಇಡಲು ಸಾಧ್ಯ’ ಎನ್ನುತ್ತಾರೆ ದಲಿತ ಮುಖಂಡ ಸಿದ್ದಪ್ಪ ಹರಿಜನ.

ಸಮಾಜ ಕಲ್ಯಾಣ ಇಲಾಖೆಯ ಅಧೀನಕೊಳಪಟ್ಟ ರಟ್ಟೀಹಳ್ಳಿ ಪಟ್ಟಣದ ಡಾ. ಅಂಬೇಡ್ಕರ್ ಸಮುದಾಯ ಭವನದ ನಿರ್ವಹಣೆಗಾಗಿ ಸ್ಥಳೀಯ ಪಟ್ಟಣ ಪಂಚಾಯಿತಿಗೆ ತಿಳಿಸಲಾಗಿತ್ತು. ಅವರು ಒಪ್ಪದ ಕಾರಣ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಈಗ ಒಂದು ಸಮಿತಿ ರಚನೆ ಮಾಡಲಾಗಿದೆ’ ಎಂದು ರಟ್ಟೀಹಳ್ಳಿ- ಹಿರೇಕೆರೂರ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೆಬೂಬಸಾಬ ನದಾಫ್ ತಿಳಿಸಿದರು.

ಸಮುದಾಯ ಭವನ ಬಳಕೆಗೆ ಸದ್ಯದಲ್ಲಿಯೇ ದರ ನಿಗದಿಪಡಿಸಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ನಿರ್ವಹಣಾ ಸಮಿತಿಗೆ ಹಸ್ತಾಂತರಿಸಲಾಗುವುದು
ಮಹೆಬೂಬಸಾಬ ನದಾಫ್ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಟ್ಟೀಹಳ್ಳಿ- ಹಿರೇಕೆರೂರ ತಾಲ್ಲೂಕು
‘ಅವೈಜ್ಞಾನಿಕವಾಗಿ ನಿರ್ಮಾಣ’
‘ಅಂಬೇಡ್ಕರ್ ಭವನದಲ್ಲಿ ವೇದಿಕೆಯು ಪೂರ್ವಾಭಿಮುಖವಾಗಿ ಇರುವ ಬದಲು, ಪಶ್ಚಿಮಾಭಿಮುಖವಾಗಿ ಇರುವ ಕಾರಣ ಇಲ್ಲಿ ಮದುವೆಯಂತಹ ಶುಭ ಸಮಾರಂಭ ಆಯೋಜಿಸಲು ಯಾರೂ ಮುಂದೆ ಬರುತ್ತಿಲ್ಲ. ವೇದಿಕೆಯನ್ನು ಪೂರ್ವಾಭಿಮುಖವಾಗಿ ನಿರ್ಮಿಸಬೇಕಿತ್ತು. ಭವನದ ಸೂಕ್ತ ನಿರ್ವಹಣೆಗಾಗಿ ಒಂದು ಸಮಿತಿ ರಚನೆ ಮಾಡಿದಲ್ಲಿ ಕಟ್ಟಡವನ್ನು ಸುರಕ್ಷಿತ ಹಾಗೂ ಸ್ವಚ್ಛತೆಯಿಂದ ಇಡಲು ಸಾಧ್ಯ’ ಎನ್ನುತ್ತಾರೆ ದಲಿತ ಮುಖಂಡ ಸಿದ್ದಪ್ಪ ಹರಿಜನ. ಸಮಾಜ ಕಲ್ಯಾಣ ಇಲಾಖೆಯ ಅಧೀನಕೊಳಪಟ್ಟ ರಟ್ಟೀಹಳ್ಳಿ ಪಟ್ಟಣದ ಡಾ. ಅಂಬೇಡ್ಕರ್ ಸಮುದಾಯ ಭವನದ ನಿರ್ವಹಣೆಗಾಗಿ ಸ್ಥಳೀಯ ಪಟ್ಟಣ ಪಂಚಾಯಿತಿಗೆ ತಿಳಿಸಲಾಗಿತ್ತು. ಅವರು ಒಪ್ಪದ ಕಾರಣ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಈಗ ಒಂದು ಸಮಿತಿ ರಚನೆ ಮಾಡಲಾಗಿದೆ’ ಎಂದು ರಟ್ಟೀಹಳ್ಳಿ- ಹಿರೇಕೆರೂರ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೆಬೂಬಸಾಬ ನದಾಫ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.