
ರಟ್ಟೀಹಳ್ಳಿ: ತಾಲ್ಲೂಕು ಕೇಂದ್ರವಾಗಿರುವ ಪಟ್ಟಣದ ಹಲವು ಕಡೆಗಳಲ್ಲಿ ನಿತ್ಯವೂ ವಾಹನಗಳ ದಟ್ಟಣೆ ಉಂಟಾಗುತ್ತಿದ್ದು, ಸಂಚಾರ ನಿಯಮಗಳ ಉಲ್ಲಂಘನೆಯಿಂದಾಗಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿರುವುದಾಗಿ ಜನರು ದೂರುತ್ತಿದ್ದಾರೆ.
ತಾಲ್ಲೂಕಿನ 63 ಗ್ರಾಮಗಳ ಸಾರ್ವಜನಿಕರು, ನಿತ್ಯವೂ ಒಂದಿಲ್ಲೊಂದು ಕೆಲಸಕ್ಕಾಗಿ ತಾಲ್ಲೂಕು ಕೇಂದ್ರಕ್ಕೆ ಬಂದು ಹೋಗುತ್ತಿದ್ದಾರೆ. ವಿಪರೀತ ದಟ್ಟಣೆಯಿಂದ ಸಣ್ಣ-ಪುಟ್ಟ ಅಪಘಾತಗಳು ಸಂಭವಿಸುತ್ತಿದ್ದರೂ ಪೊಲೀಸರು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಜರುಗಿಸದಿರುವುದು ಜನತೆಯಲ್ಲಿ ಬೇಸರ ಮೂಡಿಸಿದೆ.
ಪಟ್ಟಣದ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದೆ. ಪಟ್ಟಣದ ಪ್ರಮುಖ ವೃತ್ತವಾದ ಭಗತಸಿಂಗ್ ಸರ್ಕಲ್‌ಗೆ ಹೊಂದಿಕೊಂಡು ನೋಬಲ್ ಪಬ್ಲಿಕ್ ಶಾಲೆ, ನೊಬೆಲ್ ಪಿ.ಯು. ಕಾಲೇಜು, ಮೌಲಾನಾ ಆಜಾದ ಶಾಲೆ, ತರಳುಬಾಳು ಶಾಲೆ, ಲಯನ್ಸ್ ಶಾಲೆ, ಸರ್ಕಾರಿ ಪಿ.ಯು.ಕಾಲೇಜು ಇದೆ. ನಿತ್ಯ ಸಾವಿರಾರು ವಿದ್ಯಾರ್ಥಿಗಳು ಭಗತಸಿಂಗ್ ವೃತ್ತದಿಂದಲೇ ಮನೆಗೆ ತೆರಳುವುದು ಅನಿವಾರ್ಯವಾಗಿದೆ.
ಇಲ್ಲಿ ನಿತ್ಯ ಬೆಳಿಗ್ಗೆ ಹಾಗೂ ಸಂಜೆ ಹೆಚ್ಚಿನ ವಾಹನ ದಟ್ಟಣೆ, ಜನ ದಟ್ಟಣೆ ಉಂಟಾಗುತ್ತಿದೆ. ವಿದ್ಯಾರ್ಥಿಗಳು ಭಯದಲ್ಲಿ ಸಂಚರಿಸುತ್ತಿದ್ದಾರೆ. ರಸ್ತೆಗಳಲ್ಲಿ ಪ್ರತಿದಿನ ಒಂದಿಲ್ಲೊಂದು ಅಪಘಾತ ಸಂಭವಿಸಿದರೂ ಸಮಸ್ಯೆ ಕೇಳುವವರಿಲ್ಲದಂತಾಗಿದೆ. ದಟ್ಟಣೆ ಉಂಟಾದರೂ ಅದನ್ನು ನಿಯಂತ್ರಿಸಲು ಪೊಲೀಸರು ಸ್ಥಳದಲ್ಲಿ ಇರುವುದಿಲ್ಲವೆಂಬ ಆರೋಪವಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ವೇಗ ನಿಯಂತ್ರಕಗಳ ಸೂಚನಾ ಫಲಕಗಳನ್ನು ಅಳವಡಿಸಿಲ್ಲ. ವೇಗಮಿತಿಗೂ ಕ್ರಮ ಕೈಗೊಂಡಿಲ್ಲ. ಇದು ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ.
ರಸ್ತೆಯಲ್ಲಿ ಉಂಟಾಗುತ್ತಿರುವ ದಟ್ಟಣೆ ನಿಯಂತ್ರಿಸಿ ಎಂದರೆ, ಅಧಿಕಾರಿಗಳು ಪರಸ್ಪರ ಆರೋಪ–ಪ್ರತ್ಯಾರೋಪ ಮಾಡುತ್ತಿದ್ದಾರೆ. ರಾತ್ರಿ ಸಂದರ್ಭದಲ್ಲಿ ವಿದ್ಯುತ್ ದೀಪಗಳು ಹತ್ತುತ್ತಿಲ್ಲ. ಕತ್ತಲೆಯಲ್ಲಿ ಜನರು ಸಂಚರಿಸುತ್ತಿದ್ದಾರೆ. ಹೆದ್ದಾರಿಗೆ ಹೊಂದಿಕೊಂಡಿರುವ ಪಾದಚಾರಿ ಮಾರ್ಗಗಳನ್ನು ಗೂಡಂಗಡಿಗಳು ಅತಿಕ್ರಮಿಸಿಕೊಂಡಿವೆ. ಪಾದಚಾರಿಗಳು ಅನಿವಾರ್ಯವಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ಇದೇ ಸಂದರ್ಭದಲ್ಲಿ ವಾಹನಗಳ ಡಿಕ್ಕಿ ಹೊಡೆಯುವ ಘಟನೆಗಳೂ ನಡೆಯುತ್ತಿವೆ.
‘ತಾಲ್ಲೂಕು ಕೇಂದ್ರವಾಗಿರುವ ಪಟ್ಟಣದಲ್ಲಿ ದಟ್ಟಣೆ ಹೆಚ್ಚಾಗಿದೆ. ಭಗತಸಿಂಗ ವೃತ್ತ ಹಾಗೂ ಮಹಾಲಕ್ಷ್ಮಿ ವೃತ್ತದಲ್ಲಿ ರಸ್ತೆ ಅಗಲೀಕರಣ ಮಾಡಬೇಕು. ವಿದ್ಯುತ್ ದೀಪಗಳನ್ನು ಅಳವಡಿಸಬೇಕು. ಹೆದ್ದಾರಿಗೆ ಹೊಂದಿರುವ ಗೂಡಂಗಡಿಗಳನ್ನು ತೆರವುಗೊಳಿಸಬೇಕು. ಸೂಚನಾ ಫಲಕ ಅಳವಡಿಸಬೇಕು. ಇಲ್ಲದಿದ್ದರೆ, ಮುಂಬರುವ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು’ ಎಂದು ನಿವೃತ್ತ ಪಿಎಸ್‌ಐ ಎ.ಆರ್. ಮಣಕೂರ ಎಚ್ಚರಿಸಿದರು.
‘ರಸ್ತೆ ಸುರಕ್ಷತೆಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಇದರಿಂದ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಹಲವು ಬಾರಿ ಮನವಿ ನೀಡಿದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ. ಅಧಿಕಾರಿಗಳು ಜನರ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ’ ಎಂದು ಸ್ಥಳಿಯರಾದ ದೇವರಾಜ ಕಡೂರ ಮತ್ತು ನಿಕ್ಷೇಪ ಮೇದೂರ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.