ADVERTISEMENT

ರಟ್ಟೀಹಳ್ಳಿ ಪ.ಪಂ ಚುನಾವಣೆ ನೀತಿ ಸಂಹಿತೆ ಜಾರಿ: ವೆಚ್ಚ ₹1 ಲಕ್ಷಕ್ಕೆ ಮಿತಿ

15 ವಾರ್ಡ್‌ಗಳಿಗೆ ಆಗಸ್ಟ್ 17ರಂದು ಮತದಾನ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 2:18 IST
Last Updated 29 ಜುಲೈ 2025, 2:18 IST
ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಕಚೇರಿ
ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಕಚೇರಿ   

ಹಾವೇರಿ: ‘ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಜುಲೈ 29ರಿಂದ ಆಗಸ್ಟ್ 20ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಯಾರಾದರೂ ನೀತಿ ಸಂಹಿತೆ ಉಲ್ಲಂಘಿಸಿದರೆ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು.

ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜರುಗಿದ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ಚುನಾವಣಾ ನೀತಿ ಸಂಹಿತೆಯನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಚುನಾವಣೆ ಸುಗಮ ರೀತಿಯಲ್ಲಿ ನಡೆಸಲು ಸಹಕಾರ ನೀಡಬೇಕು’ ಎಂದರು.

‘ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 5,869 ಪುರುಷರು, 5,842 ಮಹಿಳೆಯರು ಹಾಗೂ ಇತರೆ ಒಬ್ಬರು ಸೇರಿ 11,712 ಮತದಾರರಿದ್ದಾರೆ. ಈ ಚುನಾವಣೆಯಲ್ಲಿ ಇವಿಎಂ ಮತಯಂತ್ರಗಳನ್ನು ಬಳಸಲಾಗುತ್ತಿದೆ. ಮತಯಂತ್ರಗಳನ್ನು ಪ್ರಥಮ ಹಂತದ ತಪಾಸಣೆ ನಡೆಸಿ ತಹಶೀಲ್ದಾರ್‌ ಸುಪರ್ದಿಗೆ ಕಳುಹಿಸಲಾಗುವುದು. ಈ ಚುನಾವಣೆಯಲ್ಲಿ ವಿ.ವಿ.ಪ್ಯಾಟ್ ಇರುವುದಿಲ್ಲ. ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್ ಮಾತ್ರ ಬಳಸಲಾಗುವುದು’ ಎಂದರು.

ADVERTISEMENT

‘ಜುಲೈ 29ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು. ನಂತರ, ಆಗಸ್ಟ್ 5ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಚುನಾವಣೆಗೆ ಸ್ಪರ್ಧಿಸುವ ಸಾಮಾನ್ಯ ಅಭ್ಯರ್ಥಿಯು ₹ 1 ಸಾವಿರ ಹಾಗೂ ಹಿಂದುಳಿದ ವರ್ಗ, ಪರಿಶಿಷ್ಟ ಸಮುದಾಯ, ಮಹಿಳಾ ಅಭ್ಯರ್ಥಿಯು ₹ 500 ಮೊತ್ತದ ಠೇವಣಿ ಸಲ್ಲಿಸಬೇಕು’ ಎಂದರು.

‘‌ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಗರಿಷ್ಠ ₹ 1 ಲಕ್ಷ ವೆಚ್ಚಕ್ಕೆ ಅವಕಾಶವಿದೆ. ರಟ್ಟಿಹಳ್ಳಿ ಕೃಷಿ ಇಲಾಖೆ ಕಟ್ಟಡದಲ್ಲಿ ಚುನಾವಣಾ ಕಚೇರಿ ಆರಂಭಿಸಲಾಗಿದ್ದು, ಅಭ್ಯರ್ಥಿಗಳು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬಹುದು’ ಎಂದು ಹೇಳಿದರು.

ಮಸ್ಟರಿಂಗ್–ಡಿಮಸ್ಟರಿಂಗ್, ಮತ ಎಣಿಕೆ: ‘ರಟ್ಟೀಹಳ್ಳಿಯ ತರಳಬಾಳು ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮಸ್ಟರಿಂಗ್, ಡಿ-ಮಸ್ಟರಿಂಗ್ ಹಾಗೂ ಮತ ಎಣಿಕೆ ಕಾರ್ಯ ಜರುಗಲಿದೆ’ ಎಂದರು.

‘ಆಗಸ್ಟ್ 17ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನವಿದೆ. ಆಗಸ್ಟ್ 20ರಂದು ಮತ ಎಣಿಕೆ ನಡೆಯಲಿದೆ. 92 ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಅವರಿಗೆ ತರಬೇತಿ ನೀಡಲಾಗುತ್ತಿದೆ. ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಎಲ್ಲ ಕಡೆಯೂ ಪೊಲೀಸರ ಬಿಗಿ ಭದ್ರತೆ ಇರಲಿದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಎಲ್., ಚುನಾವಣಾ ತಹಶೀಲ್ದಾರ್ ಅಮೃತಗೌಡ ಪಾಟೀಲ ಇದ್ದರು.

ಚುನಾವಣಾ ವೇಳಾಪಟ್ಟಿ ಅಧಿಸೂಚನೆ ಪ್ರಕಟ; ಜುಲೈ 29 ನಾಮಪತ್ರ ಸಲ್ಲಿಕೆಗೆ ಕೊನೆ ದಿನ: ಆಗಸ್ಟ್ 5 ನಾಮಪತ್ರ ಪರಿಶೀಲನೆ: ಆಗಸ್ಟ್ 6 ನಾಪಪತ್ರ ವಾಪಸ್‌ಗೆ ಕೊನೆ ದಿನ: ಆಗಸ್ಟ್ 8 ಮತದಾನ ದಿನ; ಆಗಸ್ಟ್ 17 (ಬೆಳಿಗ್ಗೆ 7ರಿಂದ ಸಂಜೆ 5) ಮರುಮತದಾನ (ಅವಶ್ಯವಿದ್ದಲ್ಲಿ); ಆಗಸ್ಟ್ 19 ಮತ ಎಣಿಕೆ: ಆಗಸ್ಟ್ 20 (ಬೆಳಿಗ್ಗೆ 8 ಗಂಟೆಯಿಂದ)

ಚುನಾವಣಾಧಿಕಾರಿಗಳ ನೇಮಕ 

ವಾರ್ಡ್ ನಂ. 1ರಿಂದ 8: ಹಿರೇಕೆರೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ.ಮಹಾದೇವ (99019 12980) ವಾರ್ಡ್ ನಂ. 9ರಿಂದ 15: ಹಿರೇಕೆರೂರ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಗಂಗರಾಜು (78928 14438)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.