ADVERTISEMENT

ಹಾವೇರಿ: ವಿಜ್ಞಾನ ಉಪ ಕೇಂದ್ರಕ್ಕೆ ‘ಪ್ರಾದೇಶಿಕ’ ಸ್ಥಾನ?

ಸಂತೋಷ ಜಿಗಳಿಕೊಪ್ಪ
Published 1 ನವೆಂಬರ್ 2025, 3:04 IST
Last Updated 1 ನವೆಂಬರ್ 2025, 3:04 IST
ಹಾವೇರಿ ದೇವಗಿರಿಯಲ್ಲಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ತಾರಾಲಯ
ಹಾವೇರಿ ದೇವಗಿರಿಯಲ್ಲಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ತಾರಾಲಯ   

ಹಾವೇರಿ: ವಿಜ್ಞಾನದ ವಿಸ್ಮಯಗಳು, ಸೌರವ್ಯೂಹದ ಚಲನವಲನ, ಬಾಹ್ಯಾಕಾಶದ ಕಾರ್ಯವೈಖರಿ, ವಿಪತ್ತು ನಿರ್ವಹಣೆ ಕಲೆ, ಭೌತ ವಿಜ್ಞಾನ–ಜೀವವಿಜ್ಞಾನ–ಗಣಿತದ ಪ್ರಯೋಗಗಳು... ಹೀಗೆ ಹಲವು ವಿಜ್ಞಾನದ ವಿಷಯಗಳ ದರ್ಶನ ಮಾಡಿಸುತ್ತಿರುವ ಹಾವೇರಿಯ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ‘ಪ್ರಾದೇಶಿಕ’ ಕೇಂದ್ರವನ್ನಾಗಿ ಮಾಡಲು ಪ್ರಕ್ರಿಯೆ ಆರಂಭವಾಗಿದೆ.

ಬೆಂಗಳೂರಿನಲ್ಲಿರುವ ವಿಶ್ವೇಶ್ವರಯ್ಯ ಮ್ಯೂಸಿಯಂ, ನೆಹರೂ ತಾರಾಲಯ ರೀತಿಯಲ್ಲಿಯೇ ಧಾರವಾಡ ಸೇರಿದಂತೆ ಹಲವು ಕಡೆಗಳಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಹಾವೇರಿ ಜಿಲ್ಲೆಯ ವಿದ್ಯಾರ್ಥಿಗಳಿಗೂ ವಿಜ್ಞಾನ ವಿಷಯಗಳ ಕಲಿಕೆ ಹಾಗೂ ಪ್ರಯೋಗಗಳ ನೇರ ಅನುಭವ ನೀಡುವ ಉದ್ದೇಶದಿಂದ ದೇವಗಿರಿಯಲ್ಲಿ 'ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ’ವನ್ನು ಸ್ಥಾಪಿಸಲಾಗಿದೆ.

ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲಿಯೇ ಸುಮಾರು 9 ಎಕರೆ ಜಾಗವನ್ನು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ನೀಡಲಾಗಿದೆ. ಇದೇ ಜಾಗದ ಒಂದೂವರೆ ಎಕರೆ ಪ್ರದೇಶದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕಟ್ಟಡ ನಿರ್ಮಿಸಲಾಗಿದೆ. 2024ರ ಫೆಬ್ರುವರಿಯಲ್ಲಿ ಈ ಕೇಂದ್ರ ಉದ್ಘಾಟನೆಯಾಗಿದ್ದು, ಅಂದಿನಿಂದ ಇಂದಿನವರೆಗೂ ಮಕ್ಕಳು ಹಾಗೂ ದೊಡ್ಡವರಿಗೆ ವಿಜ್ಞಾನದ ಅಚ್ಚರಿ ಹಾಗೂ ಪ್ರಯೋಗಗಳ ನೇರ ದರ್ಶನ ಮಾಡಿಸುತ್ತಿದೆ.

ADVERTISEMENT

ಉಪ ಕೇಂದ್ರವೆಂಬ ಕಾರಣಕ್ಕೆ ವಿಸ್ತರಣೆಗೆ ಅಡ್ಡಿಯಾಗುತ್ತಿದೆ. ಸೌಕರ್ಯ ಹಾಗೂ ನಿರ್ವಹಣೆಯಲ್ಲೂ ಆಡಳಿತಾತ್ಮಕ ಸಮಸ್ಯೆಗಳು ಎದುರಾಗುತ್ತಿವೆ. ಇದೇ ಕಾರಣಕ್ಕೆ ಕೇಂದ್ರವನ್ನು ಪ್ರಾದೇಶಿಕ ಕೇಂದ್ರವನ್ನಾಗಿ ಮಾಡಲು ಜಿಲ್ಲಾಡಳಿತ ತಯಾರಿ ನಡೆಸುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಪ್ರಾದೇಶಿಕ ಕೇಂದ್ರಕ್ಕೆ ಸಚಿವರ ಸಲಹೆ: ಹಾವೇರಿಗೆ ಕೆಲ ತಿಂಗಳ ಹಿಂದೆಯಷ್ಟೇ ಬಂದಿದ್ದ ವಿಜ್ಞಾನ–ತಂತ್ರಜ್ಞಾನ ಸಚಿವ ಎನ್‌.ಎಸ್‌.ಬೋಸರಾಜು ಅವರು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿದ್ದರು. ಕೇಂದ್ರದ ನಿರ್ವಹಣೆ ಹಾಗೂ ಲಭ್ಯವಿರುವ ಜಾಗವನ್ನು ನೋಡಿದ್ದರು. ಉಪ ಕೇಂದ್ರವನ್ನು ಪ್ರಾದೇಶಿಕ ಕೇಂದ್ರವನ್ನಾಗಿ ಮಾಡಲು ಪ್ರಕ್ರಿಯೆ ಆರಂಭಿಸುವಂತೆ ಜಿಲ್ಲಾಡಳಿತದ ಅಧಿಕಾರಿಗಳಿಗೆ ಸಲಹೆ ನೀಡಿದ್ದರು.

ಸಚಿವರ ಸಲಹೆ ನಂತರ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಪ್ರಾದೇಶಿಕ ಕೇಂದ್ರದ ಮಾನ್ಯತೆ ಪಡೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ಬರ್ಗೆ ಚರ್ಚೆಯೂ ನಡೆದಿದೆ. ಪ್ರಸ್ತಾವ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಉಪ ಪ್ರಾದೇಶಿಕ ಕೇಂದ್ರದಲ್ಲಿ ಹೆಸರಿಗೆ ತಕ್ಕಂತೆ ವಿಜ್ಞಾನಗಳ ಪರಿಕರಗಳು ಸೀಮಿತ ಪ್ರಮಾಣದಲ್ಲಿವೆ. ಗಣಿತ, ಜೀವ ವಿಜ್ಞಾನ ವಿಷಯದ ಪರಿಕರಗಳ ಕೊರತೆಯಿದೆ. ಜೊತೆಗೆ, ಸೀಮಿತ ಜಾಗದಲ್ಲಿ ಕಡಿಮೆ ಪ್ರಯೋಗಗಳನ್ನು ತೋರಿಸಲಾಗಿದೆ. ಪ್ರಾದೇಶಿಕ ಕೇಂದ್ರವಾದರೆ, ಮತ್ತಷ್ಟು ವಿಜ್ಞಾನ ಮಾದರಿಗಳು ಬರಲಿವೆ. ಕೇಂದ್ರದ ವಿಸ್ತರಣೆಯೂ ಆಗಲಿದ್ದು, ಮಾದರಿ ವಿಜ್ಞಾನ ಕೇಂದ್ರ ಎನಿಸಿಕೊಳ್ಳಲಿದೆ.

ಮಕ್ಕಳ ನೆಚ್ಚಿನ ತಾಣ: ದೇವಗಿರಿಯಲ್ಲಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವು ಮಕ್ಕಳ ನೆಚ್ಚಿನ ಕೇಂದ್ರವಾಗಿ ಮಾರ್ಪಟ್ಟಿದೆ. ಮಂಗಳವಾರ ಹೊರತುಪಡಿಸಿ ಉಳಿದೆಲ್ಲ ದಿನವೂ ಬೆಳಿಗ್ಗೆ 10 ಗಂಟೆಯಿಂದ 5 ಗಂಟೆಯವರೆಗೂ ತೆರೆಯುವ ಕೇಂದ್ರಕ್ಕೆ ನಿತ್ಯವೂ 10ರಿಂದ 25 ಮಂದಿ ಬಂದು ಹೋಗುತ್ತಾರೆ. ರಜಾ ದಿನಗಳಲ್ಲಿ ದಿನಕ್ಕೆ 50ರಿಂದ 200ವರೆಗೂ ಶಾಲಾ ಮಕ್ಕಳು ಭೇಟಿ ನೀಡುತ್ತಾರೆ.

ಕೇಂದ್ರದಲ್ಲಿ ಏನಿದೆ: ಸುಸಜ್ಜಿತ ಕಟ್ಟಡದಲ್ಲಿ ಕೇಂದ್ರವನ್ನು ನಿರ್ಮಿಸಲಾಗಿದ್ದು, ₹10 (ಮಕ್ಕಳು) ಹಾಗೂ ₹ 20 (ವಯಸ್ಕರು) ಪ್ರವೇಶ ಶುಲ್ಕವಿದೆ. ಕೇಂದ್ರದ ಹೊರಭಾಗದಲ್ಲಿ ವಿಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡಿದ ಎಸ್. ಚಂದ್ರಶೇಖರ್, ರಾಮಾನುಜನ್, ಅಬ್ದುಲ್ ಕಲಾಂ, ರಾಕೇಶ್ ಶರ್ಮಾ, ಆರ್ಯಭಟ್, ಭಾಸ್ಕರ್, ಚರಕ ಸೇರಿದಂತೆ ಹಲವು ಸಾಧಕರ ಕಲಾಕೃತಿಗಳಿವೆ.

ಕೇಂದ್ರದೊಳಗೆ ಕಾಲಿಡುತ್ತಿದ್ದಂತೆ ಭೌತ ವಿಜ್ಞಾನ, ತಕ್ಕಮಟ್ಟಿಗೆ ಗಣಿತ–ಜೀವ ವಿಜ್ಞಾನದ ಪರಿಕರಗಳು (ಆಟದೊಂದಿಗೆ ಪಾಠ) ಕಾಣಸಿಗುತ್ತವೆ. ಇಸ್ರೊ ಇತಿಹಾಸ, ಬಾಹ್ಯಾಕಾಶದ ಕಾರ್ಯವೈಖರಿ ದರ್ಶನವಾಗುತ್ತದೆ. ತಾರಾಲಯವೆಂಬ ಪ್ರತ್ಯೇಕ ಕೊಠಡಿಯಿದ್ದು, 15 ನಿಮಿಷಗಳ ಪ್ರದರ್ಶನವೂ ಇದೆ. ಭೂಕಂಪನ, ಜ್ವಾಲಾಮುಖಿ ಸೇರಿದಂತೆ ಎಲ್ಲ ಬಗೆಯ ವಿಪತ್ತು ನಿರ್ವಹಣೆಯ ಮಾಹಿತಿಯಿದೆ.

ಪ್ರತಿ ತಿಂಗಳು ಕೇಂದ್ರದಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ. ಜಿಲ್ಲೆಯ ಶಾಲೆಗಳಲ್ಲಿಯೂ ಕೇಂದ್ರದ ಸಿಬ್ಬಂದಿ ಕಾರ್ಯಕ್ರಮ ಮಾಡಿ, ವಿದ್ಯಾರ್ಥಿಗಳಿಗೆ ವಿಜ್ಞಾನದ ತಿಳಿವಳಿಕೆ ಮೂಡಿಸುತ್ತಿದ್ದಾರೆ.

‘ನಾಮಫಲಕ ಹಾಕಿ’

‘ಕೇಂದ್ರಕ್ಕೆ ಹೋಗಿಬರಲು ರಸ್ತೆ ಸಮಸ್ಯೆಯಿದ್ದು ದಾರಿ ತೋರಲು ನಾಮಫಲಕವಿಲ್ಲ. ಕೇಂದ್ರದ ಸುತ್ತಲೂ ನಿರ್ಜನ ಪ್ರದೇಶವಿರುವುದರಿಂದ ಮಕ್ಕಳನ್ನು ಕರೆದುಕೊಂಡು ಹೋಗಿಬರಲು ಭಯವಾಗುತ್ತದೆ. ಹೀಗಾಗಿ ನಿರ್ಜನ ಪ್ರದೇಶವನ್ನು ಸ್ವಚ್ಛಗೊಳಿಸಿ ದಾರಿ ಮಾಡಬೇಕು’ ಎಂದು ಪೋಷಕರು ಆಗ್ರಹಿಸಿದರು. ‘ಕೇಂದ್ರದಲ್ಲಿ ಸುಸಜ್ಜಿತ ಗ್ರಂಥಾಲಯ ಬೇಕು. ಇದರಿಂದಾಗಿ ಮಕ್ಕಳಿಗೆ ಶಾಲೆಯಲ್ಲಿ ಸಿಗದ ವಿಜ್ಙಾನ ಪುಸ್ತಕಗಳನ್ನು ಓದಲು ಲಭ್ಯವಾಗುತ್ತದೆ. ಕೇಂದ್ರವನ್ನು ಮತ್ತಷ್ಟು ವಿಸ್ತರಣೆ ಮಾಡಿ ವಿಜ್ಞಾನದ ಪ್ರತಿಯೊಂದು ವಿಷಯವೂ ಇರುವಂತೆ ನೋಡಿಕೊಳ್ಳಬೇಕು’ ಎಂದು ಕೋರಿದರು.

ಹಾವೇರಿಯ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಪ್ರಾದೇಶಿಕ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವ ಉದ್ದೇಶವಿದೆ. ಪ್ರಸ್ತಾವ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವ ಬಗ್ಗೆ ಜಿಲ್ಲಾಧಿಕಾರಿ ಜೊತೆ ಚರ್ಚಿಸಲಾಗಿದೆ
- ಮೋಹನ ದಂಡಿನ ಕೇಂದ್ರದ ಉಸ್ತುವಾರಿ
ಹಾವೇರಿ ದೇವಗಿರಿಯಲ್ಲಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ತಾರಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.