ADVERTISEMENT

86ನೇ ನುಡಿಜಾತ್ರೆಗೆ 86 ಕೃತಿಗಳ ಬಿಡುಗಡೆ

ಹಾವೇರಿ ಜಿಲ್ಲೆಯ ದಾರ್ಶನಿಕರು, ಸಂತರು, ಸಾಹಿತಿಗಳ ಬಗ್ಗೆ 37 ಪುಸ್ತಕಗಳು

ಸಿದ್ದು ಆರ್.ಜಿ.ಹಳ್ಳಿ
Published 5 ಜನವರಿ 2023, 14:38 IST
Last Updated 5 ಜನವರಿ 2023, 14:38 IST
86ನೇ ನುಡಿಜಾತ್ರೆಯ ಅಂಗವಾಗಿ ಬಿಡುಗಡೆಗೆ ಸಿದ್ಧಗೊಂಡಿರುವ ‘ಏಲಕ್ಕಿ ಹಾರ’ ಸ್ಮರಣ ಸಂಚಿಕೆಯ ಮುಖಪುಟ 
86ನೇ ನುಡಿಜಾತ್ರೆಯ ಅಂಗವಾಗಿ ಬಿಡುಗಡೆಗೆ ಸಿದ್ಧಗೊಂಡಿರುವ ‘ಏಲಕ್ಕಿ ಹಾರ’ ಸ್ಮರಣ ಸಂಚಿಕೆಯ ಮುಖಪುಟ    

ಹಾವೇರಿ: ಜನವರಿ 6ರಿಂದ 8ರವರೆಗೆ ನಗರದಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 86 ಕೃತಿಗಳನ್ನು ಕನ್ನಡ ಸಾಹಿತ್ಯ ಪರಿಷತ್‌ ಬಿಡುಗಡೆ ಮಾಡುತ್ತಿರುವುದು ಈ ಬಾರಿಯ ವಿಶೇಷವಾಗಿದೆ.

‘ಸಂತರ ನಾಡು–ಭಾವೈಕ್ಯದ ಬೀಡು’ ಎಂದೇ ಹೆಸರಾಗಿರುವ ಹಾವೇರಿ ಜಿಲ್ಲೆಗೆ ಸಂಬಂಧಿಸಿದಂತೆ 37 ಕೃತಿಗಳನ್ನು ಹೊರತರಲಾಗುತ್ತಿದೆ. ಉಳಿದ 49 ಕೃತಿಗಳು ನಾಡು–ನುಡಿಗೆ ಸಂಬಂಧಿಸಿದ್ದು, ಅವುಗಳಲ್ಲಿ 15 ಹೊಸ ಮತ್ತು 34 ಮರುಮುದ್ರಣಗೊಳ್ಳುತ್ತಿರುವ ಕೃತಿಗಳಾಗಿವೆ.

‘ಕುಲದ ಮೂಲವೇನು ಬಲ್ಲಿನೇರಯ್ಯ?’ ಎಂದು ಕೇಳಿದ ಕನಕದಾಸ, ಭಾವೈಕ್ಯದ ತತ್ವಪದ ಹಾಡಿದ ಶಿಶುನಾಳ ಶರೀಫ, ಜನಸಮುದಾಯದ ವಿವೇಕ ತಿದ್ದಿದ ಸರ್ವಜ್ಞ ಮುಂತಾದ ದಾರ್ಶನಿಕರ ಪರಿಚಯದ ಕೃತಿಗಳನ್ನು ಸಿದ್ಧಪಡಿಸಲಾಗಿದೆ. ಹಾವೇರಿ ನೆಲದವರೇ ಆದ ಹೊಸಮನಿ ಸಿದ್ದಪ್ಪ, ಮೈಲಾರ ಮಹದೇವಪ್ಪ, ಸಂಗೂರ ಕರಿಯಪ್ಪನವರ ಸ್ವಾತಂತ್ರ್ಯ ಹೋರಾಟದ ಕಥಾನಕದ ಮೇಲೆಯೂ ಬೆಳಕು ಚೆಲ್ಲಲಾಗಿದೆ.

ADVERTISEMENT

ಸಾಹಿತ್ಯ ದೀಪಗಳು:

ಕಾದಂಬರಿ ಪಿತಾಮಹ ಗಳಗನಾಥ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿ.ಕೃ.ಗೋಕಾಕ್‌, ಕನ್ನಡದ ಸಾಕ್ಷಿಪ್ರಜ್ಞೆಯಾಗಿದ್ದ ಪಾಟೀಲ ಪುಟ್ಟಪ್ಪ, ಚಂದ್ರಶೇಖರ ಪಾಟೀಲ, ಶಾಂತಕವಿ, ಜಿ.ಎಸ್‌.ಆಮೂರ, ಸು.ರಂ.ಯಕ್ಕುಂಡಿ ಸೇರಿದಂತೆ ಕನ್ನಡ ಸಾಹಿತ್ಯ ಚರಿತ್ರೆಗೆ ದೀಪ ಹಚ್ಚಿಟ್ಟ ಹಾವೇರಿಯ ಮಹನೀಯರ ಕುರಿತು ಕೃತಿಗಳು ಹೊರಬರುತ್ತಿವೆ.

ಗಾನ ಗಾರುಡಿಗರು:

ಜಗದ ಕಣ್ಣು ತೆರೆಸಿದ ಪಂಚಾಕ್ಷರಿ ಗವಾಯಿ, ಪುಟ್ಟರಾಜ ಕವಿಗವಾಯಿ, ವಿದುಷಿ ಗಂಗೂಬಾಯಿ ಹಾನಗಲ್‌, ಸೋನುಬಾಯಿ ದೊಡ್ಡಮನಿ, ಜುಬೇದಾಬಾಯಿ ಸವಣೂರು ಇವರು ಹಾವೇರಿಯನ್ನು ಗಾನ ಭೂಮಿಯನ್ನಾಗಿಸಿದವರು. ತ್ರಿವಿಧ ದಾಸೋಹ ಪರಂಪರೆ ಸೃಷ್ಟಿಸಿದ ಹಾನಗಲ್ಲಿನ ಕುಮಾರಸ್ವಾಮಿಗಳು, ಹುಕ್ಕೇರಿಮಠದ ಶಿವಬಸವ ಸ್ವಾಮೀಜಿ, ಸಿಂದಗಿಮಠದ ಶಾಂತವೀರ ಪಟ್ಟಾಧ್ಯಕ್ಷರ ಪರಿಚಯದ ಕೃತಿಗಳು ಬಿಡುಗಡೆಯಾಗಲಿವೆ.

‘ಶಿಲ್ಪ‍ ಕ್ರಾಂತಿಯ ಮೂಲಕ ದೇಸಿ ಸಂಸ್ಕತಿ ಎತ್ತಿ ಹಿಡಿದ ಕಲಾತಪಸ್ವಿ ಡಾ.ಟಿ.ಬಿ.ಸೊಲಬಕ್ಕನವರ, ಅಕ್ಷರ ಕ್ರಾಂತಿ ಮಾಡಿದ ಅರಟಾಳ ರುದ್ರಗೌಡರ, ಇತಿಹಾಸ ಸಂಶೋಧಕ ನಾ.ಶ್ರೀ ರಾಜಪುರೋಹಿತ, ಹಾವೇರಿ ಜಿಲ್ಲಾ ರಚನೆಯ ಹೋರಾಟಗಾರ ಸಿದ್ದಣ್ಣ ಚೌಶೆಟ್ಟಿ ಸೇರಿದಂತೆ ಹಾವೇರಿ ನೆಲದ ಚೇತನಗಳ ಬಗ್ಗೆ ಅಕ್ಷರದ ಹಣತೆ ಹಚ್ಚಲಾಗಿದೆ’ ಎಂದು ಹಾವೇರಿ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ ತಿಳಿಸಿದರು.

ತಾಲ್ಲೂಕುಗಳ ದರ್ಶನ:

‘ಹಾವೇರಿ ಜಿಲ್ಲೆಯ 8 ತಾಲ್ಲೂಕುಗಳ ದರ್ಶನಗಳ ಕೃತಿಗಳಲ್ಲಿ ತಾಲ್ಲೂಕಿನ ಭೌಗೋಳಿಕ ಚಿತ್ರಣ, ಜನಸಂಖ್ಯೆ ಹಾಗೂ ಅಲ್ಲಿನ ವಿಶೇಷಗಳನ್ನು ಕಟ್ಟಿಕೊಡಲಾಗಿದೆ. ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇಗೌಡರ ಕಾವ್ಯ ವಿಮರ್ಶೆ ಕುರಿತು ಸಮ್ಮೇಳನದಲ್ಲಿ ಕೃತಿ ಬಿಡುಗಡೆಯಾಗುತ್ತಿರುವುದು ವಿಶೇಷ. ಅಷ್ಟೇ ಅಲ್ಲ, ಮದಗ ಮಾಸೂರು ಕೆರೆ, ಸವಣೂರು ಸಂಸ್ಥಾನ, ಹಾವನೂರು ಸಂಸ್ಥಾನ, ಅಗಡಿಯ ಆನಂದವನಗಳ ಬಗ್ಗೆಯೂ ಕೃತಿ ರಚಿಸಲಾಗಿದೆ’ ಎಂದು ಸಾಹಿತಿ ಸತೀಶ ಕುಲಕರ್ಣಿ ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತಂದೆ ಮಾಜಿ ಮುಖ್ಯಮಂತ್ರಿ ಎಸ್‌.ಆರ್‌.ಬೊಮ್ಮಾಯಿ ಹಾಗೂ ರಾಜಕೀಯ ಧುರೀಣ ಸಿ.ಎಂ.ಉದಾಸಿ ಬಗ್ಗೆಯೂ ಕೃತಿಗಳು ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಬಿಡುಗಡೆಯಾಗಲಿವೆ.

‘ಏಲಕ್ಕಿ ಹಾರ’ ಸ್ಮರಣ ಸಂಚಿಕೆ

‘86ನೇ ನುಡಿಜಾತ್ರೆಯ ಸವಿನೆನಪಿಗಾಗಿ 500 ಪುಟಗಳ ‘ಏಲಕ್ಕಿ ಹಾರ’ ಶೀರ್ಷಿಕೆಯ ಸ್ಮರಣ ಸಂಚಿಕೆಯನ್ನು ಹೊರತರಲಾಗುತ್ತಿದೆ. ಇದರಲ್ಲಿ ನಾಲ್ಕು ಭಾಗಗಳಿವೆ. ಹಾರ–1ರಲ್ಲಿ ಗಣ್ಯರ ಶುಭ ಸಂದೇಶ. ಹಾರ–2ರಲ್ಲಿ ಕನ್ನಡ–ಕನ್ನಡಿಗ–ಕರ್ನಾಟಕ ಪರಿಕಲ್ಪನೆಯಡಿ ವಿದ್ವಾಂಸರಿಂದ ಲೇಖನಗಳು. ಹಾರ–3ರಲ್ಲಿ ಹಾವೇರಿ ಸಾಹಿತ್ಯ ಪರಂಪರೆ ಹಾಗೂ ಹಾರ–4ರಲ್ಲಿ ಸಮ್ಮೇಳನಗಳ ಆಯ್ದ ಸಾಂದರ್ಭಿಕ ಚಿತ್ರಸಂಪುಟವನ್ನು ಅಳವಡಿಸಲಾಗಿದೆ’ ಎಂದು ಸ್ಮರಣ ಸಂಚಿಕೆಯ ಸಂಪಾದಕ ನಾಗರಾಜ ದ್ಯಾಮನಕೊಪ್ಪ ತಿಳಿಸಿದ್ದಾರೆ.

***

ತಲಾ 70–80 ಪುಟಗಳ ಈ ಕೃತಿಗಳನ್ನು ಸಾಮಾನ್ಯ ಓದುಗ ಮತ್ತು ವಿದ್ಯಾರ್ಥಿಗಳ ದೃಷ್ಟಿಯಿಂದ ರಚಿಸಲಾಗಿದೆ. ನಾಡಿನ ಹೊಸ ಪೀಳಿಗೆಗೆ ಉತ್ತಮ ಆಕರಗಳಾಗಲಿವೆ
– ಸತೀಶ ಕುಲಕರ್ಣಿ, ಸಾಹಿತಿ, ಹಾವೇರಿ

***

ಸಮ್ಮೇಳನದ ಆತಿಥ್ಯ ವಹಿಸಿರುವ ಹಾವೇರಿ ಜಿಲ್ಲೆಯ ಬಗ್ಗೆ 37 ಕೃತಿಗಳು ಬಿಡುಗಡೆಯಾಗುತ್ತಿವೆ. ಈ ನೆಲದ ಇತಿಹಾಸ, ಸಂಸ್ಕೃತಿ, ಅಸ್ಮಿತೆಯ ಬಗ್ಗೆ ಬೆಳಕು ಚೆಲ್ಲಿದ್ದೇವೆ
– ಮಹೇಶ ಜೋಶಿ, ಕಸಾಪ ಅಧ್ಯಕ್ಷ

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.