ADVERTISEMENT

ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ನಿರ್ಣಯ

ಹಾವೇರಿ ನಗರಸಭೆಯ ಸಾಮಾನ್ಯ ಸಭೆ: ಹೈಟೆಕ್‌ ರಂಗಮಂದಿರ ಬಾಡಿಗೆಗೆ ಕೊಡಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 15:40 IST
Last Updated 10 ಆಗಸ್ಟ್ 2022, 15:40 IST
ಹಾವೇರಿ ನಗರಸಭೆ ಸಭಾಂಗಣದಲ್ಲಿ ಬುಧವಾರ  ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿದರು. ಶಾಸಕ ನೆಹರು ಓಲೇಕಾರ, ಪ್ರಭಾರ ಪೌರಾಯುಕ್ತ ಶಿವಾನಂದ ಉಳ್ಳಾಗಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಚಿನ್‌ ಡಂಬಳ ಇದ್ದಾರೆ  –ಪ್ರಜಾವಾಣಿ ಚಿತ್ರ 
ಹಾವೇರಿ ನಗರಸಭೆ ಸಭಾಂಗಣದಲ್ಲಿ ಬುಧವಾರ  ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿದರು. ಶಾಸಕ ನೆಹರು ಓಲೇಕಾರ, ಪ್ರಭಾರ ಪೌರಾಯುಕ್ತ ಶಿವಾನಂದ ಉಳ್ಳಾಗಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಚಿನ್‌ ಡಂಬಳ ಇದ್ದಾರೆ  –ಪ್ರಜಾವಾಣಿ ಚಿತ್ರ    

ಹಾವೇರಿ: ನಿಗದಿತ ಕಾಲಮಿತಿಯಲ್ಲಿ 24x7 ಕುಡಿಯುವ ನೀರಿನ ಯೋಜನೆ ಮತ್ತು ಒಳಚರಂಡಿ (ಯುಜಿಡಿ) ಕಾಮಗಾರಿಗಳನ್ನು ಪೂರ್ಣಗೊಳಿಸದ ಕಾರಣ, ಎರಡೂ ಯೋಜನೆಗಳ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.

ಹಾವೇರಿ ನಗರಸಭೆಯ ಸಭಾಂಗಣದಲ್ಲಿ ಬುಧವಾರ ಶಾಸಕ ನೆಹರು ಓಲೇಕಾರ ಮತ್ತು ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಾಮಾನ್ಯ ಸಭೆ ನಡೆಯಿತು.

24x7 ಕುಡಿಯುವ ನೀರಿನ ಯೋಜನೆಯ ಗುತ್ತಿಗೆದಾರರಾದ ಹರಿಯಾಣದ ಎಸ್‌ಪಿಎಂಎಲ್‌ ಇನ್‌ಫ್ರಾ ಲಿಮಿಟೆಡ್‌ ಕಂಪನಿಹಾಗೂ ಯುಜಿಡಿ ಕಾಮಗಾರಿಯ ಗುತ್ತಿಗೆದಾರರಾದ ಮೈಸೂರಿನ ಶ್ರೀ ಗುರು ರಾಘವೇಂದ್ರ ಎಂಟರ್‌ಪ್ರೈಸಸ್‌ ಎರಡೂ ಸಂಸ್ಥೆಗಳು 2018ರಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕಿತ್ತು. ಆದರೆ, ನಾಲ್ಕು ವರ್ಷಗಳು ಕಳೆದರೂ ಯೋಜನೆ ಪೂರ್ಣಗೊಳ್ಳದ ಕಾರಣ ಸದಸ್ಯರು ಕಿಡಿಕಾರಿ, ಕ್ರಮ ಕೈಗೊಳ್ಳಲು ಆಗ್ರಹಿಸಿದರು.

ADVERTISEMENT

24X7 ಕುಡಿಯುವ ನೀರಿನ ಯೋಜನೆಯ ಕಾರ್ಯಾಚರಣೆ ಮತ್ತು ನಿರ್ವಹಣೆ ಹೊಣೆಯನ್ನು ಹಾವೇರಿ ನಗರಸಭೆಗೆ ವಹಿಸಿ, ಅದಕ್ಕೆ ಮೀಸಲಿಟ್ಟ ₹22 ಕೋಟಿಯಲ್ಲಿ ಹೊಸ ಟೆಂಡರ್‌ ಕರೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಜಮಾ–ಖರ್ಚಿನ ವಿವರ ನೀಡಿ:

ಜನವರಿ 2022ರಿಂದ ಜೂನ್‌ 2022ವರೆಗೆ ಜಮಾ– ಖರ್ಚಿಗೆ ಅನುಮೋದನೆ ನೀಡುವ ಕುರಿತು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಅಂದಾಜು ₹6 ಕೋಟಿ ವೆಚ್ಚದಲ್ಲಿ ಯಾವ ಯಾವ ಕಾಮಗಾರಿಗೆ ಎಷ್ಟು ಖರ್ಚಾಗಿದೆ ಎಂಬ ವಿವರವನ್ನೇ ನೀಡಿಲ್ಲ. ಪ್ರತಿ ತಿಂಗಳು ಸಭೆ ಕರೆದರೆ ಈ ರೀತಿಯ ಗೊಂದಲಗಳು ಆಗುವುದಿಲ್ಲ. ಸದಸ್ಯರಿಗೆ ಪ್ರತಿಯೊಂದರ ವಿವರವನ್ನು ನೀಡಬೇಕು ಎಂದು ಸದಸ್ಯರಾದ ಬಾಬುಸಾಬ್‌ ಮೋಮಿನ್‌ಗಾರ್‌, ಶಿವರಾಜ ಮತ್ತಿಹಳ್ಳಿ, ಬಸವರಾಜ ಬೆಳವಡಿ ಆಗ್ರಹಿಸಿದರು. ವಾರದೊಳಗೆ ಪೂರ್ಣ ವಿವರ ನೀಡಲು ನಗರಸಭೆ ಅಧ್ಯಕ್ಷರು ಮತ್ತು ಶಾಸಕರು ಸೂಚಿಸಿದರು.

ಮರು ಟೆಂಡರ್‌ಗೆ ನಿರ್ಧಾರ:

ಹಾವೇರಿ ನಗರಸಭೆಯ ನೈರ್ಮಲ್ಯ ಶಾಖೆಯ ಘನತ್ಯಾಜ್ಯ ವಸ್ತು ನಿರ್ವಹಣೆಗಾಗಿ ಅವಶ್ಯವಿರುವ ಹೆಲ್ಪರ್‌ ಮತ್ತು ಲೋಡರ್‌ಗಳನ್ನು ಹೊರಗುತ್ತಿಗೆಯ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವ ಟೆಂಡರ್‌ ಎಸ್‌ವಿಎಸ್ ಟೆಕ್ನಾಲಜಿ ಅವರಿಗೆ ಸಿಕ್ಕಿತ್ತು. ಆದರೆ, ಅವರು ಮುಂದಿನ ಪ್ರಕ್ರಿಯೆಗೆ ಕಚೇರಿಗೆ ಬಾರದೇ ನಿರ್ಲಕ್ಷ್ಯ ತೋರಿದ ಪರಿಣಾಮ ಈಗಾಗಲೇ ಅವರಿಗೆ ನೋಟಿಸ್‌ ನೀಡಲಾಗಿದೆ ಎಂದು ಎಇಇ ಕೃಷ್ಣನಾಯ್ಕ ಸಭೆಗೆ ತಿಳಿಸಿದರು. ಅವರಿಗೆ ಮೂರ ನೋಟಿಸ್‌ ನೀಡಿ, ಮರು ಟೆಂಡ್‌ ಕರೆಯಲು ಸದಸ್ಯರು ಆಗ್ರಹಿಸಿದರು.

ಒತ್ತುವರಿ ತೆರವುಗೊಳಿಸಿ:

ನಗರಸಭೆಯ ನಿವೃತ್ತ ನೌಕರರೊಬ್ಬರುವಿದ್ಯಾನಗರದ ಪತ್ರಿಕಾ ಭವನದ ಮುಂಭಾಗದ ಒಂದೂವರೆ ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರು. ಒತ್ತುವರಿ ತೆರವುಗೊಳಿಸಿ, ಒಂದೂವರೆ ಗುಂಟೆ ಜಾಗವನ್ನು ಪತ್ರಿಕಾ ಭವನಕ್ಕೆ ನೀಡಲು ಕಳೆದ ಸಭೆಯಲ್ಲಿ ಠರಾವು ಮಾಡಲಾಗಿತ್ತು. ಆದರೆ, ಇದುವರೆಗೆ ಅಧಿಕಾರಿಗಳು ಒತ್ತುವರಿಯನ್ನು ಏಕೆ ತೆರವುಗೊಳಿಸಿಲ್ಲ. ಕೂಡಲೇ ತೆರವುಗೊಳಿಸಿ, ಆ ಜಾಗವನ್ನು ಪತ್ರಿಕಾ ಭವನಕ್ಕೆ ನೀಡಿದರೆ ಪಾರ್ಕಿಂಗ್‌ಗೆ ಅನುಕೂಲವಾಗುತ್ತದೆ ಎಂದು ಸದಸ್ಯರಾದ ಜಗದೀಶ ಮಲಗೋಡ ಮತ್ತು ಮಂಜುನಾಥ ಬಿಷ್ಟಣ್ಣನವರ ಒತ್ತಾಯಿಸಿದರು.

ಸಭೆಯಲ್ಲಿ ಪ್ರಭಾರ ಪೌರಾಯುಕ್ತ ಶಿವಾನಂದ ಉಳ್ಳಾಗಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಚಿನ್‌ ಡಂಬಳ ಹಾಗೂ ಸದಸ್ಯರು ಹಾಜರಿದ್ದರು.

ಜೆ.ಎಚ್‌.ಪಟೇಲರ ಪುತ್ಥಳಿ ಮರು ಸ್ಥಾಪನೆಗೆ ಕ್ರಮ

ಹಾವೇರಿ ಜಿಲ್ಲೆಯ ರಚನೆಗೆ ಕಾರಣಕರ್ತರಾದ ಮಾಜಿ ಮುಖ್ಯಮಂತ್ರಿ ಜೆ.ಎಚ್‌.ಪಟೇಲರ ಹೊಸ ಪುತ್ಥಳಿಯನ್ನು ಮಾಡಿಸಿ, ಜೆ.ಎಚ್.ಪಟೇಲ ವೃತ್ತದಲ್ಲಿ ಮರು ಸ್ಥಾಪಿಸಬೇಕು. ಜೊತೆಗೆ ದೇಶಕ್ಕಾಗಿ ಮಡಿದ ವೀರ ಸೈನಿಕರ ನೆನಪಿನ ಸ್ಮಾರಕವನ್ನು 3 ತಿಂಗಳೊಳಗೆ ವೃತ್ತದಲ್ಲೇ ಸ್ಥಾಪನೆ ಮಾಡಲು ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.

ಪಿಎನ್‌ಜಿ ಅಳವಡಿಸಲು ಚರ್ಚೆ

ನಗರದ ವಿವಿಧ ವಾರ್ಡ್‌ಗಳಲ್ಲಿ ಎ.ಜಿ. ಅಂಡ್‌ ಪಿ ಕಂಪನಿಯು ಮನೆ–ಮನೆಗೆ ಪೈಪ್ ಮೂಲಕ ನೈಸರ್ಗಿಕ ಅನಿಲ (ಪಿಎನ್‌ಜಿ) ವನ್ನು ಪೂರೈಸಲು ಅನುಮತಿ ನೀಡುವಂತೆ ನಗರಸಭೆಗೆ ಮನವಿ ಸಲ್ಲಿಸಿತು.

ಈಗಾಗಲೇ 24X7 ಕುಡಿಯುವ ನೀರಿನ ಯೋಜನೆ ಮತ್ತು ಯುಜಿಡಿ ಗುತ್ತಿಗೆದಾರರು ನಗರದ ರಸ್ತೆಗಳನ್ನು ಅಗೆದು ಹಾಳು ಮಾಡಿದ್ದಾರೆ. ಮತ್ತೆ ನಿಮಗೆ ಅವಕಾಶ ನೀಡಿದರೆ ನೀವು ಮತ್ತಷ್ಟು ಹಾಳು ಮಾಡುತ್ತೀರಿ. ಹಾವೇರಿ ಗ್ರಹಚಾರ ಸರಿ ಇಲ್ಲ ಎಂದು ಸದಸ್ಯ ಬಸವರಾಜ ಬೆಳವಡಿ ಆಕ್ಷೇಪ ವ್ಯಕ್ತಪಡಿಸಿದರು.

ಶಾಸಕ ನೆಹರು ಓಲೇಕಾರ ಪ್ರತಿಕ್ರಿಯಸಿ, ಹುಬ್ಬಳ್ಳಿಯಲ್ಲಿ ಬೇರೊಂದು ಕಂಪನಿಯು ಅಳವಡಿಸಿರುವ ಕಾಮಗಾರಿಯನ್ನು ನಗರಸಭಾ ಸದಸ್ಯರ ಸಮಿತಿ ಹೋಗಿ ನೋಡಿಕೊಂಡು ಬಂದ ನಂತರ ಅನುಮತಿ ನೀಡಬೇಕೋ ಬೇಡವೋ ಎಂಬುದನ್ನು ತೀರ್ಮಾನಿಸಿ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.