ADVERTISEMENT

ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಿ: ಸದಾಶಿವ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 14:35 IST
Last Updated 1 ಮಾರ್ಚ್ 2021, 14:35 IST
ಹಾವೇರಿ ನಗರದ ಸಜ್ಜನರ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ವಿದ್ಯಾನಗರ ಪಶ್ಚಿಮ ಭಾಗದ ನಾಗರಿಕರ ವೇದಿಕೆ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ ನೆಹರು ಓಲೇಕಾರ ಮತ್ತು ಹುಕ್ಕೇರಿಮಠದ ಸದಾಶಿವ ಶ್ರೀಗಳು ನೆರವೇರಿಸಿದರು. ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ ಇದ್ದಾರೆ 
ಹಾವೇರಿ ನಗರದ ಸಜ್ಜನರ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ವಿದ್ಯಾನಗರ ಪಶ್ಚಿಮ ಭಾಗದ ನಾಗರಿಕರ ವೇದಿಕೆ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ ನೆಹರು ಓಲೇಕಾರ ಮತ್ತು ಹುಕ್ಕೇರಿಮಠದ ಸದಾಶಿವ ಶ್ರೀಗಳು ನೆರವೇರಿಸಿದರು. ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ ಇದ್ದಾರೆ    

ಹಾವೇರಿ: ನಗರಸಭೆಯಂತೆ ನಾಗರಿಕ ವೇದಿಕೆಗೂ ದೊಡ್ಡ ಜವಾಬ್ದಾರಿ ಇದೆ. ಎಲ್ಲ ಸಮಸ್ಯೆಗಳಿಗೂ ನಗರಸಭೆಯನ್ನು ದೂಷಿಸುವ ಬದಲು, ಕರ್ತವ್ಯಗಳನ್ನು ಅರಿತು ನಿಯಮಬದ್ಧವಾಗಿ ಕೆಲಸ ಮಾಡಬೇಕು. ಸಹಕಾರ ಮನೋಭಾವದಿಂದ ನಾಗರಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು’ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಲಹೆ ನೀಡಿದರು.

ನಗರದ ಸಜ್ಜನರ ಸಭಾಭನದಲ್ಲಿ ಭಾನುವಾರ ಏರ್ಪಡಿಸಿದ್ದ ವಿದ್ಯಾನಗರ ಪಶ್ಚಿಮ ಭಾಗದ ನಾಗರಿಕ ವೇದಿಕೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ನಾಗರಿಕ ವೇದಿಕೆಯನ್ನು ಕೇವಲ ಸಭೆಗಳಿಗೆ ಸೀಮಿತಗೊಳಿಸದೇ ಸಮಸ್ಯೆಗಳ ಬಗ್ಗೆ ಗಮನ ನೀಡಿ ಅದನ್ನು ಪರಿಹರಿಸಿಕೊಂಡಾಗ ನಾಗರಿಕ ವೇದಿಕೆ ರಚನೆ ಸಾರ್ಥಕವಾಗುತ್ತದೆ’ ಎಂದರು.

ADVERTISEMENT

ವೇದಿಕೆ ಉದ್ಘಾಟಿಸಿ ಮಾತನಾಡಿದ ಶಾಸಕ ನೆಹರು ಓಲೇಕಾರ ಮಾತನಾಡಿ, ‘ವಿದ್ಯಾನಗರ ಪಶ್ಚಿಮ ಭಾಗದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಿ, ಈ ಭಾಗದ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ಈ ಭಾಗದ 5-6 ಉದ್ಯಾನಗಳನ್ನು ಈಗಾಗಲೇ ಅಭಿವೃದ್ಧಿ ಮಾಡಿದ್ದು, ಹಂತ–ಹಂತವಾಗಿ ರಸ್ತೆ, ಚರಂಡಿ ಅಭಿವೃದ್ಧಿ ಪಡಿಸಲಾಗುವುದು’ ಎಂದರು.

ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ ಮಾತನಾಡಿ, ‘ಮೂಲಸೌಕರ್ಯಗಳನ್ನು ಪಡೆಯಲು, ಹೋರಾಟ ಮಾಡಲು ಪ್ರತಿಯೊಬ್ಬರಿಗೂ ಹಕ್ಕಿದೆ. ನಾಗರಿಕ ವೇದಿಕೆ ಕೇವಲ ಬೇಡಿಕೆಗಳನ್ನು ಪೂರೈಸಿಕೊಳ್ಳಲು ಸೀಮಿತವಾಗದೇ ಇಲ್ಲಿನ ಜನರ ಕಷ್ಟ-ಸುಖದಲ್ಲಿ ಭಾಗಿಯಾಗಿ ಪರಸ್ಪರ ಉತ್ತಮ ಬಾಂಧವ್ಯ ವೃದ್ಧಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ವಿದ್ಯಾನಗರ ಪಶ್ಚಿಮ ಭಾಗದ ನಾಗರಿಕ ವೇದಿಕೆ ವತಿಯಿಂದ ಸದಾಶಿವ ಸ್ವಾಮೀಜಿ, ನೆಹರು ಓಲೇಕಾರ, ಸಂಜೀವಕುಮಾರ ನೀರಲಗಿ ಅವರನ್ನು ಸನ್ಮಾನಿಸಲಾಯಿತು.ನಗರಸಭೆ ಸದಸ್ಯೆ ಪೂಜಾ ಹಿರೇಮಠ, ಉದ್ಯಮಿ ರಾಜೇಂದ್ರ ಸಜ್ಜನರ, ನವಚೇತನ ಫೌಂಡೇಷನ್ ಅಧ್ಯಕ್ಷ ನಾಗೇಂದ್ರ ಮಾಳಿ, ವಿದ್ಯಾನಗರ ಪಶ್ಚಿಮ ಭಾಗದ ನಾಗರಿಕ ವೇದಿಕೆ ಗೌರವ ಅಧ್ಯಕ್ಷ ಶಂಕರಭಟ್ಟ ಜೋಷಿ, ಅಧ್ಯಕ್ಷ ಪ್ರಕಾಶ ಮಾಳದಕರ, ಉಪಾಧ್ಯಕ್ಷರಾದ ಆನಂದ ಪಾಟೀಲ, ಲಿಂಗರಾಜ ಕುನ್ನೂರ, ಪದಾಧಿಕಾರಿಗಳಾದ ಕುಮಾರ ಆಡೂರ, ಪ್ರಕಾಶ ಶೆಟ್ಟಿ, ಪ್ರಕಾಶ ರೋಣಿಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.