ADVERTISEMENT

ರಾಣೆಬೆನ್ನೂರು: ಸುಗಮ, ಶಿಸ್ತಿನ ಸಂಚಾರಕ್ಕೆ ಟೋಯಿಂಗ್‌ ವ್ಯವಸ್ಥೆ ಜಾರಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 7:34 IST
Last Updated 13 ನವೆಂಬರ್ 2025, 7:34 IST
ರಾಣೆಬೆನ್ನೂರು ಸಂಚಾರಿ ಪೊಲೀಸ್‌ ಠಾಣೆಗೆ ಪೊಲೀಸ್‌ ಟೋಯಿಂಗ್‌ ವಾಹನದ ಕೀಯನ್ನು ಶಾಸಕ ಪ್ರಕಾಶ ಕೋಳಿವಾಡ ಎಸ್‌ಪಿ ಯಶೋಧಾ ವಂಟಗೋಡಿ ಅವರಿಗೆ ಹಸ್ತಾಂತರ ಮಾಡಿದರು
ರಾಣೆಬೆನ್ನೂರು ಸಂಚಾರಿ ಪೊಲೀಸ್‌ ಠಾಣೆಗೆ ಪೊಲೀಸ್‌ ಟೋಯಿಂಗ್‌ ವಾಹನದ ಕೀಯನ್ನು ಶಾಸಕ ಪ್ರಕಾಶ ಕೋಳಿವಾಡ ಎಸ್‌ಪಿ ಯಶೋಧಾ ವಂಟಗೋಡಿ ಅವರಿಗೆ ಹಸ್ತಾಂತರ ಮಾಡಿದರು   

ರಾಣೆಬೆನ್ನೂರು: ಚಾಲಕರು ರಸ್ತೆಯಲ್ಲಿ ವಾಹನ ಚಲಾಯಿಸುವಾಗ ರಸ್ತೆಯ ಸುರಕ್ಷಿತ ನಿಯಮಗಳನ್ನು ಅನುಸರಿಸಿ ತಮ್ಮ ಜವಾಬ್ದಾರಿಯನ್ನು ಅರಿತು ನಡೆದಾಗ ಅಪಘಾತಗಳ ಸಂಖ್ಯೆ ಕಡಿಮೆ ಮಾಡಬಹುದು. ಆ ದೊಡ್ಡ ದೊಡ್ಡ ಕೈಗಾರಿಕೆಗಳು ನಗರಕ್ಕೆ ಬರಬೇಕಾದರೆ ನಗರದಲ್ಲಿನ ಶಿಸ್ತು, ಸ್ವಚ್ಛತೆ ಮತ್ತು ಟ್ರಾಫಿಕ್‌ ಜಾಗೃತಿ ಬಹಳ ಮುಖ್ಯ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ಇಲ್ಲಿನ ಹೆಸ್ಕಾಂ ಗಣೇಶ ದೇವಸ್ಥಾನದ ಆವರಣದಲ್ಲಿ ಬುಧವಾರ ಸಂಚಾರಿ ಪೊಲೀಸ್‌ ಠಾಣೆಗೆ ನೂತನವಾಗಿ ಹಂಚಿಕೆಯಾದ ಪೊಲೀಸ್‌ ಟೋಯಿಂಗ್‌ ವಾಹನವನ್ನು ಹಸ್ತಾಂತರಿಸಿ ಅವರು ಮಾತನಾಡಿದರು.

ವಾಣಿಜ್ಯ ನಗರವು ಜಿಲ್ಲೆಯಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿದ್ದು, ನಗರದಲ್ಲಿ ಸಂಚಾರ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಗುತ್ತದೆ. ಟೋಯಿಂಗ್‌ ವಾಹನ ಮತ್ತು ನಗರ ಸಂಚಾರಕ್ಕೆ ಎರಡು ಹೊಸ ವಾಹನಗಳು ಸೇರಿದಂತೆ ಬೇಡಿಕೆಗಳು ಇದ್ದವು. ಈಗ ಸದ್ಯಕ್ಕೆ ಶಾಸಕರ ಅನುದಾನದಲ್ಲಿ ಟೋಯಿಂಗ್‌ ವಾಹನ ನೀಡಲಾಗಿದೆ. ಹಂತ ಹಂತವಾಗಿ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದರು.

ADVERTISEMENT

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಮಾತನಾಡಿ, ಅನೇಕ ಅಪಘಾತಗಳು ನಮ್ಮ ತಪ್ಪಿನಿಂದಲೇ ಆಗುತ್ತವೆ. ಚಾಲಕರು ತಮ್ಮ ವಾಹನದಲ್ಲಿ ಕುಳಿತ ಕೂಡಲೇ ನಮ್ಮ ಹಿಂದಿರುವ ಕುಟುಂಬವನ್ನು ನೆನಪಿಸಿಕೊಳ್ಳಬೇಕು. ಎಲ್ಲಕ್ಕಿಂತ ಜೀವ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

ಮದ್ಯ ಸೇವಿಸಿ, ಮೊಬೈಲ್‌ನಲ್ಲಿ ಮಾತನಾಡುತ್ತಾ, ಹೆಲ್ಮೆಟ್‌ ಹಾಕದೇ ವಾಹನ ಚಾಲನೆ ಮಾಡುವುದನ್ನು ನಿಲ್ಲಿಸಬೇಕು ಎಂದು ತಾಕೀತು ಮಾಡಿದರು.

ಡಿವೈಎಸ್‌ಪಿ ಲೋಕೇಶ.ಜೆ, ಸಿಪಿಐಗಳಾದ ಎನ್‌.ಸಿ. ಕಾಡದೇವರ ಮತ್ತು ನಗರ ಠಾಣೆ ಸಿಪಿಐ ವೆಂಕಟೇಶ, ಕುಮಾರಪಟ್ಟಣ ಸಿಪಿಐ ಸಿದ್ದೇಶ, ಪೌರಾಯುಕ್ತ ಫಕ್ಕೀರಪ್ಪ ಇಂಗಳಗಿ, ಪುಟ್ಟಪ್ಪ ಮರಿಯಮ್ಮನವರ, ಇರ್ಫಾನ್‌ ದಿಡಗೂರ, ಸಂಚಾರ ಹಾಗೂ ನಗರ ಮತ್ತು ಗ್ರಾಮೀಣ ಪೊಲೀಸ್‌ ಸಿಬ್ಬಂದಿ, ಆಟೊ ಚಾಲಕರು, ಮಾಲೀಕರು, ಕರವೇ ಕಾರ್ಯಕರ್ತರು ಮತ್ತು ಕಾಲೇಜು ವಿದ್ಯಾರ್ಥಿಗಳು ಇದ್ದರು.

ಅವೈಜ್ಞಾನಿಕ ಪಾರ್ಕಿಂಗ್‌ನಿಂದ ಸಮಸ್ಯೆ

ಸಂಚಾರ ದಟ್ಟಣೆಗೆ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುವುದು ಒಂದು ಪ್ರಮುಖ ಕಾರಣವಾಗಿದೆ. ನಗರದಲ್ಲಿ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಟ್ರಾಫಿಕ್‌ ಸಮಸ್ಯೆ ಮತ್ತು ಅಪಘಾತಗಳನ್ನು ತಡೆಗಟ್ಟಲು ಮುಂದಾಗಿದ್ದೇವೆ. ಮೊದಲು ಒಂದು ವಾರ ಧ್ವನಿ ವರ್ಧಕಗಳ ಮೂಲಕ ಟ್ರಾಫಿಕ್‌ ಪೊಲೀಸರು ನಿಷೇಧ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಿದ್ದ ವಾಹನಗಳ ತೆರವಿಗೆ ಕೋರಲಾಗುತ್ತದೆ. ಆದರೂ ತೆರವುಗೊಳಿಸದಿದ್ದರೆ ವಾಹನ ಟೋಯಿಂಗ್‌ ಮಾಡಲಾಗುತ್ತದೆ ಎಂದು ಸಂಚಾರಿ ಠಾಣೆ ಪೊಲೀಸರು ಮಾಹಿತಿ ನೀಡಿದರು.

ರಾಣೆಬೆನ್ನೂರಿನಲ್ಲಿ ಜಿಲ್ಲಾ ಸಂಚಾರಿ ಠಾಣೆ ಪೊಲೀಸ್‌ ಸಿಬ್ಬಂದಿಯೊಂದಿಗೆ ಶಾಸಕ ಪ್ರಕಾಶ ಕೋಳಿವಾಡ ಅವರು ನಗರದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಮೂಲಕ ಸಂಚಾರ ಜಾಗೃತಿ ಮೂಡಿಸಿದರು
ಸಂಚಾರಿ ಪೊಲೀಸ್‌ ಠಾಣೆಗೆ ಟೋಯಿಂಗ್‌ ಹಸ್ತಾಂತರ ಹಾಗೂ ಟ್ರಾಫಿಕ್‌ ಜಾಗೃತಿ ಕಾರ್ಯಕ್ರಮಕ್ಕೆ ಶಾಸಕ ಪ್ರಕಾಶ ಕೋಳಿವಾಡ ಚಾಲನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.