ADVERTISEMENT

ಬ್ಯಾಡಗಿ | 33 ಅಡಿ ರಸ್ತೆ ವಿಸ್ತರಣೆಗೆ ಸಹಕಾರ ನೀಡಿ: ಶಾಸಕ ಬಸವರಾಜ ಶಿವಣ್ಣನವರ 

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 2:14 IST
Last Updated 20 ಅಕ್ಟೋಬರ್ 2025, 2:14 IST
<div class="paragraphs"><p>ಬಸವರಾಜ ಶಿವಣ್ಣನವರ&nbsp;</p></div>

ಬಸವರಾಜ ಶಿವಣ್ಣನವರ 

   

ಬ್ಯಾಡಗಿ: ‘ಪಟ್ಟಣದ ಮುಖ್ಯರಸ್ತೆ ಮೂಲಕ ಹಾದು ಹೋಗುವ ಸೊರಬ– ಗಜೇಂದ್ರಗಡ ರಾಜ್ಯ ಹೆದ್ದಾರಿಯನ್ನು ರಸ್ತೆ ಮಧ್ಯದಿಂದ 33 ಅಡಿ ವಿಸ್ತರಣೆ ಮಾಡಲು ಭೂ ಮಾಲೀಕರು ಸಹಕಾರ ನೀಡಬೇಕು. 33 ಅಡಿ ಜೊತೆಯಲ್ಲಿ ಅಕ್ಕ–ಪಕ್ಕದಲ್ಲಿ 6 ಮೀಟರ್ ಸೆಟ್‌ಬ್ಯಾಕ್‌ ಬಿಡಬೇಕೆಂಬ ಗೊಂದಲದ ಮಾತುಗಳಿಗೆ ಕಿವಿಗೂಡಬಾರದು’ ಎಂದು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಹೆದ್ದಾರಿ ನಿಯಮದಂತೆ 6 ಮೀಟರ್ ಸೆಟ್‌ ಬ್ಯಾಕ್‌ ಬಿಡಬೇಕೆಂಬ ಗೊಂದಲ ಸೃಷ್ಟಿಯಾಗಿದೆ. ಆದರೆ, 33 ಅಡಿಯಷ್ಟು ಮಾತ್ರ ರಸ್ತೆ ವಿಸ್ತರಣೆ ಆಗಲಿದೆ. ರಸ್ತೆ ಸಿದ್ಧವಾದ ನಂತರ, ನಿಯಮದ ಪ್ರಕಾರ ರಸ್ತೆಯು ಪುರಸಭೆ ವ್ಯಾಪ್ತಿಗೆ ಬರಲಿದೆ. ಹೆಚ್ಚು ಜಾಗ ಹೋಗುವುದಾಗಿ ತಿಳಿದಿರುವ ಮಾಲೀಕರು, ಆತಂಕಪಡುವ ಅಗತ್ಯವಿಲ್ಲ’ ಎಂದರು.

ADVERTISEMENT

‘ಸರ್ಕಾರವು ಮುಖ್ಯರಸ್ತೆ ವಿಸ್ತರಣೆ ವಿಚಾರದಲ್ಲಿ ಸ್ಪಷ್ಟನೆ ನೀಡಿದೆ. 33 ಅಡಿ ಜಾಗವನ್ನಷ್ಟೇ ಸ್ವಾಧೀನಪಡಿಸಿಕೊಂಡು ಅಭಿವೃದ್ಧಿಪಡಿಸಲಾಗುವುದು. ಅದಕ್ಕಿಂತ ಹೆಚ್ಚಿನ ಜಾಗ  ಪಡೆದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಮುಖ್ಯರಸ್ತೆ ವಿಸ್ತರಣೆಯಾಗಬಾರದು ಎನ್ನುವ ಕಾರಣಕ್ಕೆ ಕೆಲವರು 6 ಮೀಟರ್ ಸೆಟ್‌ ಬ್ಯಾಕ್‌ ಬಿಡಬೇಕೆಂಬ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ಹೇಳಿದರು.

‘ವಿಸ್ತರಣೆ ಕೆಲಸ ಅಂತಿಮ ಘಟ್ಟದಲ್ಲಿದೆ. ಕೆಲವರು ವಿಸ್ತರಣೆ  ವಿಷಯವನ್ನು ತಮ್ಮ ಮನಸ್ಸಿಗೆ ಬಂದಂತೆ ವ್ಯಾಖ್ಯಾನಿಸುತ್ತಿದ್ದಾರೆ. ವಿಸ್ತರಣೆ ವಿಳಂಬಕ್ಕೆ ಹುನ್ನಾರ ನಡೆಸಿರುವುದು ಸ್ಪಷ್ಟವಾಗಿದೆ. ಕೆಲ ಭೂ ಮಾಲೀಕರು, ಸುಖಾಸುಮ್ಮನೇ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದು ಸರಿಯಲ್ಲ. ಏನೇ ಸಮಸ್ಯೆಯಿದ್ದರೂ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕು’ ಎಂದು ಹೇಳಿದರು.

‘ನಗರದ ವ್ಯಾಪ್ತಿಯಲ್ಲಿರುವ ರಾಜ್ಯ ಹೆದ್ದಾರಿಗಳನ್ನು ನಿರ್ವಹಣೆ ಉದ್ದೇಶದಿಂದ ಸ್ಥಳೀಯ ಸಂಸ್ಥೆಗಳಿಗೆ ಸೇರ್ಪಡೆ ಮಾಡುವ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ. ಅದರನ್ವಯ ಗಜೇಂದ್ರಗಡ-ಸೊರಬ ಹೆದ್ದಾರಿಯು ಮುಂದಿನ ದಿನಗಳಲ್ಲಿ ಬ್ಯಾಡಗಿ ವ್ಯಾಪ್ತಿಗೆ ಸೇರ್ಪಡೆಯಾಗಲಿದೆ’ ಎಂದು ತಿಳಿಸಿದರು.

ಪುನಃ ಕೋರ್ಟ್‌ ಮೆಟ್ಟಿಲೇರಲು ಸಿದ್ಧತೆ: ವರ್ತಕರ ಸಂಘದ ಅಧ್ಯಕ್ಷರೂ ಆಗಿರುವ ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಮಾತನಾಡಿ, ‘ರಸ್ತೆ ವಿಸ್ತರಣೆಗೆ ಆಗ್ರಹಿಸಿ ಒಂದು ವಾರ ಹೋರಾಟ ಮಾಡಲಾಗಿತ್ತು. ಈ ವೇಳೆ ಭೂ ಮಾಲೀಕರು, ವಿಸ್ತರಣೆಗೆ ಸಹಕರಿಸುವುದಾಗಿ ಭರವಸೆ ನೀಡಿದ್ದರು. ಅವರ ಭರವಸೆ ನಂಬಿ ಹೋರಾಟ ಹಿಂಪಡೆದಿದ್ದೆವು. ಆದರೆ, ಈಗ ಕೆಲ ಭೂ ಮಾಲೀಕರು ಮತ್ತೆ ಕೋರ್ಟ್‌ ಮೆಟ್ಟಿಲೇರುವ ಸಿದ್ಧತೆ ಮಾಡಿಕೊಳ್ಳುತ್ತಿರುವ ಮಾಹಿತಿಯಿದೆ. ಸಾರ್ವಜನಿಕವಾಗಿ ಕೊಟ್ಟ ಮಾತನ್ನು ಭೂ ಮಾಲೀಕರು ಉಳಿಸಿಕೊಳ್ಳಬೇಕು’ ಎಂದು ಹೇಳಿದರು.

‘ಪುನಃ ಕೋರ್ಟ್‌ಗೆ ಹೋದರೆ, ವಿಸ್ತರಣೆ ಕೆಲಸ ಮತ್ತಷ್ಟು ವಿಳಂಬವಾಗುತ್ತದೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಈಗಲೂ ಕಾಲ ಮಿಂಚಿಲ್ಲ. ಸಮಸ್ಯೆ ಬಗ್ಗೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಮುಖ್ಯರಸ್ತೆ ವಿಸ್ತರಣೆಯಿಂದ ಮೆಣಸಿನಕಾಯಿ ವ್ಯಾಪಾರದ ಅಭಿವೃದ್ಧಿಗೆ ಅನುಕೂಲವಾಗಲಿದೆ. ಪಟ್ಟಣವೂ ಬೆಳೆಯಲಿದೆ. ಇದನ್ನು ಭೂ ಮಾಲೀಕರು ಅರಿತುಕೊಳ್ಳಬೇಕು’ ಎಂದು ತಿಳಿಸಿದರು.

ಸದಸ್ಯ ಬಸವಣ್ಣೆಪ್ಪ ಛತ್ರದ ಮಾತನಾಡಿ, ‘ವಿವಿಧ ಸಂಘಟನೆಗಳನ್ನು ಒಳಗೊಂಡು ಹೋರಾಟ ಮಾಡಲಾಗಿತ್ತು. ಮುಖ್ಯರಸ್ತೆ ಭೂ ಮಾಲೀಕರ ಮಾತಿನ ಮೇಲೆ ವಿಶ್ವಾಸವಿಟ್ಟು ಜಿಲ್ಲಾಧಿಕಾರಿಯವರ ಕೋರಿಕೆ ಮೇರೆಗೆ ಪ್ರತಿಭಟನೆ ಸ್ಥಗಿತಗೊಳಿಸಲಾಯಿತು. ಈಗ, ರಸ್ತೆ ವಿಸ್ತರಣೆಗೆ ಭೂ ಮಾಲೀಕರು ಕೈಜೋಡಿಸಬೇಕು’ ಎಂದು ಕೋರಿದರು.

ಪುರಸಭೆ ಅಧ್ಯಕ್ಷ ಬಾಲಚಂದ್ರ ಪಾಟೀಲ, ಉಪಾಧ್ಯಕ್ಷ ಸುಭಾಷ ಮಾಳಗಿ, ಸದಸ್ಯ ರಾಮಣ್ಣ ಕೋಡಿಹಳ್ಳಿ, ಕಾಂಗ್ರೆಸ್‌ ಬ್ಲಾಕ್ ಅಧ್ಯಕ್ಷ ದಾನಪ್ಪ ಚೂರಿ, ರೈತ ಮುಖಂಡ ಗಂಗಣ್ಣ ಎಲಿ, ಬೀರಪ್ಪ ಬಣಕಾರ ಪತ್ರಿಕಾಗೋಷ್ಠಿಯಲ್ಲಿದ್ದರು.

‘ಹಠ ಬೇಡ: ಮಾತುಕತೆಗೆ ಸಿದ್ಧ’

‘ಬ್ಯಾಡಗಿ ಪಟ್ಟಣ ಅಭಿವೃದ್ಧಿಯಾಗಬೇಕಾದರೆ ನಾವೆಲ್ಲರೂ ಒಂದಾಗಿ ಸಾಗಬೇಕು. ಮುಖ್ಯರಸ್ತೆಯನ್ನು 33 ಅಡಿ ವಿಸ್ತರಣೆ ಮಾಡಲು ಭೂ ಮಾಲೀಕರು ಸಹಕಾರ ನೀಡಬೇಕು’ ಎಂದು ಪುರಸಭೆ ಅಧ್ಯಕ್ಷ ಬಾಲಚಂದ್ರ ಪಾಟೀಲ ಕೋರಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಪ್ರತಿಭಟನೆ ವೇಳೆ ನೀಡಿದ್ದ ಮಾತನ್ನು ಭೂ ಮಾಲೀಕರು ಉಳಿಸಿಕೊಳ್ಳಬೇಕು’ ಎಂದರು. ‘ಯಾವುದೇ ಗೊಂದಲಗಳಿಗೆ ಭೂ ಮಾಲೀಕರು ಕಿವಿಗೂಡಬಾರದು. ಹಠ ಬಿಟ್ಟು ಮಾತುಕತೆಯ ಮೂಲಕ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ನಿಮ್ಮ ಜೊತೆ ಮಾತುಕತೆಗೆ ನಾವು ಸಿದ್ಧರಿದ್ದೇವೆ. ರಸ್ತೆ ವಿಸ್ತರಣೆ ಪುನಃ ಅಡ್ಡಿಯಾದರೆ ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಮತ್ತೊಮ್ಮೆ ಹೋರಾಟ ಅನಿವಾರ್ಯವಾಗಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.