ADVERTISEMENT

ಹಾವೇರಿ: ಅತಿವೃಷ್ಟಿಯಿಂದ ₹324 ಕೋಟಿ ಹಾನಿ

ಜಿಲ್ಲೆಯಲ್ಲಿ 4,440 ಮನೆಗಳಿಗೆ ಹಾನಿ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾಹಿತಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 15:14 IST
Last Updated 12 ಆಗಸ್ಟ್ 2022, 15:14 IST
ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ
ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ   

ಹಾವೇರಿ: ‘ಪ್ರಸಕ್ತ ಮುಂಗಾರಿನ ಅತಿವೃಷ್ಟಿಯಿಂದ ಈವರೆಗೆ ಜಿಲ್ಲೆಯಲ್ಲಿ ₹324 ಕೋಟಿ ಮೊತ್ತದ ಹಾನಿಯಾಗಿದೆ. ಎನ್.ಡಿ.ಆರ್.ಎಫ್ ಮಾರ್ಗಸೂಚಿ ಅನ್ವಯ ₹34.30 ಕೋಟಿ ಪರಿಹಾರದ ಮೊತ್ತವಾಗುತ್ತದೆ’ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು.

ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳೆಹಾನಿ ಸರ್ವೇಗೆ ಕೃಷಿ, ಕಂದಾಯ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿ, ಸಿಬ್ಬಂದಿಗಳ ತಂಡಗಳನ್ನು ರಚಿಸಿ ಸರ್ವೇ ಕಾರ್ಯಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ 4,440 ಮನೆಗಳು ಹಾನಿಯಾಗಿರುವ ಕುರಿತಂತೆ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ 2,540 ಪ್ರಕರಣಗಳನ್ನು ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಎಂಜಿನಿಯರ್‌ ತಂಡ ಪರಿಶೀಲನೆ ನಡೆಸಿದೆ. 1,870 ಅರ್ಜಿಗಳು ಪರಿಶೀಲನೆಗೆ ಬಾಕಿ ಉಳಿದಿವೆ.

ADVERTISEMENT

ಮಳೆ ನಿಂತರೂ ಈಗಲೂ ಮನೆಹಾನಿ ಕುರಿತಂತೆ ಅರ್ಜಿಗಳು ಬಂದರೆ ಸ್ವೀಕರಿಸಿ ಸ್ಥಳ ಪರಿಶೀಲನೆ ನಡೆಸಲಾಗುವುದು. ಒಂದೊಮ್ಮೆ ಅರ್ಜಿಗಳು ಬರದಿದ್ದರೂ ಸ್ಥಳೀಯ ಅಧಿಕಾರಿಗಳಿಗೆ ಹಾನಿ ಕುರಿತಂತೆ ಪರಿಶೀಲಿಸಿ ಮಾಹಿತಿಯನು ದಾಖಲಿಸುವಂತೆ ಸೂಚಿಸಲಾಗಿದೆ ಎಂದರು.

1407 ಪ್ರಕರಣಗಳಲ್ಲಿ ಈಗಾಗಲೇ ಪರಿಹಾರ ನೀಡಲಾಗಿದೆ. 23 ಪ್ರಕರಣಗಳು ಸಂಪೂರ್ಣ ಹಾನಿಯಾದ ಪ್ರಕರಣಗಳಾಗಿವೆ ಹಾಗೂ 1009 ಪ್ರಕರಣಗಳು ಬಿ2 ಪ್ರಕರಣಗಳಾಗಿವೆ. ತಲಾ ₹5 ಲಕ್ಷ ಪರಿಹಾರ ಪಡೆಯಲು ಅರ್ಹರಾಗಿದ್ದಾರೆ. 122 ಪ್ರಕರಣಗಳು ಬಿ1 ವರ್ಗಕ್ಕೆ ಸೇರುತ್ತವೆ. ₹3 ಲಕ್ಷ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ. 248 ಪ್ರಕರಣಗಳು ಸಿ ವರ್ಗಕ್ಕೆ ಸೇರುತ್ತವೆ ತಲಾ ₹50 ಸಾವಿರ ಪರಿಹಾರಕ್ಕೆ ಅರ್ಹರಾಗಿರುತ್ತಾರೆ. ಈ ಬಾರಿ ಬಹುಪಾಲು ಪ್ರಕರಣಗಳು ಬಿ1 ವರ್ಗಕ್ಕೆ ಸೇರಿದ್ದವಾಗಿದೆ ಎಂದು ಮಾಹಿತಿ ನೀಡಿದರು.

1361 ಕಿ.ಮೀ. ಗ್ರಾಮೀಣ ರಸ್ತೆ ಹಾನಿ:

ಮಳೆಯಿಂದ 1361 ಕಿ.ಮೀ. ಗ್ರಾಮೀಣ ರಸ್ತೆ, 97 ಕಿ.ಮೀ. ರಾಜ್ಯ ಹೆದ್ದಾರಿ, 318 ಕಿ.ಮೀ. ಜಿಲ್ಲಾ ಮುಖ್ಯರಸ್ತೆ, 2 ವಿದ್ಯುತ್‌ ಪರಿವರ್ತಕ, 198 ವಿದ್ಯುತ್ ಕಂಬಗಳು ಹಾಳಾಗಿವೆ. 19 ಸರ್ಕಾರಿ ಕಟ್ಟಡ, 971 ಪ್ರಾಥಮಿಕ ಶಾಲಾ ಕಟ್ಟಡ, 87 ಅಂಗನವಾಡಿ, 67 ಸೇತುವೆ, 18 ಸಣ್ಣ ನೀರಾವರಿ ಕೆರೆ, ಮೂರು ಕುಡಿಯುವ ನೀರಿನ ಘಟಕಗಳಿಗೆ ಹಾನಿಯಾಗಿದೆ. ಅಂದಾಜು ₹324 ಕೋಟಿ ಮೊತ್ತದ ನಷ್ಟ ಸಂಭವಿಸಿದೆ ಎಂದು ತಿಳಿಸಿದರು.

ಈಗಾಗಲೇ ಶಾಲಾ, ಅಂಗನವಾಡಿ ಕಟ್ಟಡಗಳ ದುರಸ್ತಿಗೆ ₹5.80 ಕೋಟಿ ಅನುದಾನ ಬಿಡುಗಡೆಯಾಗಿದೆ. ₹13 ಕೋಟಿ ಬೇಡಿಕೆ ಬಂದಿದೆ. ಅತಿವೃಷ್ಟಿ ಪ್ರವಾಹ ನಿರ್ವಹಣೆಗೆ ಯಾವುದೇ ಅನುದಾನದ ಕೊರತೆ ಇಲ್ಲ ಎಂದು ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.