ADVERTISEMENT

ಸ್ವಾಮೀಜಿಗಳಿಗೆ ನೆಮ್ಮದಿಯಿಂದ ಕೆಲಸ ಮಾಡಲು ಬೀಡಿ: ರುದ್ರಮುನಿ ಸ್ವಾಮೀಜಿ

ಪುಣ್ಯಸ್ಮರಣೆ ಸಮಾರೋಪ: ತಿಪಟೂರು ಷಡಕ್ಷರಿಮಠದ ರುದ್ರಮುನಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 6:14 IST
Last Updated 10 ಫೆಬ್ರುವರಿ 2026, 6:14 IST
ಹಾನಗಲ್‌ನಲ್ಲಿ ಭಾನುವಾರ ಸಂಜೆ ನಡೆದ ಲಿಂ.ಹಾನಗಲ್ ಕುಮಾರ ಶಿವಯೋಗಿಗಳ ಪುಣ್ಯಸ್ಮರಣೆಯ ಸಮಾರೋಪದಲ್ಲಿ ತಿಪಟೂರು ಷಡಕ್ಷರಿಮಠದ ರುದ್ರಮುನಿ ಸ್ವಾಮಿ ಮಾತನಾಡಿದರು 
ಹಾನಗಲ್‌ನಲ್ಲಿ ಭಾನುವಾರ ಸಂಜೆ ನಡೆದ ಲಿಂ.ಹಾನಗಲ್ ಕುಮಾರ ಶಿವಯೋಗಿಗಳ ಪುಣ್ಯಸ್ಮರಣೆಯ ಸಮಾರೋಪದಲ್ಲಿ ತಿಪಟೂರು ಷಡಕ್ಷರಿಮಠದ ರುದ್ರಮುನಿ ಸ್ವಾಮಿ ಮಾತನಾಡಿದರು    

ಪ್ರಜಾವಾಣಿ ವಾರ್ತೆ

ಹಾನಗಲ್: ‘ಸ್ವಾಮಿಗಳು ನೆಮ್ಮದಿಯಿಂದ ಸಮಾಜದ ಕೆಲಸ ಮಾಡಲು ಬಿಡಿ. ಯಾರದೋ ಅಪಪ್ರಚಾರಗಳಿಗೆ ಕಿವಿಗೊಡಬೇಡಿ. ಸ್ವಾಮಿಗಳಿಗೂ ತಾಳ್ಮೆ ಬೇಕಾಗಿದೆ. ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮಿಗಳ ಹಿತಕ್ಕೆ ಬಂಡೆಯಾಗಿ ನಾನು ನಿಲ್ಲುತ್ತೇನೆ’ ಎಂದು ತಿಪಟೂರು ಷಡಕ್ಷರಿಮಠದ ರುದ್ರಮುನಿ ಸ್ವಾಮೀಜಿ ಹೇಳಿದರು.

ಇಲ್ಲಿನ ಕುಮಾರೇಶ್ವರ ವಿರಕ್ತಮಠದಲ್ಲಿ ಭಾನುವಾರ ನಡೆದ ಹಾನಗಲ್ ಲಿಂ.ಕುಮಾರ ಶಿವಯೋಗಿಗಳ ಪುಣ್ಯಸ್ಮರಣೆಯ ಸಮಾರೋಪದಲ್ಲಿ ಅವರು ಮಾತನಾಡಿದರು.

ADVERTISEMENT

ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರು ಮಠ ಆಸ್ತಿಯನ್ನು ಮಾರಾಟ ಅಥವಾ ಹಾಳು ಮಾಡಿಲ್ಲ. ಮೊದಲು ಹುಬ್ಬಳ್ಳಿ ಮಠಕ್ಕೆ ₹60 ಸಾವಿರ ಬರುತ್ತಿದ್ದ ವರಮಾನ ಇದೀಗ ಪ್ರತಿ ವರ್ಷ ₹10 ಲಕ್ಷ ಬರುವಂತೆ ಮಾಡಿದ್ದಾರೆ. ಶೀಘ್ರದಲ್ಲಿ ಹುಬ್ಬಳ್ಳಿ ಮಠದಿಂದ ₹15 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಆರಂಭವಾಗುತ್ತವೆ’ ಎಂದು ತಿಳಿಸಿದರು.

‘ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಮಾಧಾನದ ಗುಣ ಹೊಂದಿದವರು. ಹುಬ್ಬಳ್ಳಿಯ ಕೆಎಲ್ಇ ಸಂಸ್ಥೆಗೆ ಮಠದ ಜಾಗೆ ನೀಡಿದ್ದರಲ್ಲಿ ತಪ್ಪೇನಿಲ್ಲ. ಅದು ಹಿಂದಿನ ಗುರುಗಳ ಸಂಕಲ್ಪದ ತೀರ್ಮಾನವಾಗಿತ್ತು. ಆ ಜಾಗೆ ಆಸ್ಪತ್ರೆಗಾಗಿ ವಿನಿಯೋಗವಾಗಬೇಕಾಗಿದ್ದು, ಅನಿವಾರ್ಯವಾಗಿ ಕೊಡಬೇಕಾಯಿತು. ಕಾರಣ ಸ್ವಾಮೀಜಿಗಳ ಮೇಲೆ ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ’ ಎಂದರು. 

ಹುಬ್ಬಳ್ಳಿ ಮೂರು ಸಾವಿರಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ‘ಭಾರತ ಯೋಗ ಭೂಮಿ, ಈ ನಾಡಿನ ಸಾಧಕರ ಆತ್ಮ ಚರಿತ್ರೆ ಅರಿತುಕೊಂಡರೆ ಭವ್ಯ ಬದುಕು ಕಟ್ಟಿಕೊಳ್ಳುವ ಶಕ್ತಿ ಮನುಷ್ಯನದಾಗುತ್ತದೆ’ ಎಂದರು.

ಮಾನಸಿಕ ಆರೋಗ್ಯ ತಜ್ಞ ಮಹೇಶ ಮಾಶಾಳ ಮಾತನಾಡಿ, ‘ಮನುಷ್ಯತ್ವದ ಮನಸ್ಸಿನ ಕ್ರಾಂತಿಗೆ ಸಮಾಜ ಸಂಕಲ್ಪ ಮಾಡಬೇಕಾಗಿದೆ. ಮಾನಸಿಕ ಅನಗತ್ಯ ಒತ್ತಡಗಳು ಮನುಷ್ಯನನ್ನು ವಿಚಲಿತಗೊಳಿಸುತ್ತಿವೆ. ಪ್ರತಿ ಮನುಷ್ಯ ತನ್ನನ್ನು ತಾನು ಅರಿಯುವ ಅಗತ್ಯವಿದೆ’ ಎಂದರು.

ಮೂಲೆಗದ್ದೆ ಅಭಿನವ ಚನ್ನಬಸವ ಸ್ವಾಮೀಜಿ, ಮುನವಳ್ಳಿ ಮುರುಘೇಂದ್ರ ಸ್ವಾಮೀಜಿ, ಅರಕೇರಿ ವಿರಕ್ತಮಠದ ಶಿವಲಿಂಗ ಸ್ವಾಮೀಜಿ, ಬಿಜಕಲ್ ಶಿವಲಿಂಗ ಸ್ವಾಮೀಜಿ, ಅಕ್ಕಿಆಲೂರು ಶಿವಬಸವ ಸ್ವಾಮೀಜಿ, ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯರು, ಕೂಡಲದ ಗುರುಮಹೇಶ್ವರ ಶಿವಾಚಾರ್ಯರು, ಹೀರೂರಿನ ನಂಜುಂಡಪಂಡಿತಾರಾದ್ಯ ಸ್ವಾಮೀಜಿ, ಮಲ್ಲಿಕಾರ್ಜುನ ದೇವರು, ಪ್ರಭುಲಿಂಗ ದೇವರು ಸಮ್ಮುಖ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.