
ಹಾವೇರಿ: ‘ಹುಕ್ಕೇರಿಮಠ ಜಾತ್ರೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಎಲ್ಲರೂ, ಹಾವೇರಿ ಜನರಿಗೆ ಉತ್ತಮ ಸ್ವಾಮೀಜಿ ಸಿಕ್ಕಿರುವುದಾಗಿ ಮಾತನಾಡುತ್ತಿದ್ದಾರೆ. ಆದರೆ, ನನಗೆ ಉತ್ತಮ ನಿಷ್ಠೆಯ ಭಕ್ತರು ಸಿಕ್ಕಿದ್ದಾರೆ. ಇದು ನನ್ನ ಪೂರ್ವಜನ್ಮದ ಪುಣ್ಯ’ ಎಂದು ಹುಕ್ಕೇರಮಠದ ಸದಾಶಿವ ಸ್ವಾಮೀಜಿ ಹೇಳಿದರು.
ನಗರದ ಹುಕ್ಕೇರಿಮಠದ ಪಟ್ಟಾಧಿಕಾರ ಸ್ವೀಕರಿಸಿ 15 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಭಕ್ತರು ಸೋಮವಾರ ಹಮ್ಮಿಕೊಂಡಿದ್ದ ಬೆಳ್ಳಿ ತುಲಾಭಾರ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
‘ಜಾತ್ರೆಯ ಕಾರ್ಯಕ್ರಮಗಳನ್ನು ಭಕ್ತರು ನಿಷ್ಠೆಯಿಂದ ನೆರವೇರಿಸಿದ್ದಾರೆ. ಯಾರಾದರೂ ಬಂದು ನಿನಗೆ ಹಾವೇರಿ ಭಕ್ತರು ಬೇಕಾ? ಆಸ್ತಿ ಹೆಚ್ಚಿರುವ ದೊಡ್ಡ ಮಠ ಬೇಕಾ? ಎಂದು ಕೇಳಿದರೆ, ನಾನು ಹಾವೇರಿ ಭಕ್ತರು ಬೇಕೆಂದು ಹೇಳುತ್ತೇನೆ. ಚಿನ್ನ, ಬೆಳ್ಳಿ, ಆಸ್ತಿಗಿಂತಲೂ ಭಕ್ತರೇ ನನ್ನ ಆಸ್ತಿ. ಅವರ ಹೃದಯದ ಸಿಂಹಾಸನದಲ್ಲಿ ಸ್ಥಾನ ಕೊಟ್ಟಿದ್ದಾರೆ’ ಎಂದರು.
‘ಜಿಲ್ಲೆಯ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇಡೀ ಕ್ರೀಡಾಂಗಣ ಸಂಪೂರ್ಣ ಭರ್ತಿಯಾಗಿದೆ. ನಗರ ಹಾಗೂ ಗ್ರಾಮೀಣ ಭಕ್ತರ ಸೇವೆ ನೋಡಿ, ಆನಂದ ಹಾಗೂ ಸಂತೋಷವಾಗುತ್ತಿದೆ’ ಎಂದು ಹೇಳಿದರು.
ತಲೆ ಮೇಲೆ ದೊಡ್ಡ ಜವಾಬ್ದಾರಿ: ‘ಹುಕ್ಕೇರಿಮಠ ಜಾತ್ರೆಯು ಈ ಬಾರಿ ಜಾತಿ–ಮತ, ಧರ್ಮ ಮೀರಿ ಸರ್ವಜನಾಂಗದ ಶಾಂತಿ ತೋಟವಾಗಿ ಜನರ ಜಾತ್ರೆಯಾಯಿತು. ಎಲ್ಲರೂ ಸೇರಿ ತಲೆ ಮೇಲೆ ಕಿರೀಟ ಹಾಕಿ, ದೊಡ್ಡ ಜವಾಬ್ದಾರಿ ವಹಿಸಿದ್ದಾರೆ’ ಎಂದು ಸ್ವಾಮೀಜಿ ತಿಳಿಸಿದರು.
ಮಠಕ್ಕೆ ಬರುವ ಮುನ್ನ ಭಯ: ‘ಹುಕ್ಕೇರಿಮಠಕ್ಕೆ ಬರುವ ಮುನ್ನ, ಸೊಸೆ ಹೊಸದಾಗಿ ಅತ್ತೆ ಮನೆಗೆ ಹೋಗುವ ರೀತಿಯಲ್ಲಿ ನನಗೂ ಭಯವಿತ್ತು. ಮಠದಲ್ಲಿ ಕಮಿಟಿ ಇದ್ದು, ಅವರು ಹೇಳಿದಂತೆ ಕೇಳಬೇಕೆಂದು ಹಲವರು ಹೇಳಿದ್ದರು. ಆದರೆ, ಕಮಿಟಿ ಸಹಕಾರದಿಂದಲೇ ಇಂದು ಎಲ್ಲವೂ ಸಾಧ್ಯವಾಗಿದೆ’ ಎಂದು ಹೇಳಿದರು.
95 ಕೆ.ಜಿ. ಬೆಳ್ಳಿ: ಕ್ರೀಡಾಂಗಣದಲ್ಲಿದ್ದ ಭವ್ಯ ವೇದಿಕೆಯಲ್ಲಿ ತಕ್ಕಡಿಯ ಒಂದು ಬದಿಯಲ್ಲಿ 90 ಕೆ.ಜಿ. ತೂಕದ ಸ್ವಾಮೀಜಿ ಅವರನ್ನು ಕೂರಿಸಿ, ಮತ್ತೊಂದು ಬದಿಯಲ್ಲಿ 95 ಕೆ.ಜಿ. ಬೆಳ್ಳಿ ಇರಿಸಿ ತುಲಾಭಾರ ಮಾಡಲಾಯಿತು. ತಡರಾತ್ರಿಯವರೆಗೂ ನಡೆದ ತುಲಾಭಾರದಲ್ಲಿ ಕಮಿಟಿ ಪದಾಧಿಕಾರಿಗಳು ಹಾಗೂ ಬೆಳ್ಳಿ ದಾನಿಗಳು ಹಾಜರಿದ್ದರು.
ಪೂರ್ವಾಶ್ರಮದಲ್ಲಿ ಊಟಕ್ಕೂ ಕಷ್ಟವಿತ್ತು. 1000 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುವುದು. ಬಡ ಮಕ್ಕಳನ್ನು ಪೋಷಕರು ಜೋಳಿಗೆಗೆ ಹಾಕಬೇಕು. ಓದಿಸಿ ವಾಪಸು ಕಳುಹಿಸುತ್ತೇವೆ
-ಸದಾಶಿವ ಸ್ವಾಮೀಜಿ ಹುಕ್ಕೇರಿಮಠ
‘ಆರಾಧಿಸುವ ಗುರುವಿಗೆ ಬೆಳ್ಳಿ ಸಿಂಹಾಸನ’
‘ನಾನು ಹಾಗೂ ನನ್ನ ಕುಟುಂಬದವರು ಆರಾಧಿಸುವ ಗುರು ಸದಾಶಿವ ಸ್ವಾಮೀಜಿಯವರು. ಅವರಿಗೆ ಭಕ್ತಿಯಿಂದ ಬೆಳ್ಳಿ ಸಿಂಹಾಸನ ನೀಡಿದ್ದೇನೆ. ದಸರಾ ದರ್ಬಾರ ಹಾಗೂ ಗುರು ಪೂರ್ಣಿಮೆ ದಿನದಂದು ಸ್ವಾಮೀಜಿ ಅದೇ ಸಿಂಹಾಸನ ಮೇಲೆ ಕುಳಿತು ಭಕ್ತರಿಗೆ ಆಶೀರ್ವಾದ ಮಾಡಬೇಕು ಎಂಬುದು ನನ್ನ ಬಯಕೆ’ ಎಂದು ರಾಣೆಬೆನ್ನೂರಿನ ವನಿತಾ ಗುತ್ತಲ ಹೇಳಿದರು. ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರಿಗೆ ಬೆಳ್ಳಿ ಸಿಂಹಾಸನ ಅರ್ಪಿಸಿದ ನಂತರ ಮಾತನಾಡಿದ ಅವರು ‘ನನ್ನ ಪತಿಗೆ ಆರೋಗ್ಯ ಸಮಸ್ಯೆಯಿತ್ತು. ಮಿದುಳಿನ ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ಹೇಳಿದ್ದರು. ಆದರೆ ಸ್ವಾಮೀಜಿ ಶಸ್ತ್ರಚಿಕಿತ್ಸೆ ಬೇಡವೆಂದು ಪದೇ ಪದೇ ತಿಳಿಸಿದ್ದರು. ಅವರ ಮಾತಿನಂತೆ ಶಸ್ತ್ರಚಿಕಿತ್ಸೆ ಇಲ್ಲದೇ ಇಂದು ಪತಿ ಆರೋಗ್ಯವಾಗಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.