ADVERTISEMENT

ಅಧಿಕಾರದ ಆಸೆಗೆ ಭ್ರಷ್ಟ ಬಿಜೆಪಿ ಸೇರಿದ ಹೊರಟ್ಟಿ: ವಿಧಾನ ಪರಿಷತ್‌ ಸದಸ್ಯ ಸಲೀಂ

​ಪ್ರಜಾವಾಣಿ ವಾರ್ತೆ
Published 30 ಮೇ 2022, 15:18 IST
Last Updated 30 ಮೇ 2022, 15:18 IST
ಸಲೀಂ ಅಹಮದ್‌
ಸಲೀಂ ಅಹಮದ್‌   

ಹಾವೇರಿ: ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಅವರು ಶಿಕ್ಷಣ ಕ್ಷೇತ್ರದಲ್ಲಿ ಕಳೆದ 40 ವರ್ಷಗಳಿಂದ ಸಲ್ಲಿದ ಪ್ರಾಮಾಣಿಕ ಸೇವೆ, ಹೋರಾಟವೇ ಅವರ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಸಲೀಂ ಅಹಮದ್‌ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬಿಸುತ್ತಿದೆ. ಈ ಹಿಂದೆ ಬಸವರಾಜ ಹೊರಟ್ಟಿ ಅವರು ಜ್ಯಾತ್ಯತೀತ ಆಧಾರದ ಮೇಲೆ 7 ಬಾರಿ ಆಯ್ಕೆಯಾಗಿದ್ದರೂ, ಶಿಕ್ಷಕರ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಈ ಬಾರಿ ಸೋಲಿನ ಭೀತಿ ಹಾಗೂ ಅಧಿಕಾರದ ಆಸೆಯಿಂದ ಪಕ್ಷ ಬದಲಿಸಿ ಭ್ರಷ್ಟ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ರಾಜಕೀಯದ ಅಂತ್ಯದ ದಿನಗಳಲ್ಲಿ ಅವರು ತಮ್ಮ ತತ್ವ ಸಿದ್ಧಾಂತಗಳನ್ನು ಬಲಿಕೊಟ್ಟಿದ್ದಾರೆ. ಇದನ್ನು ಶಿಕ್ಷಕರು ಅರ್ಥ ಮಾಡಿಕೊಳ್ಳಬೇಕು ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದು 3ವರ್ಷ ಕಳೆದರೂ ಶಿಕ್ಷಕರ ಕ್ಷೇತ್ರದಲ್ಲಿ ಯಾವುದೇ ಬದಲಾವಣೆ ತಂದಿಲ್ಲ ಸಾಕಷ್ಟು ಅನ್ಯಾಯವಾಗಿದೆ. ಈ ಬಾರಿಯ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಬಸವರಾಜ ಗುರಿಕಾರ ಅವರಿಗೆ ಬೆಂಬಲ ನೀಡುವ ಮೂಲಕ ಆಶೀರ್ವಾದ ಮಾಡಬೇಕು. ಮುಂದಿನ ದಿನಗಳಲ್ಲಿ ಅವರು ನಿಮ್ಮ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.

ADVERTISEMENT

ಪಶ್ಚಿಮ ಶಿಕ್ಷಕರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಮಾತನಾಡಿ, ಕಳೆದ 40 ವರ್ಷಗಳಿಂದ ಶಿಕ್ಷಕರ ಬೇಕು, ಬೇಡಿಕೆಗಳ ಈಡೇರಿಕೆಗಾಗಿ ಶಿಕ್ಷಕರ ಧ್ವನಿಯಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ. ಈಗಾಗಲೇ ನಾಲ್ಕು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಶಿಕ್ಷಕರನ್ನು ಭೇಟಿ ಮಾಡಿ ಬೆಂಬಲಿಸುವAತೆ ಮನವಿ ಮಾಡಿದ್ದು, ಎಲ್ಲರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಬಾರಿ ಕ್ಷೇತ್ರದ ಶಿಕ್ಷಕರು ಬದಲಾವಣೆ ಬಯಸಿದ್ದು, ನನ್ನನ್ನು ಬೆಂಬಿಸುವ ವಿಶ್ವಾಸವಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಎಸ್‌ಎಫ್‌ಎನ್ ಗಾಜೀಗೌಡ್ರ, ಜಿಲ್ಲಾಧ್ಯಕ್ಷ ಎಂ.ಎ ಹಿರೇಮಠ, ವಿಧಾನ ಪರಿಷತ್‌ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಶಾಸಕ ಬಿ.ಎಚ್ ಬನ್ನಿಕೋಡ, ಸಂಜೀವಕುಮಾರ ನೀರಲಗಿ, ಪ್ರಕಾಶಗೌಡ ಪಾಟೀಲ, ಎಂ.ಎ ಮೈದೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.