ಸವಣೂರು: ಪಟ್ಟಣದ ಕುಮಾರೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುವ ರೈತರ ಅನುಕೂಲಕ್ಕಾಗಿ ನಿರ್ಮಿಸಿರುವ ‘ರೈತ ಭವನ’ ಪಾಳು ಬಿದ್ದಿದೆ. ಕಟ್ಟಡವಿದ್ದರೂ ಉಪಯೋಗಕ್ಕೆ ಸಿಗದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಸುಮಾರು ₹ 7.60 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ರೈತ ಭವನ, ಕೆಲವೇ ವರ್ಷಗಳಲ್ಲಿ ಶಿಥಿಲಾವಸ್ಥೆಗೆ ತಲುಪಿದೆ. ಕಳಪೆ ಕಾಮಗಾರಿ ನಡೆಸಿ, ಅನುದಾನ ದುರುಪಯೋಗ ಆಗಿರುವ ಆರೋಪವೂ ಇದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ರೈತ ಭವನ ಪಾಳು ಬಿದ್ದಿದ್ದು, ರೈತರು ಹಿಡಿಶಾಪ ಹಾಕುತ್ತಿದ್ದಾರೆ.
ಪಟ್ಟಣದ ಮಾರುಕಟ್ಟೆಗೆ ನಿತ್ಯವೂ ಗ್ರಾಮೀಣ ಪ್ರದೇಶಗಳಿಂದ ರೈತರು ಬರುತ್ತಾರೆ. ತಾವು ಬೆಳೆದ ದವಸ ಧಾನ್ಯಗಳನ್ನು ಮಾರುತ್ತಾರೆ. ಇಂಥ ರೈತರಿಗೆ ಮೂಲ ಸೌಲಭ್ಯಗಳನ್ನು ನೀಡಿ ಸತ್ಕರಿಸುವ ಉದ್ದೇಶದಿಂದ ರೈತ ಭವನ ನಿರ್ಮಿಸಿದ್ದು, ಬಳಕೆ ಮಾತ್ರ ಮರೀಚಿಕೆಯಾಗಿದೆ.
ವಿಶ್ರಾಂತಿ ಗೃಹ, ಸುಲಭ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ರೈತ ಭವನದಲ್ಲಿದೆ. ಆದರೆ, ಅಧಿಕಾರಿಗಳು ಮಾತ್ರ ರೈತ ಭವನ ಉದ್ಘಾಟನೆಗೆ ಇದುವರೆಗೂ ಮನಸು ಮಾಡಿಲ್ಲ.
ನಿರ್ಮಾಣಗೊಂಡ ರೈತ ಭವನ ಹಾಗೂ ಸುಲಭ ಶೌಚಾಲಯ ಕಟ್ಟಡಗಳಿಗೆ ಬೀಗ ಹಾಕಲಾಗಿದೆ. ಕಟ್ಟಡವು ಪಾಳು ಬಿದ್ದಿರುವುದರ ಜೊತೆಯಲ್ಲಿಯೇ ಬೀಗಗಳು ತುಕ್ಕು ಹಿಡಿದಿವೆ. ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ಹಂತ ತಲುಪಿದ್ದು, ಯಾವಾಗ ಬೇಕಾದರೂ ಕುಸಿದು ಬೀಳಬಹುದೆಂದು ರೈತರು ಹೇಳುತ್ತಿದ್ದಾರೆ.
ಗಿಡಗಳೇ ವಿಶ್ರಾಂತಿಗೃಹ : ರೈತರು ಹಾಗೂ ರೈತ ಮಹಿಳೆಯರು ತಮ್ಮ ಫಸಲು ಮಾರಾಟ ಮಾಡಲು ಬಂದ ಸಂದರ್ಭದಲ್ಲಿ ಫಸಲಿನ ಬೆಲೆ ನಿಗದಿಯಾಗುವವರೆಗೂ ಕಾದು ಕುಳಿತುಕೊಳ್ಳಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಅವರೆಲ್ಲರೂ ಮಾರುಕಟ್ಟೆಯಲ್ಲಿರುವ ಗಿಡಗಳ ಕೆಳಗೆ ಕುಳಿತುಕೊಂಡು ವಿಶ್ರಾಂತಿ ಪಡೆಯುತ್ತಿದ್ದಾರೆ.
ರಸ್ತೆಯ ಅಕ್ಕ–ಪಕ್ಕದ ಜಾಗದಲ್ಲಿ ಹಾಗೂ ಕಸ ಬೆಳೆದಿರುವ ಜಾಗದಲ್ಲಿ ಮಲ–ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಮಹಿಳಾ ರೈತರ ಪರಿಸ್ಥಿತಿಯಂತೂ ಹೇಳತೀರದ್ದಾಗಿದೆ. ಕೂಡಲೇ ರೈತ ಭವನದ ಬಾಗಿಲು ತೆರೆದು, ಬಳಕೆಗೆ ಮುಕ್ತಗೊಳಿಸಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.
ಆಡಳಿತ ಕಚೇರಿಗೆ ಹಸ್ತಾಂತರ
‘ರೈತರಿಗೆ ಉಪಯೋಗವಾಗಲೆಂದು ರೈತ ಭವನ ನಿರ್ಮಿಸಲಾಗಿದ್ದು ಅದನ್ನು ಮಾರುಕಟ್ಟೆಯ ಆಡಳಿತ ಕಚೇರಿಗೆ ಈಗಾಗಲೇ ಹಸ್ತಾಂತರಿಸಿದೆ. ಆದರೆ ರೈತ ಭವನ ಮಾತ್ರ ಬಾಗಿಲು ತೆರೆದಿಲ್ಲ. ಇದರಲ್ಲಿ ಅಧಿಕಾರಿಗಳ ನಿಷ್ಕಾಳಜಿ ಎದ್ದು ಕಾಣುತ್ತಿದೆ’ ಎಂದು ರೈತರು ದೂರಿದರು. ‘ಮಾರುಕಟ್ಟೆಯ ಚರಂಡಿಗಳು ಮಲ–ಮೂತ್ರಗಳಿಂದ ತುಂಬಿವೆ. ರಸ್ತೆಗಳು ಕಸದ ತೊಟ್ಟಿಯಂತೆ ಕಾಣುತ್ತಿವೆ. ದುರ್ವಾಸನೆಯಿಂದ ವ್ಯಾಪಾರಸ್ಥರು ಹಾಗೂ ರೈತರು ಯಾತನೆ ಅನುಭವಿಸುತ್ತಿದ್ದಾರೆ’ ಎಂದು ಹೇಳಿದರು.
ಎಪಿಎಂಸಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ರೈತಭವನ ನಿರುಪಯುಕ್ತವಾಗಿದ್ದು ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಆಡಳಿತಾಧಿಕಾರಿಯೂ ಆಗಿರುವ ತಹಶೀಲ್ದಾರ್ ಅವರು ರೈತ ಭವನವನ್ನು ಬಳಕೆಗೆ ಮುಕ್ತಗೊಳಿಸಬೇಕು.-ರಮೇಶ ಅರಗೋಳ, ರೈತ ಮಂತ್ರೋಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.