ADVERTISEMENT

ಸವಣೂರು: ಖಡಕ್ ರೊಟ್ಟಿ, ಕರಿಂಡಿ ಜಾತ್ರೆಗೆ ಚಾಲನೆ

ಗಣೇಶಗೌಡ ಎಂ.ಪಾಟೀಲ
Published 14 ಜನವರಿ 2026, 2:23 IST
Last Updated 14 ಜನವರಿ 2026, 2:23 IST
ಸವಣೂರು ತಾಲ್ಲೂಕಿನ ಹೂವಿನಶಿಗ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ವಿರಕ್ತಮಠದಲ್ಲಿ ಜರುಗಿದ ರೊಟ್ಟಿ ಜಾತ್ರೆಯಲ್ಲಿ ರೊಟ್ಟಿ ಬುಟ್ಟಿಗಳನ್ನು ಸಮರ್ಪಿಸಿದ ಭಕ್ತರು
ಸವಣೂರು ತಾಲ್ಲೂಕಿನ ಹೂವಿನಶಿಗ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ವಿರಕ್ತಮಠದಲ್ಲಿ ಜರುಗಿದ ರೊಟ್ಟಿ ಜಾತ್ರೆಯಲ್ಲಿ ರೊಟ್ಟಿ ಬುಟ್ಟಿಗಳನ್ನು ಸಮರ್ಪಿಸಿದ ಭಕ್ತರು   

ಸವಣೂರು: ಧರ್ಮ, ಸಂಸ್ಕೃತಿ, ಸಾಹಿತ್ಯ, ಶಿಕ್ಷಣ, ಅಧ್ಯಾತ್ಮ ಮತ್ತು ಆಯುರ್ವೇದ ಎಂಬ ಷಡ್ ಶಾಸ್ತ್ರಗಳ ಬೆಳಕಿನಲ್ಲಿ ನಾಡಿನ ಬದುಕಿಗೆ ದಾರಿ ತೋರಿದ ಮಠಗಳು ಕೇವಲ ಪೂಜಾ ಕೇಂದ್ರಗಳಷ್ಟೇ ಅಲ್ಲ ಅವು ಮಾನವೀಯತೆಯ ಪಾಠಶಾಲೆಗಳೂ ಹೌದು. ಅಂತಹ ಮಹನೀಯ ಪರಂಪರೆಯೊಂದನ್ನು ಸವಣೂರು ತಾಲ್ಲೂಕಿನ ಹೂವಿನಶಿಗ್ಲಿ ವಿರಕ್ತಮಠವು ಹಲವು ದಶಕಗಳಿಂದ ಜೀವಂತವಾಗಿಟ್ಟುಕೊಂಡು ಬಂದಿದೆ.

ಲಿಂ. ನಿರಂಜನ ಶ್ರೀಗಳು ತೋರಿದ ಸನ್ಮಾರ್ಗವನ್ನು ಅನುಸರಿಸಿಕೊಂಡು ಪ್ರತಿ ವರ್ಷ ಸಂಕ್ರಾಂತಿ ದಿನದಂದು ನಡೆಯುವ ಜಾತ್ರಾ ಮಹೋತ್ಸವ ಕೇವಲ ಧಾರ್ಮಿಕ ಆಚರಣೆಗೆ ಸೀಮಿತಗೊಳ್ಳದೆ, ನಾಡಿನ ಸಂಸ್ಕೃತಿ, ಸಮುದಾಯದ ಬಾಂಧವ್ಯ, ಸೇವಾ ಮನೋಭಾವದ ಪ್ರತೀಕವಾಗಿ ರೂಪುಗೊಂಡಿದೆ.

ತಾಲ್ಲೂಕಿನ ಹೂವಿನಶಿಗ್ಲಿ ವಿರಕ್ತ ಮಠದಲ್ಲಿ ಜ.13ರಿಂದ ಆರಂಭವಾಗಿ 15ನವರೆಗೆ ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಠದ ಪೀಠಾಧ್ಯಕ್ಷರಾದ ಚನ್ನವೀರ ಸ್ವಾಮಿಗಳು, ಕುಂದಗೋಳದ ಶ್ರೀ ಬಸವಣ್ಣಜ್ಜನವರು, ಜಮಖಂಡಿಯ ಗದಿಗೆಯ್ಯ ದೇವರ ನೇತೃತ್ವದಲ್ಲಿ ವಿವಿಧ ವಾದ್ಯಗಳೊಂದಿಗೆ ತೆರಳಿ ಗ್ರಾಮದ ಪ್ರತಿ ಓಣಿಗಳಲ್ಲಿ ದವಸ-ಧಾನ್ಯಗಳು ಹಾಗೂ ರೊಟ್ಟಿಗಳನ್ನು ಸಂಗ್ರಹಿಸುವ ‘ರೊಟ್ಟಿ ಜಾತ್ರೆ’ ಗ್ರಾಮದಲ್ಲಿ ಭಾನುವಾರ ಭಕ್ತಿ ಭಾವದಿಂದ ನೆರವೇರಿತು. ಮಠದ ಖಡಕ್ ರೊಟ್ಟಿ– ಕರಿಂಡಿ ಜಾತ್ರೆಗೆ ಗ್ರಾಮದ ಮಹಿಳೆಯರು ರೊಟ್ಟಿ ಬುಟ್ಟಿ ಹೊತ್ತುಕೊಂಡು ಸಾಗಿದರು.

ADVERTISEMENT

45 ವರ್ಷಗಳಿಂದ ನಡೆಯುತ್ತಿರುವ ಈ ಜಾತ್ರಾ ಮಹೋತ್ಸವಕ್ಕೆ ಒಂದು ವಾರ ಮೊದಲು ಗ್ರಾಮದ ಸರ್ವಜನಾಂಗದವರು ರೊಟ್ಟಿ, ದವಸ, ಧನ ಧಾನ್ಯದ ಸೇವೆಯನ್ನು ಕೈಲಾದ ಮಟ್ಟಿಗೆ ಶ್ರೀಮಠಕ್ಕೆ ಸಮರ್ಪಿಸುವುದು ಸಂಪ್ರದಾಯವಾಗಿತ್ತು. ಕಳೆದ ವರ್ಷದಿಂದ ಶ್ರೀಗಳು ಎತ್ತಿನ ಬಂಡಿಗಳ ಮೂಲಕ ವಿವಿಧ ವಾದ್ಯ ಮೇಳಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮೂಲಕ ನೇರವಾಗಿ ಭಕ್ತರಿಂದಲೇ ರೊಟ್ಟಿ, ದವಸ ಧಾನ್ಯ ಸಂಗ್ರಹಿಸಿ ಮಠಕ್ಕೆ ತರುವ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದರು. 

ಮಠದ ಶ್ರೀಗಳೇ ಭಕ್ತರ ಮನೆ ಬಾಗಿಲಿಗೆ ತೆರಳಿ ರೊಟ್ಟಿಗಳನ್ನು ಸಂಗ್ರಹಿಸಿದ್ದು, ‘ಭಗವಂತನೇ ಭಕ್ತನ ಮನೆಗೆ ತೆರಳಿ ಭಕ್ತಿ ಸ್ವೀಕರಿಸಿದಂತೆ’ ಕಂಗೊಳಿಸಿತು. ಸಂಭ್ರಮದಿಂದ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಗ್ರಾಮವನ್ನು ಸ್ವಚ್ಛಗೊಳಿಸಿ ತಳಿರು ತೋರಣಗಳಿಂದ ಶೃಂಗರಿಸಿ ಶ್ರೀಗಳನ್ನು ಸ್ವಾಗತಿಸಿದರು.

ಗ್ರಾಮದ ಪ್ರತಿ ಓಣಿಯಲ್ಲೂ ಭಕ್ತರು ತಮ್ಮ ಮನೆಯ ಮುಂದೆ ತಳಿರು ತೋರಣ ಕಟ್ಟಿ, ರಂಗೋಲಿ ಹಾಕಿದ್ದರು. ಜಾತ್ರೆಯ ಪ್ರಸಾದ ಸೇವೆಗಾಗಿ ಪ್ರತಿ ಮನೆಯಲ್ಲಿ ಮೊದಲೇ ಸಿದ್ಧಪಡಿಸಿದ್ದ ನೂರಾರು ರೊಟ್ಟಿಗಳನ್ನು ಎಣ್ಣೆ ಬುಟ್ಟಿಗೆ ಹೊಸ ಬಟ್ಟೆ ಕಟ್ಟಿ ಪೂಜೆ ಮಾಡಿ ತಲೆಯ ಮೇಲೆ ಹೊತ್ತು ಕಾಯುತ್ತಿದ್ದ ತಾಯಂದಿರ ತಲೆಯ ಮೇಲಿನ ರೊಟ್ಟಿ ಬುತ್ತಿಯನ್ನು ಮುಟ್ಟಿ ಆಶೀರ್ವದಿಸಿದ ಬಳಿಕ ಸಾಲುಗಟ್ಟಿ ಬರುತ್ತಿದ್ದ ಎತ್ತಿನ ಬಂಡಿಯಲ್ಲಿ ರೊಟ್ಟಿ ಸಂಗ್ರಹಿಸಲಾಗುತ್ತಿತ್ತು. ನೂರಾರು ಮಹಿಳೆಯರು ರೊಟ್ಟಿ ಬುಟ್ಟಿ ಹೊತ್ತು ಮೆರವಣಿಗೆ ಮೂಲಕ ಮಠದವರೆಗೂ ಸಾಗಿದ್ದು ರೊಟ್ಟಿ ಜಾತ್ರೆಯಂತೆ ಕಂಗೊಳಿಸಿತು.

ಚನ್ನವೀರ ಸ್ವಾಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.