ADVERTISEMENT

ಶಿಕ್ಷಣದಿಂದ ಉತ್ತಮ ನಾಗರೀಕರ ನಿರ್ಮಾಣ

ಸವಣೂರಿನ ಸಂವಿಧಾನ ದಿನಾಚರಣೆಯಲ್ಲಿ ತಹಶೀಲ್ದಾರ್‌ ರವಿಕುಮಾರ್ ಕೊರವರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 6:48 IST
Last Updated 27 ನವೆಂಬರ್ 2025, 6:48 IST
ಸವಣೂರು ಪಟ್ಟಣದ ಡಾ.ವಿ.ಕೃ ಗೋಕಾಕ ಸಾಂಸ್ಕೃತಿಕ ಭವನದಲ್ಲಿ ಬುಧವಾರ ಜರುಗಿದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ತಹಶೀಲ್ದಾರ್‌ ರವಿಕುಮಾರ್ ಕೊರವರ ಉದ್ಘಾಟಿಸಿದರು
ಸವಣೂರು ಪಟ್ಟಣದ ಡಾ.ವಿ.ಕೃ ಗೋಕಾಕ ಸಾಂಸ್ಕೃತಿಕ ಭವನದಲ್ಲಿ ಬುಧವಾರ ಜರುಗಿದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ತಹಶೀಲ್ದಾರ್‌ ರವಿಕುಮಾರ್ ಕೊರವರ ಉದ್ಘಾಟಿಸಿದರು   

ಸವಣೂರು: ವಿದ್ಯಾರ್ಥಿಗಳು ಕಲಿಯುವ ಶಿಕ್ಷಣ ಕೇವಲ ಉದ್ಯೋಗ ಪಡೆಯಲು ಸೀಮಿತವಾಗದೆ, ಶಿಕ್ಷಣ ಪಡೆದು ಉತ್ತಮ ನಾಗರೀಕರಾದಾಗ ಮಾತ್ರ ಸಂವಿಧಾನ ದಿನ ಅರ್ಥಪೂರ್ಣವಾಗಲಿದೆ ಎಂದು ತಹಶೀಲ್ದಾರ್‌ ರವಿಕುಮಾರ್ ಕೊರವರ ತಿಳಿಸಿದರು.

ಪಟ್ಟಣದ ಡಾ.ವಿ.ಕೃ.ಗೋಕಾಕ ಸಾಂಸ್ಕೃತಿಕ ಭವನದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಹಾಗೂ ವಿವಿಧ ದಲಿತ ಸಂಘಟನೆಗಳ ಒಕ್ಕೂಟಗಳ ಸಹಯೋಗದೊಂದಿಗೆ ಬುಧವಾರ ಜರುಗಿದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಡೀ ವಿಶ್ವದಲ್ಲಿಯೇ ನಮ್ಮ ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದೆ. ಭಾರತದ ಸಂವಿಧಾನವು ಕೇವಲ ಕಾನೂನು ಪುಸ್ತಕವಲ್ಲ; ಅದು ಜನರ ಆಶಯಗಳು, ಹಕ್ಕುಗಳು, ಜವಾಬ್ದಾರಿಗಳು ಮತ್ತು ಅಭಿವೃದ್ಧಿಯ ದಿಕ್ಕು ತೋರುವ ದೀಪಸ್ತಂಭವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾರ್ಗದರ್ಶನದಲ್ಲಿ ರಚನೆಗೊಂಡ ನಮ್ಮ ಸಂವಿಧಾನವು ವಿಶ್ವದಲ್ಲೇ ಅತ್ಯಂತ ದೊಡ್ಡ ಮತ್ತು ಪ್ರಗತಿಪರ ಸಂವಿಧಾನಗಳಲ್ಲಿ ಒಂದಾಗಿದೆ. ನಮ್ಮ ಸಂವಿಧಾನದ ಉದ್ದೇಶ ಕಾನೂನನ್ನು ಯಾರು ಗೌರವಿಸುತ್ತಾರೆ ಅವರೇ ನಿಜವಾದ ನಾಗರೀಕರು ಎಂಬುದಾಗಿತ್ತು. ಸಮಾಜದಲ್ಲಿ ಸಮಾನತೆಯನ್ನು ತರುವುದು ಅಂಬೇಡ್ಕರ್ ಅವರ ಮುಖ್ಯ ಉದ್ದೇಶವಾಗಿತ್ತು. ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸುಭಾಸ ಮಜ್ಜಗಿ ಮಾತನಾಡಿ, ಸ್ವಾತಂತ್ರ್ಯ ಲಭಿಸಿದ ನಂತರ ನಮ್ಮ ದೇಶವನ್ನು ಮುನ್ನಡೆಸಲು ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠವಾದ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ನೀಡಿದರು. ಇದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಭವ್ಯ ಭಾರತದ ಮುಂದಿನ ಪ್ರಜೆಗಳದ್ದಾಗಿದೆ ಎಂದರು.

ADVERTISEMENT

ಸಂವಿಧಾನ ದಿನದ ಕುರಿತಾಗಿ ಏರ್ಪಡಿಸಿದ್ದ ಚಿತ್ರಕಲೆ, ಭಾಷಣ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ವಿಜೇತರಾದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಮಾಣ‌ಪತ್ರ ಹಾಗೂ ಸಂವಿಧಾನ ಪೀಠಿಕೆಯ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಪಟ್ಟಣದ ಅಂಬೇಡ್ಕರ್‌ ವೃತ್ತದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ನಂತರ, ಶಾಲಾ ವಿದ್ಯಾರ್ಥಿಗಳಿಂದ ಸಂವಿಧಾನ ದಿನ ಕುರಿತು ಭಿತ್ತಿಪತ್ರ ಪ್ರದರ್ಶನದೊಂದಿಗೆ ಅಂಬೇಡ್ಕರ್‌ ಅವರ ವೇಷಭೂಷಣ ತೊಟ್ಟ ವಿದ್ಯಾರ್ಥಿ ಮೆರವಣಿಗೆ ಜರುಗಿತು.

ಶ್ರೀಮತಿ ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಮಹೇಂದ್ರ ದೊಡ್ಡಮನಿ ಸಂವಿಧಾನದ ಕುರಿತು ಉಪನ್ಯಾಸ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜೀವನ್ ಪಮ್ಮಾರ, ಎಸ್.ಐ ರಂಗನಾಥ್ ಅಂತರಗಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಫ್. ಬಾರ್ಕಿ, ಕೃಷಿ ಸಹಾಯಕ ನಿರ್ದೇಶಕಿ ಸವಿತಾ ಚಕ್ರಾಶಾಲಿ, ಶಿರಸ್ತೇದಾರ ಎಸ್.ಎಸ್ ಪಾಟೀಲ, ದಲಿತ ಮುಖಂಡರಾದ ಉಮೇಶ್ ಮೈಲಮ್ಮನವರ, ಇದ್ದರು.

ನಿಲಯ ಮೇಲ್ವಿಚಾರಕರಾದ ಶಶಿಧರ ಚರಂತಿಮಠ, ಸರೋಜಾ ಕುಂಬಾರ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.