ADVERTISEMENT

ಸವಣೂರಿನ ಶಿಕ್ಷಕನ ಮೆರವಣಿಗೆ ಪ್ರಕರಣ: ಮುಖ್ಯ ಶಿಕ್ಷಕ ಅಮಾನತು

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 17:07 IST
Last Updated 21 ಡಿಸೆಂಬರ್ 2025, 17:07 IST
   

ಹಾವೇರಿ: ‘ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂಬ ಆರೋಪದಡಿ ಸರ್ಕಾರಿ ಉರ್ದು ಶಾಲೆ ಶಿಕ್ಷಕ ಜಗದೀಶ್ ವಗ್ಗಣ್ಣನವರ ಅವರನ್ನು ಥಳಿಸಿ ಚಪ್ಪಲಿ ಹಾರ ಹಾಕಿ ರಸ್ತೆಗಳಲ್ಲಿ ಮೆರವಣಿಗೆ ಮಾಡಿದ್ದ ಪ್ರಕರಣದಲ್ಲಿ ಶಾಲೆ ಮುಖ್ಯ ಶಿಕ್ಷಕ (ಪ್ರಭಾರ) ರಾಜೇಸಾಬ ಕೆ. ಸಂಕನೂರು ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.

ಈ ಬಗ್ಗೆ ಆದೇಶ ಹೊರಡಿಸಿರುವ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನ ದಂಡಿನ, ‘ಸರ್ಕಾರಿ ಉರ್ದು ಮಾದರಿ ಪ್ರಾಥಮಿಕ ಪಿ.ಎಂ.ಶ್ರೀ ಶಾಲೆಯ ಮುಖ್ಯಶಿಕ್ಷಕ ರಾಜೇಸಾಬ, ಸ್ವಯಂಕೃತ ಅಪರಾಧದಿಂದ ಶಾಲೆಯಲ್ಲಿ ಅಹಿತಕರ ಘಟನೆ ನಡೆಯಲು ಮೂಲ ಕಾರಣರಾಗಿದ್ದಾರೆ’ ಎಂದು ಉಲ್ಲೇಖಿಸಿದ್ದಾರೆ.

‘ಘಟನೆಯನ್ನು ಇಲಾಖೆಗೆ ತಿಳಿಸದೇ ಮರೆಮಾಚಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದನ್ನು ಕರ್ತವ್ಯಲೋಪವೆಂದು ಪರಿಗಣಿಸಿ ಅಮಾನತುಗೊಳಿಸಲಾಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ಅನುಮತಿ ಇಲ್ಲದೇ ರಜೆ: ‘ಡಿ. 10ರಂದು ಶಾಲೆಗೆ ನುಗ್ಗಿದ್ದ ಪೋಷಕರು ಹಾಗೂ ಸ್ಥಳೀಯರು, ಶಿಕ್ಷಕ ಜಗದೀಶ ಅವರನ್ನು ಥಳಿಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದರು. ಇದೇ ದಿನವೇ ರಜೆಯಲ್ಲಿರುವುದಾಗಿ ಮುಖ್ಯಶಿಕ್ಷಕ ರಾಜೇಸಾಬ ಹೇಳಿದ್ದರು. ಆದರೆ, ಅವರು ಯಾವುದೇ ಅಧಿಕಾರಿಯಿಂದಲೂ ರಜೆಗೆ ಅನುಮತಿ ಪಡೆದಿರಲಿಲ್ಲ. ಕೃತ್ಯ ನಡೆಯುವುದು ಗೊತ್ತಿದ್ದರಿಂದಲೇ ಅವರು ಶಾಲೆಗೆ ಬಂದಿರಲಿಲ್ಲವೆಂಬ ಅನುಮಾನವಿದೆ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

‘ಶಾಲೆಯ ನೂತನ ಎಸ್‌ಡಿಎಂಸಿ ರಚನೆಯಲ್ಲೂ ಅಕ್ರಮ ನಡೆದಿರುವುದಾಗಿ ಜನರು ದೂರು ನೀಡಿದ್ದಾರೆ. ಜೊತೆಗೆ, ಎಸ್‌ಡಿಎಂಸಿಯಲ್ಲಿ ಭಿನ್ನಾಭಿಪ್ರಾಯವಿತ್ತು. ಡಿ. 10ರಂದು ನಡೆದ ಘಟನೆಯ ಬಗ್ಗೆ ನಾಲ್ಕು ತಿಂಗಳ ಹಿಂದೆಯೇ ಮುಖ್ಯಶಿಕ್ಷಕನಿಗೆ ಮಾಹಿತಿಯಿತ್ತು. ಅದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರದೇ ಕರ್ತವ್ಯಲೋಪ ಎಸಗಿದ್ದಾರೆ. ಘಟನೆ ಬಳಿಕ ನೋಟಿಸ್ ನೀಡಿದರೂ ಉತ್ತರ ನೀಡಿಲ್ಲ’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

‘ಡಿ. 10ರಂದು ನಡೆದ ಶಿಕ್ಷಕನ ಮೆರವಣಿಗೆ ವಿಷಯ ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ಬಂದಿದೆ. ಇದರಿಂದ ಇಲಾಖೆ ಮಾನ ಮರ್ಯಾದೆ ಹರಾಜಾಗಿದೆ. ಘಟನೆ ಬಗ್ಗೆ ಗೊತ್ತಿದ್ದರೂ ಮೌನವಾಗಿದ್ದುಕೊಂಡು ಶಿಕ್ಷಕನಿಗೆ ಅವಮಾನವಾಗಲು ಕಾರಣರಾದ ಆರೋಪದಡಿ ಮುಖ್ಯಶಿಕ್ಷಕನನ್ನು ಅಮಾನತು ಮಾಡಲಾಗಿದೆ" ಎಂಬುದು ಆದೇಶದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.