ADVERTISEMENT

ವಿದ್ಯಾರ್ಥಿಗಳ ಓಡಾಟಕ್ಕೆ ಟ್ರ್ಯಾಕ್ಟರ್‌: ಮಕ್ಕಳ ಜೀವದ ಜೊತೆ ಶಿಕ್ಷಕರ ಚೆಲ್ಲಾಟ

ಕ್ರೀಡಾಕೂಟ: ವಿದ್ಯಾರ್ಥಿಗಳ ಓಡಾಟಕ್ಕೆ ಟ್ರ್ಯಾಕ್ಟರ್‌–ತೆರೆದ ವಾಹನ ಬಳಕೆ

ಸಂತೋಷ ಜಿಗಳಿಕೊಪ್ಪ
Published 27 ಆಗಸ್ಟ್ 2025, 3:03 IST
Last Updated 27 ಆಗಸ್ಟ್ 2025, 3:03 IST
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದಿಂದ ಯಳವಟ್ಟಿ ಗ್ರಾಮಕ್ಕೆ ವಿದ್ಯಾರ್ಥಿಗಳನ್ನು ಟ್ರ್ಯಾಕ್ಟರ್‌ನಲ್ಲಿ ಕರೆದೊಯ್ಯಲಾಯಿತು
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದಿಂದ ಯಳವಟ್ಟಿ ಗ್ರಾಮಕ್ಕೆ ವಿದ್ಯಾರ್ಥಿಗಳನ್ನು ಟ್ರ್ಯಾಕ್ಟರ್‌ನಲ್ಲಿ ಕರೆದೊಯ್ಯಲಾಯಿತು   

ಹಾವೇರಿ: ಜಿಲ್ಲೆಯಾದ್ಯಂತ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳು ಹುಮ್ಮಸ್ಸಿನಿಂದ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ, ಮಕ್ಕಳನ್ನು ಕ್ರೀಡಾಕೂಟ ಸ್ಥಳಕ್ಕೆ ಟ್ರ್ಯಾಕ್ಟರ್ ಹಾಗೂ ತೆರೆದ ವಾಹನಗಳಲ್ಲಿ ಕರೆದೊಯ್ಯುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಬೆಳೆಸುವುದು ಮುಖ್ಯವಾಗಿದೆ. ಇದೇ ಕಾರಣಕ್ಕೆ ಜಿಲ್ಲೆಯಾದ್ಯಂತ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ. ಇದಾದ ನಂತರ, ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದ ಕ್ರೀಡಾಕೂಟಗಳು ಜರುಗಲಿವೆ.

ಎಲ್ಲ ಮಟ್ಟದ ಕ್ರೀಡಾಕೂಟಕ್ಕೂ ಕ್ಲಸ್ಟರ್ ಮಟ್ಟದ ಕ್ರೀಡಾಕೂಟವೇ ಮುಖ್ಯವಾಗಿದೆ. ಕ್ಲಸ್ಟರ್ ವಲಯದಲ್ಲಿರುವ ಎಲ್ಲ ಶಾಲೆಯ ಅರ್ಹ ವಿದ್ಯಾರ್ಥಿ– ವಿದ್ಯಾರ್ಥಿನಿಯರು, ತಮ್ಮ ಪ್ರತಿಭೆಗೆ ಅನುಗುಣವಾಗಿ ಕ್ರೀಡಾಕೂಟದಲ್ಲಿ ಭಾಗವಹಿಸಬಹುದು. ಇಲ್ಲಿ ಉತ್ತಮ ಪ್ರದರ್ಶನ ತೋರುವ ವಿದ್ಯಾರ್ಥಿಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ.

ADVERTISEMENT

ಕ್ಲಸ್ಟರ್ ಮಟ್ಟದಲ್ಲಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಹೆಚ್ಚಿನ ವಿದ್ಯಾರ್ಥಿಗಳು ಆಸಕ್ತಿ ತೋರಿಸುತ್ತಾರೆ. ಅಂಥ ವಿದ್ಯಾರ್ಥಿಗಳನ್ನು ಕ್ರೀಡಾಕೂಟ ನಡೆಯುವ ಸ್ಥಳಕ್ಕೆ ಕರೆದೊಯ್ಯುವ ಹಾಗೂ ವಾಪಸು ಕರೆತರುವ ಜವಾಬ್ದಾರಿಯನ್ನು ಆಯಾ ಶಾಲೆ ಶಿಕ್ಷಕರು ವಹಿಸಿಕೊಳ್ಳಬೇಕಾಗುತ್ತದೆ. ಜೊತೆಗೆ, ಅದಕ್ಕೆ ತಗುಲುವ ವೆಚ್ಚವನ್ನು ಶಾಲೆ ಅನುದಾನದಲ್ಲಿ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಜೊತೆಗೆ, ಕೆಲವು ಕಡೆಗಳಲ್ಲಿ ಸ್ಥಳೀಯ ಮುಖಂಡರು ಸಹ ಮಕ್ಕಳ ಖರ್ಚಿಗೆ ಹಣ ಹೊಂದಿಸಿಕೊಡುತ್ತಿದ್ದಾರೆ. ಇಷ್ಟಾದರೂ ಶಿಕ್ಷಕರು, ಟ್ರ್ಯಾಕ್ಟರ್ ಹಾಗೂ ತೆರೆದು ವಾಹನ ಬಳಸುವ ಮೂಲಕ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.

‘ಶಾಲಾ ಮಕ್ಕಳನ್ನು ಕ್ರೀಡೆ ಅಥವಾ ಯಾವುದಾದರೂ ಕಾರ್ಯಕ್ರಮಕ್ಕಾಗಿ ಒಂದು ಸ್ಥಳದಿಂದ ಬೇರೊಂದು ಸ್ಥಳಕ್ಕೆ ಕೊಂಡೊಯ್ಯುವ ಸಂದರ್ಭಗಳಲ್ಲಿ ಪ್ಯಾಸೆಂಜರ್ ವಾಹನ ಬಳಸಬೇಕು. ಬೇರೆ ಯಾವುದೇ ವಾಹನಗಳಲ್ಲಿ ಅಪಾಯಕಾರಿ ರೀತಿಯಲ್ಲಿ ಕೊಂಡೊಯ್ಯಬಾರದು’ ಎಂದು ಶಿಕ್ಷಣ ಇಲಾಖೆಯೇ ಖಡಕ್ ಆದೇಶವನ್ನೂ ಹೊರಡಿಸಿದೆ. ಈ ಆದೇಶಕ್ಕೂ ಕೆಲ ಶಿಕ್ಷಕರು, ಕಿಮ್ಮತ್ತು ನೀಡುತ್ತಿಲ್ಲ. ‘ಏನು ಆಗುವುದಿಲ್ಲ’ ಎನ್ನುತ್ತಲ್ಲೇ ಮಕ್ಕಳನ್ನು ಟ್ರ್ಯಾಕ್ಟರ್‌ನಲ್ಲಿ ಕುರಿಗಳ ರೀತಿಯಲ್ಲಿ ತುಂಬಿಕೊಂಡು ಕರೆದೊಯ್ಯುತ್ತಿದ್ದು, ಈ ವರ್ತನೆಗೆ ಪೋಷಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಒಂದೇ ಟ್ರ್ಯಾಕ್ಟರ್‌ನಲ್ಲಿ 30ಕ್ಕೂ ಹೆಚ್ಚು ಮಕ್ಕಳು: ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಸೋಮವಾರ (ಆಗಸ್ಟ್ 25) ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿತ್ತು. ಈ ಕ್ರೀಡಾಕೂಟಕ್ಕೆ ಮಕ್ಕಳನ್ನು ಟ್ರ್ಯಾಕ್ಟರ್‌ನಲ್ಲಿ ಕರೆತಂದಿದ್ದ ದೃಶ್ಯಗಳು ಕಂಡುಬಂದವು.

ಬೊಮ್ಮನಹಳ್ಳಿ ಕ್ಲಸ್ಟರ್‌ ಮಟ್ಟದ ಕ್ರೀಡಾಕೂಟದಲ್ಲಿ ಸ್ಥಳೀಯ ಶಾಲೆಗಳು, ಯಳವಟ್ಟಿ ಶಾಲೆಗಳು ಹಾಗೂ ಸುತ್ತಮುತ್ತಲಿನ ಶಾಲೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಪೈಕಿ ಯಳವಟ್ಟಿ ಗ್ರಾಮದ ಸರ್ಕಾರಿ ಸಂಯುಕ್ತ ಪ್ರೌಢಶಾಲೆ ವಿದ್ಯಾರ್ಥಿ–ವಿದ್ಯಾರ್ಥಿನಿಯರನ್ನು ಟ್ರ್ಯಾಕ್ಟರ್‌ನಲ್ಲಿ 4 ಕಿ.ಮೀ. ದೂರದಲ್ಲಿರುವ ಬೊಮ್ಮನಹಳ್ಳಿಗೆ ಕರೆತರಲಾಗಿತ್ತು. ಕ್ರೀಡಾಕೂಟ ಮುಗಿದ ಬಳಿಕವೂ ಅದೇ ಟ್ರ್ಯಾಕ್ಟರ್‌ನಲ್ಲಿ ಬೊಮ್ಮನಹಳ್ಳಿಯಿಂದ ಯಳವಟ್ಟಿಗೆ ಕರೆದೊಯ್ಯಲಾಗಿದೆ.

ಮಕ್ಕಳನ್ನು ಟ್ರ್ಯಾಕ್ಟರ್‌ನಲ್ಲಿ ಹತ್ತಿಸಿದ್ದ ಶಿಕ್ಷಕರು, ತಾವಷ್ಟೇ ಬೈಕ್‌ನಲ್ಲಿ ಹೆಲ್ಮೆಟ್‌ ಹಾಕಿಕೊಂಡು ಮುಂದಕ್ಕೆ ತೆರಳಿದರು. ಮಕ್ಕಳಿದ್ದ ಟ್ರ್ಯಾಕ್ಟರ್‌ನಲ್ಲಿ ಒಬ್ಬ ಶಿಕ್ಷಕ ಸಹ ಇರಲಿಲ್ಲ. ಮಕ್ಕಳನ್ನು ಕುರಿಗಳ ರೀತಿಯಲ್ಲಿ ಟ್ರ್ಯಾಕ್ಟರ್‌ನಲ್ಲಿ ಹತ್ತಿಸಿ ಕಳುಹಿಸಿದರೆ, ಮಾರ್ಗಮಧ್ಯೆ ಏನಾದರೂ ಅನಾಹುತವಾದರೆ ಯಾರು ಹೊಣೆ ? ಎಂದು ಪ್ರತ್ಯಕ್ಷದರ್ಶಿಗಳು ಪ್ರಶ್ನಿಸಿದರು.

‘ಕೆಎ 48 ಟಿ 2131 ಟ್ರ್ಯಾಕ್ಟರ್‌ನಲ್ಲಿ ಮಕ್ಕಳನ್ನು ಕ್ರೀಡಾಕೂಟಕ್ಕೆ ಕರೆತರಲಾಗಿತ್ತು. 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಸಹ ಟ್ರ್ಯಾಕ್ಟರ್‌ನಲ್ಲಿದ್ದರು. ಇದರ ಚಾಲಕನಿಗೆ ಚಾಲನಾ ಪರವಾನಗಿ ಇದೆಯೋ ಇಲ್ಲವೋ ಎಂಬ ಮಾಹಿತಿ ಗೊತ್ತಿಲ್ಲ. ಆದರೆ, ಈ ರೀತಿ ಮಕ್ಕಳನ್ನು ಕರೆದೊಯ್ಯುವುದು ಅಪಾಯಕಾರಿ’ ಎಂದು ಹೇಳಿದರು.

‘ಯಳವಟ್ಟಿಗೆ ಹೋಗುವ ಮಾರ್ಗಮಧ್ಯೆ ದೊಡ್ಡ ಕೆರೆಯಿದೆ. ಅದು ಸಹ ಅಪಾಯಕಾರಿ ಸ್ಥಿತಿಯಲ್ಲಿದೆ. ಜೊತೆಗೆ, ಯಳವಟ್ಟಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳೂ ಗುಂಡಿ ಬಿದ್ದು ಹಾಳಾಗಿವೆ. ಇಂಥ ರಸ್ತೆಯಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಟ್ರ್ಯಾಕ್ಟರ್‌ ಹೋಗುವಾಗ, ಅನಾಹುತ ಉಂಟಾಗುವ ಸಾಧ್ಯತೆ ಹೆಚ್ಚು’ ಎಂದು ಅಭಿಪ್ರಾಯಪಟ್ಟರು.

ಕಠಿಣ ಸೂಚನೆ ಅಗತ್ಯ: ‘ಜಿಲ್ಲೆಯಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾ ಪ್ರತಿಭೆಗಳು ಹೆಚ್ಚಿವೆ. ಅಂಥ ಪ್ರತಿಭೆಗಳನ್ನು ಗುರುತಿಸುವುದು ಶಿಕ್ಷಣ ಇಲಾಖೆ ಹಾಗೂ ಜನರ ಜವಾಬ್ದಾರಿ. ಇದಕ್ಕಾಗಿ ಕ್ರೀಡಾಕೂಟ ಆಯೋಜಿಸುವುದು ಒಳ್ಳೆಯ ಕ್ರಮ. ಆದರೆ, ಕ್ರೀಡಾಕೂಟಕ್ಕೆ ಮಕ್ಕಳನ್ನು ಕರೆತರುವ ಬಗ್ಗೆ ಕಠಿಣ ನಿಯಮಗಳನ್ನು ರೂಪಿಸಿ ಜಾರಿಗೆ ತರಬೇಕು’ ಎಂದು ಪೋಷಕರು ಆಗ್ರಹಿಸಿದ್ದಾರೆ.

‘ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದ ಕ್ರೀಡೆಗಷ್ಟೇ ಅನುದಾನ ಇರುವುದಾಗಿ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಕ್ಲಸ್ಟರ್‌ ಮಟ್ಟಕ್ಕೂ ಅನುದಾನ ನೀಡಬೇಕು. ಜೊತೆಗೆ, ಪ್ಯಾಸೆಂಜರ್ ವಾಹನಗಳಲ್ಲಿ ಸುರಕ್ಷಿತ ರೀತಿಯಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಶಿಕ್ಷಕರಿಗೆ ಎಚ್ಚರಿಕೆ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

‘ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಆಯೋಜನೆಗೆ ಅನುದಾನವಿಲ್ಲ. ಮಳೆಗಾಲದಲ್ಲಿ ಕೆಸರಾದ ಮೈದಾನದಲ್ಲಿ ಆಟಗಳು ನಡೆಯುತ್ತಿವೆ. ತಾತ್ಕಾಲಿಕ ಕ್ರಮ ಕೈಗೊಳ್ಳಲು ಸಹ ಹಣವಿಲ್ಲವೆಂದು ಶಿಕ್ಷಕರು ಹೇಳುತ್ತಿದ್ದಾರೆ. ಕನಿಷ್ಠ ಸೌಲಭ್ಯಕ್ಕಾದರೂ ಸರ್ಕಾರ ಹಣ ನೀಡಬೇಕು’ ಎಂದು ಆಗ್ರಹಿಸಿದರು.

ಮಕ್ಕಳನ್ನು ಟ್ರ್ಯಾಕ್ಟರ್ ಹಾಗೂ ಅಪಾಯಕಾರಿ ವಾಹನಗಳಲ್ಲಿ ಕರೆದೊಯ್ಯುವ ವೇಳೆ ಅಪಘಾತಗಳು ಸಂಭವಿಸಿದ ಪ್ರಕರಣಗಳು ಕಣ್ಮುಂದಿವೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು
ಮಂಜಣ್ಣ ಆರ್. ಕುಂಬಾರ ಪೋಷಕ

‘ಶಿಕ್ಷಕರ ವಿರುದ್ಧ ಕ್ರಮ’

‘ಕ್ರೀಡಾಕೂಟ ಹಾಗೂ ಇತರೆ ಚಟುವಟಿಕೆಗಾಗಿ ಮಕ್ಕಳನ್ನು ಬೇರೆ ಕಡೆ ಕರೆದೊಯ್ಯುವಾಗ ಪ್ಯಾಸೆಂಜರ್ ವಾಹನಗಳನ್ನು ಬಳಸುವಂತೆ ಶಿಕ್ಷಕರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಈ ನಿಯಮ ಉಲ್ಲಂಘಿಸಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನ್ ದಂಡಿನ ತಿಳಿಸಿದರು. ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಮಕ್ಕಳನ್ನು ಅಸುರಕ್ಷಿತ ರೀತಿಯಲ್ಲಿ ಟ್ರ್ಯಾಕ್ಟರ್ ಹಾಗೂ ತೆರೆದ ವಾಹನಗಳಲ್ಲಿ ಕರೆದೊಯ್ದಿದ್ದು ಕಂಡುಬಂದರೆ ಅವರ ವಿರುದ್ಧ ಕ್ರಮ ನಿಶ್ಚಿತ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.