ADVERTISEMENT

ಹಾನಗಲ್: 308 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ

ನಿಯಮ ಪಾಲಿಸದ ಪಿಡಿಒ | ಪ್ರೌಢಶಾಲೆ ಬಾಲಕರಿಗೆ ಬಯಲು ಶೌಚವೇ ಗತಿ

ಮಾರುತಿ ಪೇಟಕರ
Published 9 ಜನವರಿ 2026, 7:51 IST
Last Updated 9 ಜನವರಿ 2026, 7:51 IST
ಹಾನಗಲ್‌ ತಾಲ್ಲೂಕಿನ ಬೈಚವಳ್ಳಿ ಸರ್ಕಾರಿ ಪ್ರೌಢಶಾಲೆ
ಹಾನಗಲ್‌ ತಾಲ್ಲೂಕಿನ ಬೈಚವಳ್ಳಿ ಸರ್ಕಾರಿ ಪ್ರೌಢಶಾಲೆ   

ಹಾನಗಲ್: ತಾಲ್ಲೂಕಿನ ಬೈಚವಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ 308 ವಿದ್ಯಾರ್ಥಿಗಳಿದ್ದು, ಒಂದೇ ಶೌಚಾಲಯವಿದೆ. ಈ ಶೌಚಾಲಯವನ್ನು 147 ಬಾಲಕಿಯರು ಬಳಸುತ್ತಿದ್ದು, 161 ಬಾಲಕರಿಗೆ ಬಯಲೇ ಗತಿಯಾಗಿದೆ. 

ಓಸ್ಯಾಟ್ ಸಂಸ್ಥೆಯಿಂದ ಸುಮಾರು ₹1 ಕೋಟಿ ವೆಚ್ಚದಲ್ಲಿ ನಡೆಯಬೇಕಿದ್ದ ಕಟ್ಟಡ ನಿರ್ಮಾಣಕ್ಕೆ ಆವರಣ ಗೋಡೆ ಕೊರತೆ ಅಡಚಣೆ ತಂದಿದೆ. 1.20 ಎಕರೆ ವಿಸ್ತೀರ್ಣದಲ್ಲಿ ಶಾಲೆ ಕಟ್ಟಡ ಮತ್ತು ಮೈದಾನವಿದೆ. ಗುಂಡಿಗಳಿದ್ದ ಆವರಣವನ್ನು ಗ್ರಾಮಸ್ಥರೇ ಶ್ರಮದಾನ ಮಾಡಿ ಸಮತಟ್ಟು ಮಾಡಿದ್ದಾರೆ. 

ಶಾಲೆಗೆ ಕಾಂಪೌಂಡ್ ನಿರ್ಮಾಣಕ್ಕೆ ನರೇಗಾ ಅಡಿ ಮಂಜೂರಾಗಿದ್ದ ಕಾಮಗಾರಿ ಸ್ಥಗಿತವಾಗಿದೆ. ಇದರಿಂದಾಗಿ, ಓಸ್ಯಾಟ್ ಸಂಸ್ಥೆ ಕಟ್ಟಡ ನಿರ್ಮಾಣಕ್ಕೆ ಹಿಂದೇಟು ಹಾಕುತ್ತಿದೆ ಎಂದು ಶಾಲಾಭಿವೃದ್ಧಿ ಸಮಿತಿಯವರು ದೂರುತ್ತಿದ್ದಾರೆ.

ADVERTISEMENT

‘ಪ್ರೌಢಶಾಲೆ ಆವರಣದ ಗೋಡೆ ನಿರ್ಮಾಣಕ್ಕೆ ಕಳೆದ ವರ್ಷ ₹ 10 ಲಕ್ಷ ಮಂಜೂರಾಗಿ ಕಾಮಗಾರಿ ಆರಂಭವಾಗಿದೆ. ಆದರೆ, ಅಡಿಪಾಯ ಹಾಕಿದ ಮೇಲೆ ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿಯವರು ಕಾಮಗಾರಿಗೆ ತಡೆಯೊಡ್ಡಿದ್ದಾರೆ. ಕಾಮಗಾರಿ ಮುಂದುವರಿಸಲು ಮನವಿ ಮಾಡಿದರೂ ಸ್ಪಂದಿಸಿಲ್ಲ’ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಂಕ್ರಣ್ಣ ತಾವರಗೇರೆ ಆರೋಪಿಸಿದ್ದಾರೆ.

‘ಶಾಲೆಯಲ್ಲಿ ಒಂದೇ ಶೌಚಾಲಯವಿದೆ. ವಿದ್ಯಾರ್ಥಿನಿಯರಿಗೆ ಅವಕಾಶ ನೀಡಿ, ವಿದ್ಯಾರ್ಥಿಗಳನ್ನು ಬಯಲಿಗೆ ಕಳಿಸಬೇಕಾಗಿದೆ. ಕಾಂಪೌಂಡ್ ಹಾಗೂ ಶೌಚಾಲಯ ನಿರ್ಮಾಣಕ್ಕೂ ಕಾಮಗಾರಿ ಆರಂಭಿಸಿ, ಅರ್ಧಕ್ಕೆ ನಿಲ್ಲಿಸಲಾಗಿದೆ. ಇದನ್ನು ಪ್ರಶ್ನಿಸಿದರೆ, ‘ಪಿಡಿಒ ಅವರು ನಿಯಮ ಪಾಲಿಸದೇ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದ್ದರಿಂದ, ಯೋಜನೆಯಲ್ಲಿ ದೋಷವಿದೆ’ ಎಂದು ಕಾರ್ಯನಿರ್ವಾಹಕ ಅಧಿಕಾರಿ ಹೇಳುತ್ತಿದ್ದಾರೆ’ ಎಂದು ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ ದೂರಿದರು.

‘ಗ್ರಾಮಸ್ಥರ ಶ್ರಮದಾನದಿಂದ ಶಾಲೆಗೆ ಆಟದ ಮೈದಾನ ಸಿಕ್ಕಿದೆ. ಇದಕ್ಕೆ ಗ್ರಾಮಸ್ಥರ ದೊಡ್ಡ ಮನಸ್ಸೇ ಕಾರಣ. ವಿದ್ಯಾರ್ಥಿಗಳ ಶೌಚಾಲಯ ಸಮಸ್ಯೆ ಬಗೆಹರಿಸಲು ಕ್ಷೇತ್ರ ಶಿಕ್ಷಣಾಧಿಕಾರಿಯವರು ಗಮನ ಹರಿಸಬೇಕು’ ಎಂದು ಸದಸ್ಯರಾದ ತಮ್ಮಣ್ಣ ಅಲಿಲವಾಡ, ಶ್ರೀಕಾಂತ ಅರಳೇಶ್ವರ ಒತ್ತಾಯಿಸಿದ್ದಾರೆ.

‘ನಿಯಮ ಗಮನಿಸಿದ ಪಿಡಿಒ’

‘ಶಾಲೆ ಆವರಣದ ಗೋಡೆ ಕಾಮಗಾರಿಯನ್ನು ತಾಂತ್ರಿಕ ಕಾರಣದಿಂದ ಸ್ಥಗಿತಗೊಳಿಸಲಾಗಿದೆ. ಅಲ್ಲಿನ ಪಿಡಿಒ ನಿಯಮಗಳನ್ನು ಗಮನಿಸದೇ ಮಂಜೂರು ನೀಡಿದ್ದು ಕಾಮಗಾರಿ ನಿಲ್ಲಲು ಕಾರಣವಾಗಿದೆ’ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ ತಿಳಿಸಿದ್ದಾರೆ.

‘ಹೊಸ ಕ್ರಿಯಾಯೋಜನೆ ಮಾಡಿ ಕೆಲಸ ಮಾಡಬೇಕಾಗಿದೆ. ಶೀಘ್ರ ತಾಂತ್ರಿಕ ದೋಷಗಳನ್ನು ಪರಿಹರಿಸಲು ಜಿಲ್ಲಾ ಪಂಚಾಯಿತಿಗೆ ಮನವಿ ಮಾಡಿ ಎಲ್ಲ ಸಹಕಾರ ನೀಡಲಾಗುವುದು. ಈ ಬಾರಿಯ ಕಾಮಗಾರಿಗಳಲ್ಲಿ ಶಾಲೆಗೆ ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಲಾಗುವುದು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.