
ರಾಣೆಬೆನ್ನೂರು: ಮೆಕ್ಕೆಜೋಳ, ಭತ್ತ ಹಾಗೂ ಕಬ್ಬಿನ ಬೆಳೆಗಳಿಗೆ ವೈಜ್ಞಾನಿಕ ಮಾದರಿಯಲ್ಲಿ ಬೆಲೆ ನಿಗದಿಪಡಿಸಬೇಕೆಂದು ಒತ್ತಾಯಿಸಿ ರಾಣೆಬೆನ್ನೂರು ತಾಲ್ಲೂಕಿನ ಮಾಕನೂರು ಕ್ರಾಸ್‌ಬಳಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾ ಮೆರವಣಿಗೆಯು ಕೊಡಿಯಾಲ ಹೊಸಪೇಟೆಯ ವಾಲ್ಮೀಕಿ ವೃತ್ತದ ಬಳಿ ವಾಲ್ಮೀಕಿ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರತಿಭಟನಾ ಮೆರವಣಿಗೆ ಆರಂಭವಾಯಿತು.
ತಾಲ್ಲೂಕಿನ ರೈತರು, ವಿವಿಧ ಮಠಾಧೀಶರು ಕೊಡಿಯಾಲ ಹೊಸಪೇಟೆಯಿಂದ ವಾಲ್ಮೀಕಿ ವೃತ್ತದಿಂದ ಮಾಕನೂರು ಕ್ರಾಸ್‌ವರೆಗೆ 2 ಕಿಮೀ ಪಾದಯಾತ್ರೆ ಮೂಲಕ ಸಾಗಿದರು. ಮೆರವಣಿಗೆಯುದ್ದಕ್ಕೂ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿದರು. ನಂತರ ಮಾಕನೂರು ಕ್ರಾಸ್ ಬಳಿ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಮನವಿ ಸಲ್ಲಿಸಿದರು.
ರಾಜನಹಳ್ಳಿಯ ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರು ಮಾತನಾಡಿ, ಸರ್ಕಾರ ಕೂಡಲೇ ರೈತರಿಗೆ ಮೆಕ್ಕೆಜೋಳ, ಕಬ್ಬು ಹಾಗೂ ಭತ್ತಕ್ಕೆ ಸೂಕ್ತ ಬೆಂಬಲ ಬೆಲೆ ನೀಡಿ ಖರೀದಿ ಕೇಂದ್ರ ಆರಂಭಿಸಿ ರೈತರಿಗೆ ನೆರವಾಗಬೇಕು ಎಂದು ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ರೈತ ಹೋರಾಟದ ಮುಖಂಡ ರವೀಂದ್ರಗೌಡ ಪಾಟೀಲ ಅವರು ಮಾತನಾಡಿ, ಬೆಳಗಾವಿ ಜಿಲ್ಲೆಯ ಕಬ್ಬಿನ ದರ ರಾಜ್ಯದ ಎಲ್ಲ ಕಬ್ಬು ಬೆಳೆಗಾರಿಗೆ ನಿಗಧಿಯಾಗಬೇಕು. ಮೆಕ್ಕೆ ಜೋಳಕ್ಕೆ ಪ್ರತಿ ಕ್ವಿಂಟಲ್‌ಗೆ ₹ 3000 ಸಾವಿರ ಕಬ್ಬಿಗೆ ಪ್ರತಿ ಟನ್‌ಗೆ ₹ 3500 ಮತ್ತು ಭತ್ತಕ್ಕೆ ಕ್ವಿಂಟಲ್‌ಗೆ ₹ 3200 ದರ ನಿಗಧಿ ಮಾಡಿ ಕೂಡಲೇ ಖರೀದಿಕೇಂದ್ರವನ್ನು ಆರಂಭಿಸಬೇಕೆಂದು ಒತ್ತಾಯಿಸಿದರು. ಜಿಲ್ಲಾಧಿಕಾರಿಯಿಂದ ಸೂಕ್ತ ಉತ್ತರ ಸಿಗದಿದ್ದರೆ, ನ.24 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಈರಣ್ಣ ಮಾಕನೂರು ಅವರು ಮಾತನಾಡಿ, ಜಿಲ್ಲೆಯ ರೈತರು ತಾವು ಬೆಳೆದ ಉತ್ಪನ್ನಗಳಿಗೆ ಬೆಂಬಲ ಬೆಲೆ ಸಿಗದೇ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಮೆಕ್ಕೆಜೋಳ ದರ ₹ 1800 ಕ್ಕೆ ಕುಸಿದಿದ್ದು, ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಮೆಕ್ಕೆಜೋಳಕ್ಕೆ ₹ 2500 ಸಾಕಾಗಲ್ಲ ಕನಿಷ್ಠ ₹ 3000, ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ ₹ 3200 ಸಾವಿರ ಬೆಂಬಲ ಬೆಲೆ ನೀಡಬೇಕು. ಕಬ್ಬಿಗೆ ಪ್ರತಿ ಟನ್‌ಗೆ ₹3500 ಬೆಳಗಾವಿ ಮಾದರಿಯಲ್ಲಿ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಹಾವೇರಿ, ದಾವಣಗೆರೆ, ವಿಜಯನಗರ ಮೂರು ಜಿಲ್ಲೆಗಳಿಗೆ ಕಬ್ಬು ಮತ್ತು ಮೆಕ್ಕೆಜೋಳ ಸಾಗಿಸಲಾಗುತ್ತದೆ. ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಮತ್ತು ಸಕ್ಕರೆ ಕಾರ್ಖಾನೆಯ ಮಾಲೀಕರನ್ನು ಪ್ರತಿಭಟನಾ ಸ್ಥಳಕ್ಕೆ ಕರೆಸಬೇಕೆಂದು ಪಟ್ಟಹಿಡಿದರು.
ಹಾವೇರಿಯಲ್ಲಿ ರೈತರ ಸಭೆ ಕರೆದು ಎಫ್‌ಆರ್‌ಪಿ ದರದ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲು ಮಾಜಿ ಶಾಸಕ ಅರುಣಕುಮಾರ ಪೂಜಾರ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ಸಂಸದ ಬಸವಾರಾಜ ಬೊಮ್ಮಾಯಿ ಸೂಚಿಸಬೇಕೆಂದು ಮನವಿ ಮಾಡಿದರು.
ರೈತರನ್ನು ಮುಖ್ಯಮಂತ್ರಿ ನಿವಾಸದವರೆಗೆ ಹೋಗಲು ಸರ್ಕಾರ ಬಿಡದೇ ಕೂಡಲೇ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಪಡಿಸಬೇಕು. ರೈತರ ಹಿತ ಕಾಪಾಡಲು ರಾಜ್ಯ ಸರ್ಕಾರ ಸೂಕ್ತ ಬೆಂಬಲ ದರ ನೀಡಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿ, ರೈತರ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದರು.
ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರು ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿದರು.
‘ಈ ಪ್ರತಿಭಟನೆಯನ್ನು ಶಾಂತ ರೀತಿಯಿಂದ ಮಾಡಿದ್ದೀರಿ. ಇಲ್ಲಿಗೇ ಧರಣಿ ಕೈಬಿಡಿ. ಬೆಂಗಳೂರಿಗೆ ಹೋಗುವುದು ಬೇಡ. ಇನ್ನೊಂದು ವಾರದಲ್ಲಿ ಮೂರು ಶುಗರ್ ಕಂಪನಿಗಳಿಗೆ ಸಂಬಂಧಿಸಿದವರನ್ನು ಕರೆಸಿ ನಿಮ್ಮ ಜೊತೆಗೆ ಸಭೆ ಮಾಡುತ್ತೇವೆ‘ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ ಮೇಲೆ ರೈತರು ಪ್ರತಿಭಟನೆ ವಾಪಸ್ ಪಡೆದರು.
ಕೊಡಿಯಾಲ ಹೊಸಪೇಟೆಯ ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಸ್ವಾಮೀಜಿ, ರಟ್ಟೀಹಳ್ಳಿ ಕಬ್ಬಿಣ ಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಹಿರಿಯ ವಕೀಲ ನಾಗರಾಜ ಕುಡುಪಲಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಗೌಡಶಿವಣ್ಣವನರ, ಚೋಳಪ್ಪ ಕಸವಾಳ, ಹೊನ್ನಪ್ಪ ಮರಿಯಮ್ಮನವರ, ಪರಮೇಶ ಗೂಳಣ್ಣಣವರ, ಕರವೇ ಅಧ್ಯಕ್ಷ ಗೋಣಿಬಸಮ್ಮನವರ, ನಿತ್ಯಾನಂದ ಕುಂದಾಪುರ, ಎಪಿಎಂಸಿ ಹಮಾಲರ ಸಂಘದ ಅಧ್ಯಕ್ಷ ಮಲ್ಲೇಶ ಮದ್ಲೇರ, ಪರಶುರಾಮ ಬಿದರದಿನ್ನಿ, ಸಿದ್ದನಗೌಡ ಗೋವಿಂದಗೌಡ, ಸುರೇಶ, ಮಂಜುನಾಥ ಕೋಲಕಾರ, ನಿಂಗರಾಜ ಕೋಡಿಹಳ್ಳಿ, ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಮ್ಮ ಮಾಗನೂರ, ಸುಜಾತಾ ಹಿರೇಮಠ, ಶೈಲಮ್ಮ ಕೊಟ್ಟದ, ನಿಂಗಪ್ಪ ಸತ್ಯಪ್ಪನವರ ಮತ್ತಿತರರು ಇದ್ದರು.