
ಶಿಗ್ಗಾವಿ: ಪಟ್ಟಣದ ಜನರ ಬಹುದಿನಗಳ ಬೇಡಿಕೆಯಾಗಿದ್ದ ವಾಕರಸಾಸಂ ಬಸ್ ಘಟಕ (ಡಿಪೊ) ನಿರ್ಮಾಣವಾಗಿ ಮೂರು ತಿಂಗಳ ಹಿಂದೆಯೇ ಸಚಿವರಿಂದ ಉದ್ಘಾಟನೆ ಆಗಿದೆ. ಆದರೆ, ಇದುವರೆಗೂ ಡಿಪೊ ಕಾರ್ಯಾಚರಣೆ ಆರಂಭಿಸದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಕರೆಯಿಸಿ ಉದ್ಘಾಟನೆ ಮಾಡಿಸಲು ತೋರಿಸಿದ್ದ ಆಸಕ್ತಿಯನ್ನು ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ ಹಾಗೂ ಸ್ಥಳೀಯ ರಾಜಕಾರಣಿಗಳು, ಡಿಪೊ ಆರಂಭಕ್ಕೆ ತೋರಿಸುತ್ತಿಲ್ಲವೆಂದು ಜನರು ದೂರುತ್ತಿದ್ದಾರೆ.
ಗಂಗೆಭಾವಿ ರಸ್ತೆಯಲ್ಲಿ ಸುಸಜ್ಜಿತವಾದ ಡಿಪೊ ನಿರ್ಮಿಸಲಾಗಿದೆ. ನಿರ್ಮಾಣವಾದರೂ ಉದ್ಘಾಟನೆಯಾಗಿರಲಿಲ್ಲ. ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಅದರ ಪರಿಣಾಮ ಡಿಪೊ ಉದ್ಘಾಟನೆಯಾಯಿತು. ಆದರೆ, ಈಗ ಡಿಪೊ ಕಾರ್ಯಾಚರಣೆಯೇ ಶುರುವಾಗಿಲ್ಲ.
ಡಿಪೊ ಆರಂಭವಾಗದಿರುವುದರಿಂದ, ಶಿಗ್ಗಾವಿ ತಾಲ್ಲೂಕಿನಲ್ಲಿ ಸವಣೂರು ಡಿಪೊದ ಬಸ್‌ಗಳು ಓಡಾಡುತ್ತಿವೆ. ಶಕ್ತಿ ಯೋಜನೆಯಿಂದಾಗಿ ಬಸ್‌ಗಳು ಭರ್ತಿಯಾಗಿ ಸಂಚರಿಸುತ್ತಿವೆ. ಬಸ್‌ಗಳಲ್ಲಿ ಜೋತು ಬಿದ್ದು ಪ್ರಯಾಣಿಸುವ ಸ್ಥಿತಿ ನಿರ್ಮಾಣವಾಗಿದೆ.
ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕುಗಳನ್ನು ಒಂದೇ ಮಾಡಿ ವಿಧಾನಸಭಾ ಕ್ಷೇತ್ರ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಶಿಗ್ಗಾವಿಯಲ್ಲಿ ಸ್ವಂತ ಡಿಪೊ ಇಲ್ಲವೆಂದು ಜನರು ನೊಂದುಕೊಂಡಿದ್ದರು.
ಈಗ ಡಿಪೊ ನಿರ್ಮಾಣವಾಗಿ ಉದ್ಘಾಟನೆಯಾದರೂ ಕಾರ್ಯಾಚರಣೆ ಆರಂಭವಾಗುತ್ತಿಲ್ಲವೆಂದು ಜನರು ಅಳಲು ತೋಡಿಕೊಳ್ಳುತ್ತಿದ್ದಾರೆ. ಡಿಪೊ ಆರಂಭವಾಗದಿದ್ದರಿಂದ, ಮೆಕ್ಯಾನಿಕ್ ತರಬೇತಿ ಕೇಂದ್ರವೂ ಆರಂಭವಾಗಿಲ್ಲ.
‘ಸವಣೂರು ಡಿಪೊದಲ್ಲಿರುವ ಬಸ್‌ಗಳು, ಎರಡೂ ತಾಲ್ಲೂಕಿನಲ್ಲಿ ಸಂಚರಿಸಲು ಸಾಲುತ್ತಿಲ್ಲ. ಶಿಗ್ಗಾವಿಯ ಹೊಸ ಡಿಪೊಗೆ ಹೊಸದಾಗಿ ಹೆಚ್ಚುವರಿ ಬಸ್‌ಗಳು ಬರಬಹುದೆಂದು ಅಂದುಕೊಂಡಿದ್ದೇವೆ. ಆದರೆ, ಡಿಪೊ ಇದುವರೆಗೂ ಆರಂಭವಾಗಿಲ್ಲ. ಸ್ಥಳೀಯ ಶಾಸಕ ಹಾಗೂ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ ಕಾಡುತ್ತಿದೆ’ ಎಂದು ಸ್ಥಳೀಯ ನಿವಾಸಿ ರಮೇಶ ದೂರಿದರು.
‘ಸವಣೂರ ಡಿಪೊದಿಂದ ಶಿಗ್ಗಾವಿ ತಾಲ್ಲೂಕಿನಲ್ಲಿ ಸಮರ್ಪಕವಾಗಿ ಬಸ್‌ಗಳು ಸಂಚರಿಸುವುದಿಲ್ಲ. ಬಸ್‌ಗಳ ಕೊರತೆ ಉಂಟಾಗುತ್ತಿದೆ. ಇಲ್ಲಿನ ಗ್ರಾಮೀಣ ಭಾಗದಲ್ಲಿ ಸರಿಯಾದ ಬಸ್‌ಗಳಿಲ್ಲದೇ ಜನ ಪರದಾಡುವಂತಾಗಿದೆ’ ಎಂದರು.
‘ನಿತ್ಯವೂ ವಿದ್ಯಾರ್ಥಿಗಳು ಶಾಲೆ–ಕಾಲೇಜುಗಳಿಗೆ ಹೋಗಿಬರಲು ಬಸ್‌ಗಳ ಕೊರತೆ ಉಂಟಾಗುತ್ತಿದೆ. ಬಸ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ, ಬಸ್‌ಗಳು ಸಂಪೂರ್ಣ ಭರ್ತಿಯಾಗಿ ಸಂಚರಿಸುತ್ತಿವೆ. ಏನಾದರೂ ಸಣ್ಣ ಎಡವಟ್ಟಾದರೂ ಅವಘಡ ಸಂಭವಿಸಿ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆಯಿದೆ’ ಎಂದರು.
ಶಿಗ್ಗಾವಿ–ಸವಣೂರಿನಲ್ಲಿ ಸದ್ಯ 58 ಬಸ್‌ಗಳಿವೆ. ಹೆಚ್ಚುವರಿ ಬಸ್‌ಗಳು ಬರಲಿದ್ದು ಮಾರ್ಚ್‌ನಲ್ಲಿ ಶಿಗ್ಗಾವಿ ಡಿಪೊದ ಕಾರ್ಯಾಚರಣೆ ಆರಂಭಿಸಿ ಬಸ್ ಬಿಡಲಾಗುವುದು.– ವಿಜಯಕುಮಾರ, ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ
ಡಿಪೊ ಉದ್ಘಾಟಿಸಿ ಮೂರು ತಿಂಗಳಾದರೂ ಇನ್ನೂ ಕಾರ್ಯಾಚರಣೆ ಆರಂಭಿಸಿಲ್ಲ. ಜನರಿಗೆ ತೊಂದರೆಯಾಗುತ್ತಿದೆ. ಕೂಡಲೇ ಡಿಪೊ ಆರಂಭಿಸಿ ಹೊಸ ಬಸ್‌ಗಳನ್ನು ರಸ್ತೆಗೆ ಇಳಿಸಬೇಕು.– ಮೌನೇಶಗೌಡ ದೊಡ್ಡನವರ, ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.