ಶಿಗ್ಗಾವಿ ಪಟ್ಟಣದ ಪ್ರವಾಸಿ ಮಂದಿರದ ಮುಂದಿನ ಸರ್ವೀಸ್ ರಸ್ತೆ ಗುಂಡಿಗಳು ಬಿದ್ದು ನೀರು ನಿಂತು ಹಾಳಾಗಿರುವುದು
ಶಿಗ್ಗಾವಿ: ಪಟ್ಟಣ ಹಾಗೂ ತಾಲ್ಲೂಕಿನ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ಇದರ ಅಕ್ಕ–ಪಕ್ಕದಲ್ಲಿರುವ ಸರ್ವೀಸ್ ರಸ್ತೆ ಹಲವು ಕಡೆಗಳಲ್ಲಿ ಹದಗೆಟ್ಟಿದೆ.
ಪಟ್ಟಣದ ಪ್ರವಾಸಿ ಮುಂದಿನ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆಯಲ್ಲಿ ಗುಂಡಿಗಳು ಬಿದ್ದು ಮಳೆ ನೀರು ನಿಂತುಕೊಂಡು ಕೆರೆಯಂತಾಗಿದೆ.
ಬಸ್ ನಿಲ್ದಾಣದ ರಸ್ತೆಗಳು ಕೆರೆಯಂತೆ ಕಾಣುತ್ತಿವೆ. ಪ್ರಯಾಣಿಕರನ್ನು ನಿತ್ಯವೂ ಪರದಾಡುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ರಸ್ತೆಯಲ್ಲಿ ದೊಡ್ಡ ತಗ್ಗುಗಳು ಬಿದ್ದು ನೀರು ನಿಂತುಕೊಂಡಿದ್ದು, ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬೀಳುತ್ತಿದ್ದಾರೆ. ಬಸ್, ಕಾರುಗಳ ಚಾಲಕರು ಈ ತಗ್ಗುಗುಂಡಿಗಳಲ್ಲಿ ಸಿಲುಕಿ ಮೇಲೇಳಲು ಪರದಾಡುತ್ತಿದ್ದಾರೆ. ಪಾದಚಾರಿಗಳು ಬಿದ್ದು ಗಾಯಗೊಂಡಿದ್ದಾರೆ. ಆದರೂ ಸಂಬಂಧಿಸಿದ ಅಧಿಕಾರಿಗಳು ಈ ಕಡೆ ಗಮನ ಹರಿಸುತ್ತಿಲ್ಲ ಎಂದು ಇಲ್ಲಿನ ಪ್ರಯಾಣಿಕರು ದೂರುತ್ತಿದ್ದಾರೆ.
ಬೇಸಿಗೆಯಲ್ಲಿ ದೋಳು, ಮಳೆಗಾಲದಲ್ಲಿ ಕೆಸರುಮಯ ಆಗುತ್ತಿರುವ ರಸ್ತೆಗಳಿಂದ ನಿತ್ಯ ಬೆಂಗಳೂರು, ಹಾವೇರಿ, ಹುಬ್ಬಳ್ಳಿ ಕಡೆಗೆ ಹೋಗುವ ಪ್ರಯಾಣಿಕರು ಕಿರಿಕಿರಿ ಅನುಭವಿಸುವಂತಾಗಿದೆ. ಶಿಗ್ಗಾವಿ ನಿಲ್ದಾಣ, ಬೆಂಗಳೂರು, ಹುಬ್ಬಳಿ ಮಾರ್ಗದಲ್ಲಿನ ಪ್ರಮುಖ ಬಸ್ ನಿಲ್ದಾಣ.
ರಾಜ್ಯ ಮತ್ತು ಅಂತರ ರಾಜ್ಯ ಬಸ್‌ಗಳು ನಿತ್ಯ ಸಂಚರಿಸುತ್ತಿವೆ. ಆದರೂ ರಸ್ತೆ ಅಭಿವೃದ್ಧಿ ಕಾಣದೆ ನರಳುತ್ತಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ತಾಲ್ಲೂಕಿನ ಖುರ್ರಾಪೂರ ಕ್ರಾಸ್ ಹತ್ತಿರದ ಹೆದ್ದಾರಿ ಅಕ್ಕ–ಪಕ್ಕದ ಸರ್ವೀಸ್ ರಸ್ತೆ ಸಂಪೂರ್ಣ ಹಾಳಾಗಿದೆ. ವಾಹನ ಸವಾರರು ನಿತ್ಯ ಸಂಚಾರಕ್ಕೆ ಪರದಾಡುತ್ತಿದ್ದಾರೆ.
ಸರ್ವೀಸ್ ರಸ್ತೆಯಲ್ಲಿ ನೀರು ನಿಂತುಕೊಂಡು ದೊಡ್ಡ ಗುಂಡಿಗಳಾಗಿವೆ. ಬಸ್, ಕಾರು ಹಾಗೂ ಇತರೆ ವಾಹನಗಳು ಬಳಕುತ್ತ ಸಾಗುತ್ತಿವೆ. ಕೆಲ ವಾಹನಗಳು ಗುಂಡಿಯಲ್ಲಿ ಸಿಲುಕಿ ಉರುಳಿಬಿದ್ದ ಘಟನೆಗಳೂ ನಡೆದಿದೆ.
‘ರಾಷ್ಟ್ರೀಯ ಹೆದ್ದಾರಿಯ ಅಕ್ಕ–ಪಕ್ಕದ ಸರ್ವೀಸ್ ರಸ್ತೆಯನ್ನು ಹೆದ್ದಾರಿ ಪ್ರಾಧಿಕಾರವೇ ಸರಿಪಡಿಸಬೇಕು. ಆದರೆ, ಇಲ್ಲಿ ಸರ್ವೀಸ್ ರಸ್ತೆ ಹೆದಗೆಟ್ಟರು ಪ್ರಾಧಿಕಾರ ಮೌನವಾಗಿದೆ. ಸರ್ವೀಸ್ ರಸ್ತೆಯ ಗುಂಡಿಗಳಿಂದ ಜನರಿಗೆ ತೊಂದರೆ ಆಗುತ್ತಿದೆ. ಸರ್ವೀಸ್ ರಸ್ತೆ ದುರಸ್ತಿ ಮಾಡದಿದ್ದರೆ, ಟೋಲ್‌ಗೇಟ್ ಎದುರೇ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಬಂಕಾಪುರದ ಜನರು ಎಚ್ಚರಿಕೆ ನೀಡಿದ್ದಾರೆ.
ಟೋಲ್‌ಗೇಟ್ ಬಳಿಯೇ ಹದಗೆಟ್ಟ ರಸ್ತೆ
ರಾಷ್ಟ್ರೀಯ ಹೆದ್ದಾರಿ ಬಳಸುವವರಿಂದ ಶುಲ್ಕ ವಸೂಲಿ ಮಾಡಲು ಬಂಕಾಪುರ ಬಳಿ ಟೋಲ್‌ಗೇಟ್ ನಿರ್ಮಿಸಲಾಗಿದೆ. ಇದರ ಸಮೀಪದಲ್ಲಿಯೇ ಸರ್ವೀಸ್ ರಸ್ತೆ ಹದಗೆಟ್ಟಿದ್ದು ಅದರ ದುರಸ್ತಿಗೆ ಹೆದ್ದಾರಿ ಪ್ರಾಧಿಕಾರ ಯಾವುದೇ ಕ್ರಮ ಕೈಗೊಂಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.