ADVERTISEMENT

ಶಿಕ್ಷಕ ಹೇಮರಾಜ್ ಬೇರೆ ಶಾಲೆಗೆ ನಿಯೋಜನೆ: ವಿದ್ಯಾರ್ಥಿ, ಪಾಲಕರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 2:37 IST
Last Updated 3 ಮಾರ್ಚ್ 2026, 2:37 IST
ಶಿಗ್ಗಾವಿ ತಾಲ್ಲೂಕಿನ ಕನಕದಾಸರ ಬಾಡ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಆವರಣದಲ್ಲಿ ಗ್ರಾಮಸ್ಥರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು 
ಶಿಗ್ಗಾವಿ ತಾಲ್ಲೂಕಿನ ಕನಕದಾಸರ ಬಾಡ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಆವರಣದಲ್ಲಿ ಗ್ರಾಮಸ್ಥರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು    

ಶಿಗ್ಗಾವಿ: ತಾಲ್ಲೂಕಿನ ಕನಕದಾಸರ ಬಾಡ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ  ಸಮಾಜ ವಿಜ್ಞಾನ ವಿಷಯದ ಶಿಕ್ಷಕ ಹೇಮರಾಜ್ ಎಚ್.ಪಿ ಅವರನ್ನು ತಾತ್ಕಾಲಿಕವಾಗಿ ಬೇರೆಡೆ ನಿಯೋಜಿಸಿರುವುದನ್ನು ಖಂಡಿಸಿ ಪಾಲಕರು, ಗ್ರಾಮಸ್ಥರು, ವಿದ್ಯಾರ್ಥಿಗಳು ಸೋಮವಾರ ಶಾಲಾ ಆವರಣದ ಮುಂದೆ ಪ್ರತಿಭಟನೆ ನಡೆಸಿದರು.

ಈ ಶಾಲೆಯಲ್ಲಿ 6ರಿಂದ 10ನೇ ತರಗತಿವರೆಗೆ ಸುಮಾರು 545 ವಿದ್ಯಾರ್ಥಿಗಳಿದ್ದಾರೆ. ಅದರಲ್ಲಿ 71 ವಿದ್ಯಾರ್ಥಿಗಳು ಪ್ರಸಕ್ತ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗಳು ಹತ್ತಿರವಿದ್ದು  ಪ್ರಮುಖ ವಿಷಯದ ಬೋಧಕ ಶಿಕ್ಷಕರನ್ನು ರಾಜ್ಯ ಸರ್ಕಾರದ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿದೇರ್ಶಕರು ನಿಯೋಜನೆ ಮಾಡಿ ಆದೇಶ ಹೊರಡಿಸಿದೆ. ಹೀಗಾಗಿ ವಿದ್ಯಾರ್ಥಿಗಳು ಅತಂತ್ರವಾಗುವ ಸ್ಥಿತಿಯಲ್ಲಿದ್ದಾರೆ.

ಪ್ರಬಲ ನಾಯಕರ ಒತ್ತಡಕ್ಕೆ ಮಣಿದು ಶಿಕ್ಷಕರ ನಿಯೋಜನೆ ಮಾಡುವುದು ಸರಿಯಲ್ಲ.  ವಿದ್ಯಾರ್ಥಿಗಳ ವಾಸಂಗಕ್ಕೆ ಅಡ್ಡಿಪಡಿಸಬಾರದು. ಅನುಭವಿ ಶಿಕ್ಷಕರನ್ನು ಬೇರೆಡೆ ನಿಯೋಜನೆ ಮಾಡುವುದರಿಂದ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಲಿದೆ. ತಕ್ಷಣ ಅವರ ನಿಯೋಜನೆ ಮಾಡಬಾರದು ಎಂದು ವಿದ್ಯಾರ್ಥಿಗಳ ಪಾಲಕರು, ಪೋಷಕರು ಆಗ್ರಹಿಸಿದರು.

ADVERTISEMENT

ಈ ಶಾಲೆಗೆ ಅತಿಥಿ ಶಿಕ್ಷಕ ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಪೂರ್ಣಾವಧಿಗೆ ನೇಮಕವಾಗಿ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸಿದ ಶಿಕ್ಷಕನನ್ನು ಬೇರೆಡೆ ನಿಯೋಜನೆ ಮಾಡುವುದು ಸರಿಯಲ್ಲ. ಇದು ಸರ್ಕಾರದ ನಿಯಮಾವಳಿಗೆ ವಿರುದ್ದವಾಗಿದೆ. ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಲು ಗ್ರಾಮಸ್ಥರು ಬಿಡುವುದಿಲ್ಲ  ಎಂದು ಪಾಲಕ ಶಿವಾನಂದ ತೊಂಡೂರ ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಗ್ರಾಮಸ್ಥರ ಮನವಿ ಪರಿಗಣಿಸಿ ಶಿಕ್ಷಕನ ನಿಯೋಜನೆಯನ್ನು ತಡೆದು ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶ ನೀಡಲಾಗಿದೆ
ಪ್ರಶಾಂತ, ಜಂಟಿ ನಿರ್ದೇಶಕ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ
ಹೋರಾಟಕ್ಕೂ ಸಿದ್ಧ: ಹೂಣ್ಣನವರ
‘ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಯಾವುದೇ ಶಿಕ್ಷಕರನ್ನು ನಿಯೋಜನೆ ಮತ್ತು ವರ್ಗಾವಣೆ ಮಾಡಬಾರದು. ಬಾಡ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಕುಳಿತು ಬಾಡ ಗ್ರಾಮದ ಪರಿಸ್ಥಿತಿ ಅರಿಯಲು ಸಾಧ್ಯವಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಇಲ್ಲಿನ ವಿದ್ಯಾರ್ಥಿಗಳ ಮನೋಭಾವ  ಅರಿತು ನಿರ್ಧಾರ ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಿ ಹೋರಾಟ ಮಾಡಲು ಸಿದ್ದರಾಗಿದ್ದೇವೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಶಿಧರ ಹೊಣ್ಣನವರ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.