
ಶಿಗ್ಗಾವಿ: ‘ಬೇಸಿಗೆ ಆರಂಭವಾಗುತ್ತಿದ್ದು, ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯವಿರುವ ಕಡೆಗಳಲ್ಲಿ ಕೊಳವೆ ಬಾವಿ ವ್ಯವಸ್ಥೆ ಮಾಡಿಕೊಳ್ಳಬೇಕು. ವಿದ್ಯುತ್ ಸಂಪರ್ಕ ನೀಡಲು ನಿರಾಕರಿಸುವ ಹಾಗೂ ಕುಡಿಯುವ ನೀರು ನೀಡುವಲ್ಲಿ ಏನಾದರೂ ಸಮಸ್ಯೆ ಮಾಡಿದರೆ, ತಪ್ಪಿತಸ್ಥ ಹೆಸ್ಕಾಂ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಈ ಬಗ್ಗೆ ಸಿಪಿಐ ಜೊತೆ ನಾನೇ ಮಾತನಾಡುತ್ತೇನೆ’ ಎಂದು ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ಬಿ.ಆರ್. ಅಂಬೇಡ್ಕರ ಸಂಕೀರ್ಣದಲ್ಲಿ ಮಂಗಳವಾರ ನಡೆದ, ‘ಶಿಗ್ಗಾವಿ ಹಾಗೂ ಸವಣೂರ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳ ತಾಲ್ಲೂಕು ಮಟ್ಟದ ಕುಡಿಯುವ ನೀರಿನ ಪರಿಶೀಲನಾ ಸಭೆ’ಯಲ್ಲಿ ಅವರು ಮಾತನಾಡಿದರು.
‘ಬೇಸಿಗೆಯಲ್ಲಿ ಯಾವ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗುತ್ತದೆ ಎಂಬುದನ್ನು ಮೊದಲೇ ಪಟ್ಟಿ ಮಾಡಿಕೊಳ್ಳಬೇಕು. ಕೊಳವೆ ಬಾವಿಗಳ ಸ್ಥಿತಿಗತಿ ಪರಿಶೀಲಿಸಬೇಕು. ಹಾಳಾದ ಕೊಳವೆ ಬಾವಿಗಳನ್ನು ದುರಸ್ತಿ ಮಾಡಿಸಬೇಕು. ಕುಡಿಯುವ ನೀರಿನ ವಿಚಾರದಲ್ಲಿ ವಿಳಂಬ ಮಾಡಬಾರದು. ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿರುವ ಅನುದಾನದಲ್ಲಿ ತ್ವರಿತ ಕೆಲಸ ಮಾಡಿ, ಜನರಿಗೆ ನೀರು ಕೊಡಬೇಕು’ ಎಂದು ಹೇಳಿದರು.
‘ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ, ಜಾನುವಾರುಗಳಿಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗಬಹುದು. ಹೀಗಾಗಿ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮುಂಜಾಗ್ರತೆ ವಹಿಸುವ ಮೂಲಕ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಡೆಯಬೇಕು’ ಎಂದರು.
ರಸ್ತೆ, ಚರಂಡಿಗೆ ನನ್ನ ಅನುದಾನ ಬಳಕೆ: ‘ರಸ್ತೆ, ಚರಂಡಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನನ್ನ ಅನುದಾನದಲ್ಲಿ ಮಾಡಲು ಕ್ರಮ ಕೈಗೊಳ್ಳುತ್ತೇನೆ. ಗ್ರಾಮ ಪಂಚಾಯಿತಿಯವರು ತಮ್ಮಲ್ಲಿ ಲಭ್ಯವಿರುವ ಅನುದಾನವನ್ನು ಕುಡಿಯುವ ನೀರಿನ ನಿರ್ವಹಣೆಗಾಗಿ ತುರ್ತಾಗಿ ಬಳಕೆ ಮಾಡಿ. ಅದಕ್ಕೆ ಯಾವುದೇ ಅನುಮತಿ ಅವಶ್ಯವಿಲ್ಲ’ ಎಂದು ಪಠಾಣ ಹೇಳಿದರು.
‘ಶಾಲೆಗಳಲ್ಲಿಯೂ ನೀರಿನ ಸಮಸ್ಯೆಯಾಗಂತೆ ನೋಡಿಕೊಳ್ಳಬೇಕು. ಹೆಸ್ಕಾಂ ಅಧಿಕಾರಿಗಳು, ಅವಶ್ಯವಿರುವ ಕಡೆ ಟ್ರಾನ್ಸ್‌ಫಾರ್ಮರ್‌ಗಳ ಜೋಡಣೆ ಮಾಡಬೇಕು. ವಿದ್ಯುತ್ ಸರಬರಾಜಿನಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ವಿಚಾರವಾಗಿ ಸಾರ್ವಜನಿಕರಿಂದ ಯಾವುದಾದರೂ ದೂರು ಬಂದರೆ, ಅದು ನಿಜವಾಗಿದ್ದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ತಾ.ಪಂ. ಇಒ ಮಂಜುನಾಥ ಸಾಳಂಕೆ, ತಹಶೀಲ್ದಾರ್ ರವಿ ಕೊರವರ ಇದ್ದರು.
ಜನರಿಗೆ ಕುಡಿಯುವ ನೀರು ಒದಗಿಸುವಲ್ಲಿ ಅಧಿಕಾರಿಗಳು ಕಾಲಹರಣ ಮಾಡಬಾರದು. ಕುಂಟ ನೆಪವೂ ನಡೆಯುವುದಿಲ್ಲ. ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಿ ಜನರಿಗೆ ನೀರು ನೀಡಬೇಕು
– ಯಾಸೀರ್ ಅಹ್ಮದ ಖಾನ್ ಪಠಾಣ ಶಾಸಕ
‘ಕಾರ್ಖಾನೆಗೆ ಕೇವಲ 9 ಲಕ್ಷ ತೆರಿಗೆಯೇ?’
‘ಶಿಗ್ಗಾವಿ ತಾಲ್ಲೂಕಿನ ಕೋಣನಕೇರಿ ರಸ್ತೆಯಲ್ಲಿ ವಿ.ಐ.ಎನ್.ಪಿ ಡಿಸ್ಟಿಲರೀಸ್ ಮತ್ತು ಶುಗರ್ಸ್ ಕಂಪನಿಯವರು ವಾಣಿಜ್ಯ ಚಟುವಟಿಕೆ ನಡೆಸಿ ನೂರಾರು ಕೋಟಿ ರೂಪಾಯಿ ಲಾಭ ಮಾಡುತ್ತಿದ್ದಾರೆ. ಅವರಿಗೆ ಕೇವಲ ₹ 9 ಲಕ್ಷ ತೆರಿಗೆಯೇ ?. ಸೂಕ್ತ ರೀತಿಯಲ್ಲಿ ಪರಿಶೀಲಿಸಿ ತೆರಿಗೆ ನಿಗದಿಪಡಿಸಬೇಕು’ ಎಂದು ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ ತಿಳಿಸಿದರು. ಕೋಣನಕೇರಿ ಗ್ರಾ.ಪಂ. ಅಧಿಕಾರಿ ನೀಡಿದ ಮಾಹಿತಿಗೆ ಪ್ರತಿಕ್ರಿಯಿಸಿದ ಪಠಾಣ ‘ನಿಮ್ಮದು ತೆರಿಗೆ ವಸೂಲಿ ಹೆಚ್ಚಿರುವ ಪಂಚಾಯಿತಿ. ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ. ತೆರಿಗೆ ವಸೂಲಿ ಮಾಡುವಾಗ ಬಡವರ ಮೇಲೆ ಪ್ರಹಾರ ಮಾಡಬೇಡಿ. ವಾಣಿಜ್ಯ ಚಟುವಟಿಕೆ ಮಾಡಿ ಲಾಭ ಮಾಡಿಕೊಳ್ಳುತ್ತಿರುವ ಶ್ರೀಮಂತರಿಂದ ಮೊದಲು ತೆರಿಗೆ ವಸೂಲಿ ಮಾಡಿ’ ಎಂದು ತಾಕೀತು ಮಾಡಿದರು. ‘ಕ್ಷೇತ್ರದಲ್ಲಿ ಹಲವರು ಪವನ್ ವಿದ್ಯುತ್ ಪ್ಯಾನ್‌ಗಳನ್ನು ಹಾಕಿದ್ದಾರೆ. ಲಾಭ ಮಾಡಿಕೊಳ್ಳುತ್ತಿದ್ದಾರೆ. ಅವರೆಲ್ಲರಿಗೂ ಕಾನೂನು ಪ್ರಕಾರ ತೆರಿಗೆ ವಿಧಿಸಿ ವಸೂಲಿ ಮಾಡಿ’ ಎಂದರು.
ಕಾಂಗ್ರೆಸ್ ಅಧ್ಯಕ್ಷನ ಕಾರುಬಾರು ಕುಡಿಯುವ
ನೀರಿನ ಬಗ್ಗೆ ಚರ್ಚಿಸಲು ನಡೆದ ಸರ್ಕಾರದ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಶಿಗ್ಗಾವಿ ತಾಲ್ಲೂಕು ಘಟಕದ ಅಧ್ಯಕ್ಷ ಗುಡ್ಡಪ್ಪ ಜಲ್ದಿ ಅವರ ಕಾರುಬಾರು ಜೋರಾಗಿತ್ತು. ಶಾಸಕ ಹಾಗೂ ಅಧಿಕಾರಿಗಳ ಪಕ್ಕದಲ್ಲಿ ವೇದಿಕೆಯಲ್ಲಿಯೇ ಕುಳಿತಿದ್ದ ಗುಡ್ಡಪ್ಪ ಅವರ ನಡೆಗೆ ಖುದ್ದು ಅಧಿಕಾರಿಗಳೇ ಆಕ್ರೋಶ ಹೊರಹಾಕಿದ್ದಾರೆ. ‘ಶಾಸಕರ ಜೊತೆಗೆ ಗುಡ್ಡಪ್ಪ ಸೇರಿ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರು ಓಡಾಡುತ್ತಾರೆ. ಸಭೆಗೂ ಬಂದು ವೇದಿಕೆಯಲ್ಲಿಯೇ ಕುಳಿತು ಯಾವುದೇ ಅಧಿಕಾರ ಇಲ್ಲದಿದ್ದರೂ ಅಧಿಕಾರಿಗಳ ವಿರುದ್ಧ ಮಾತನಾಡುತ್ತಾರೆ’ ಎಂದು ಅಧಿಕಾರಿಯೊಬ್ಬರು ಹೇಳಿದರು. ‘ಸರ್ಕಾರಿ ಸಭೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾತ್ರ ಇರಬೇಕು. ಆದರೆ ಶಾಸಕರೇ ಅವರ ಪಕ್ಕದಲ್ಲಿ ಕಾಂಗ್ರೆಸ್ ಮುಖಂಡರನ್ನು ಕೂರಿಸಿಕೊಂಡು ಸಭೆ ಮಾಡುತ್ತಾರೆ. ಅದನ್ನು ನೇರವಾಗಿ ಪ್ರಶ್ನಿಸಲು ನಮಗೆ ಭಯವಾಗುತ್ತಿದೆ. ಶಾಸಕರೇ ಬದಲಾಗಬೇಕು. ಸರ್ಕಾರಿ ಸಭೆಯ ಶಿಷ್ಟಾಚಾರದ ಅರಿವು ಅವರಿಗೆ ಇರಬೇಕು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.