
ತೆಕ್ಕಲಕೋಟೆ: ‘ಸಮಾಜವು ಧರ್ಮ ಮಾರ್ಗ ತೊರೆದು ಬೇರೆ ಹಾದಿ ತುಳಿದಲ್ಲಿ ಅಶಾಂತಿ, ಅನ್ಯಾಯ, ಅನೀತಿ ಉಂಟಾಗುತ್ತದೆ. ಆದ್ದರಿಂದ ಧರ್ಮ ಮಾರ್ಗಕ್ಕಾಗಿ ಮಹಾತ್ಮರ ಜೀವನ ಚರಿತ್ರೆ ಅರಿಯಿರಿ’ ಎಂದು ತುಮಕೂರಿನ ಸಿದ್ಧಗಂಗಾ ಮಠದ ಶಿವಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಸಿರಿಗೇರಿ ಸಮೀಪದ ಸಿದ್ಧರಾಂಪುರ ಗ್ರಾಮದ ಸಿದ್ಧೇಶ್ವರ ಸ್ವಾಮಿಗಳ ಬೃಹನ್ ಮಠಕ್ಕೆ ಗುರುವಾರ ಭೇಟಿ ನೀಡಿ ಅವರು ಮಾತನಾಡಿದರು.
‘ಜನರು ಬದಲಾಗಿರುವ ಜೀವನ ಶೈಲಿಗೆ ಮನಸೋತು ಹಣ ಗಳಿಕೆಯ ಹಿಂದೆ ಬಿದ್ದಿದ್ದಾರೆ. ದುಂದುವೆಚ್ಚದ ಮದುವೆ ಸಮಾರಂಭಗಳು ನಡೆಯುತ್ತಿವೆ. ಆದರೆ ಇದು ಯಾವುದೂ ಆಧ್ಯಾತ್ಮಿಕ ಪ್ರಗತಿಗೆ ಸಹಾಯಕ ಆಗುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಶಿಕ್ಷಣವು ಬಡತನ, ನಿರುದ್ಯೋಗ, ಅರಿವು, ಮೂಢನಂಬಿಕೆ ನಿರ್ಮೂಲನೆಗೆ ಸಹಾಯಕ. ಕುಟುಂಬದಲ್ಲಿ ಒಬ್ಬರು ಶಿಕ್ಷಣ ಪಡೆದರೆ ಇಡೀ ಕುಟುಂಬ ಸುಧಾರಣೆ ಆಗುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ಅರಿವಿನ ಯಾತ್ರೆ’ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಶಿವಕುಮಾರ ಸ್ವಾಮೀಜಿಯವರ ಜೀವನ ಸಂದೇಶಗಳನ್ನು ಸಾರುವ ಜತೆಗೆ ಸಾಮಾಜಿಕ ಬಾಂಧವ್ಯ, ಪರಿಸರ ರಕ್ಷಣೆ, ಶಿಕ್ಷಣ, ಅಧ್ಯಾತ್ಮ, ಆರೋಗ್ಯ, ಗ್ರಾಮ ನೈರ್ಮಲ್ಯ, ಸುಧಾರಿತ ಕೃಷಿ ಪದ್ಧತಿಗಳು, ವ್ಯಸನಮುಕ್ತ ಸಮಾಜ ಕುರಿತು ಜಾಗೃತಿ ಮೂಡಿಸಿದರು. ಬೆಳಿಗ್ಗೆ ಮಠದ ಸಿದ್ಧೇಶ್ವರ ಸ್ವಾಮೀಜಿಯವರ ಕರ್ತೃ ಗದ್ದುಗೆಯ ದರ್ಶನ, ಇಷ್ಟಲಿಂಗ ಪೂಜೆ ನೆರವೇರಿತು. ಮಠದಲ್ಲಿ ಧರ್ಮಸಭೆಯಲ್ಲಿ ಸಿದ್ಧೇಶ್ವರ ಮಠದ ಚಿದಾನಂದ ತಾತ ಆಶೀರ್ವಚನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.