ADVERTISEMENT

ಸಿದ್ದರಾಮಯ್ಯ ಜನ್ಮದಿನೋತ್ಸವ ಆ.3ರಂದು: ಸೈಯದ್ ಅಜೀಂಪೀರ್‌

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ: ಮಾಜಿ ಶಾಸಕ ಅಜಮಪೀರ್‌ ಖಾದ್ರಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2022, 13:02 IST
Last Updated 23 ಜುಲೈ 2022, 13:02 IST
ಸೈಯದ್ ಅಜೀಂಪೀರ್‌ ಖಾದ್ರಿ, ಮಾಜಿ ಶಾಸಕ 
ಸೈಯದ್ ಅಜೀಂಪೀರ್‌ ಖಾದ್ರಿ, ಮಾಜಿ ಶಾಸಕ    

ಹಾವೇರಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ವರ್ಷದ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಆ.3ರಂದು ದಾವಣಗೆರೆಯಲ್ಲಿ ಆಯೋಜಿಸಲಾಗಿದೆ. ಈ ಸಂಬಂಧಅಲ್ಪಸಂಖ್ಯಾತರ ಪೂರ್ವಭಾವಿ ಸಭೆಯನ್ನು ಜು.25ರಂದು ಬೆಳಿಗ್ಗೆ 11ಕ್ಕೆ ನಗರದ ಶಿವಶಕ್ತಿ ಪ್ಯಾಲೇಸ್‍ನಲ್ಲಿ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ, ಅಮೃತ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸೈಯದ್ ಅಜೀಂಪೀರ್‌ ಖಾದ್ರಿ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪೂರ್ವಭಾವಿ ಸಭೆಯಲ್ಲಿ ಮಾಜಿ ಸಚಿವ ಜಮೀರಅಹಮದ್‌ ಖಾನ್ ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ ಅಲ್ಪಸಂಖ್ಯಾತ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಶಿಗ್ಗಾಂವಿ-ಸವಣೂರ ಕ್ಷೇತ್ರದಿಂದ ಆಗಸ್ಟ್ 3ರಂದು ದಾವಣಗೆರೆಯಲ್ಲಿ ಆಯೋಜಿಸಿರುವ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾರ್ಯಕರ್ತರು, ಅಭಿಮಾನಿಗಳು ಪಾದಯಾತ್ರೆ ಮೂಲಕ ತೆರಳಲು ನಿರ್ಧರಿಸಿದ್ದಾರೆ. ಅದರಂತೆ ಜಿಲ್ಲೆಯಾದ್ಯಂತ ಶಾಸಕರು, ಮಾಜಿ ಸಚಿವರು, ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಸಭೆಗಳನ್ನು ಆಯೋಜಿಸಲಾಗಿದ್ದು, ಎಲ್ಲೆಡೆಯಿಂದಲೂ ಹೆಚ್ಚಿನ ಸಂಖ್ಯೆಯ ಜನರು ಅಮೃತ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದರು.

ADVERTISEMENT

ವಿಪಕ್ಷದವರಿಗೆ ಭಯ ಶುರು:

ಅಮೃತ ಮಹೋತ್ಸವಕ್ಕೆ ಕಾಂಗ್ರೆಸ್‌ ಪಕ್ಷದಲ್ಲಿ ಯಾರೂ ವಿರೋಧ ಮಾಡಿಲ್ಲ. ಈ ಕಾರ್ಯಕ್ರಮ ಐತಿಹಾಸಿಕವಾಗಲಿರುವುದನ್ನು ಅರಿತು ವಿರೋಧ ಪಕ್ಷದವರಿಗೆ ಭಯ ಆರಂಭವಾಗಿದೆ. ಸೋಲಿನ ಭೀತಿ ಎದುರಾಗಿದೆ. ಸಿದ್ದರಾಮಯ್ಯ ಅವರು ಜನಸಾಮಾನ್ಯರ ನಾಯಕರಾಗಿದ್ದು, ಅವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲು ಜನರೇ ಸಜ್ಜಾಗಿದ್ದಾರೆ. ಈ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬ ಮಹದಾಸೆಯು ಜನರದ್ದಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯರಾದ ಐ.ಯು. ಪಠಾಣ, ದಾದಾಪೀರ್‌ ಚೂಡಿಗಾರ, ಎಪಿಎಂಸಿ ಮಾಜಿ ಅಧ್ಯಕ್ಷ ಪರಮೇಶಪ್ಪ ಎಣ್ಣಿ, ನಾಸಿರ್‌ಖಾನ್‌ ಪಠಾಣ, ಸುನಿಲ್‌ ಜಮಾದಾರ, ಸುಭಾನಿ ಚೂಡಿಗಾರ, ದಾಸಪ್ಪ ಕರ್ಜಗಿ, ಖಲೀಲ್ ಪಟವೇಗಾರ, ಡಾ.ಎಫ್.ಜಿ. ಪಾಟೀಲ, ಬಸವರಾಜ ಸಾಲಿ, ಶಂಭಣ್ಣ ನರ್ತಿ, ಯಾಕೂಬ್‌ ಚಂದುಬಾಯ್‌, ಇನೂನ್‌ಖಾನ್‌ ಸವಣೂರ, ಮಹಾಂತೇಶ ಸಾಲಿ ಇದ್ದರು.

‘ಸಿದ್ದರಾಮಯ್ಯ ಅವರೇ ಸಿಎಂ ಆಗಲಿ’

ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಪಕ್ಷದ ಹೈಕಮಾಂಡ್‌ ನಿರ್ಧರಿಸುತ್ತದೆ. ಸಿದ್ದರಾಮಯ್ಯ ಅವರು ಸಿಎಂ ಆಗಬೇಕು ಎಂಬುದು ನನ್ನ ವೈಯಕ್ತಿಕ ಬಯಕೆಎಂದು ಮಾಜಿ ಶಾಸಕ ಸೈಯದ್ ಅಜೀಂಪೀರ್‌ ಖಾದ್ರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಹಿಂದಿನ ಅವಧಿಯ 5 ವರ್ಷದಲ್ಲಿ ಸಿದ್ದರಾಮಯ್ಯ ಅವರು ರಾಜ್ಯದ ಅಭಿವೃದ್ಧಿ ಹಾಗೂ ಜನರ ಯೋಜನೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ ಅವರು ಚುನಾವಣೆಗೆ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ನಿಂತರೂ ಜನರು ಆಶೀರ್ವದಿಸುತ್ತಾರೆ. ನಮ್ಮ ಕ್ಷೇತ್ರದಿಂದಲೇ ನಿಲ್ಲಿ ಎಂದು ಹಲವು ಜಿಲ್ಲೆಗಳ ಜನರು ಪ್ರೀತಿ, ಅಭಿಮಾನದಿಂದ ಕರೆಯುತ್ತಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.