ADVERTISEMENT

ಸಂಸಾರದಲ್ಲೇ ಸದ್ಗತಿ ಸಾಧನೆ ಸಾಧ್ಯ: ಶೇಗುಣಸಿ ವಿರಕ್ತಮಠದ ಮಹಾಂತಪ್ರಭು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 2:53 IST
Last Updated 25 ಡಿಸೆಂಬರ್ 2025, 2:53 IST
ಮಹಾಂತಪ್ರಭು ಸ್ವಾಮೀಜಿ, ಶೇಗುಣಸಿ ವಿರಕ್ತಮಠ 
ಮಹಾಂತಪ್ರಭು ಸ್ವಾಮೀಜಿ, ಶೇಗುಣಸಿ ವಿರಕ್ತಮಠ    

ಹಾವೇರಿ: ‘ಬದುಕಿನಲ್ಲಿ ಮುಕ್ತಿ ಪಡೆಯಲು ಬ್ರಹ್ಮಚರ್ಯೆ, ತಪಸ್ಸು, ಹಿಮಾಲಯಕ್ಕೆ ಹೋಗುವ ಅವಶ್ಯಕತೆ ಇಲ್ಲ. ಸಂಸಾರದಲ್ಲಿ ಇದ್ದುಕೊಂಡೇ ಸದ್ಗತಿ ಸಾಧಿಸಬಹುದು. ಸಂಸಾರವನ್ನು ಒದ್ದು ಗೆಲ್ಲಬಾರದು, ಸಂಸಾರದಲ್ಲಿ ಇದ್ದು ಗೆಲ್ಲಬೇಕು’ ಎಂದು ಶೇಗುಣಸಿ ವಿರಕ್ತಮಠದ ಮಹಾಂತಪ್ರಭು ಸ್ವಾಮೀಜಿ ತಿಳಿಸಿದರು.

ನಗರದ ಹುಕ್ಕೇರಿಮಠದ ಜಾತ್ರಾ ಮಹೋತ್ಸವ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ‘ಅಧ್ಯಾತ್ಮ ಪ್ರವಚನ’ ಕಾರ್ಯಕ್ರಮದಲ್ಲಿ ಬುಧವಾರ ಅವರು ಪ್ರವಚನ ನೀಡಿದರು.

‘ಬಸವಾದಿ ಸುದರ್ಶನರು, ಸಂಸಾರದಲ್ಲಿ ಇದ್ದುಕೊಂಡು ಸದ್ಗತಿ ಪಡೆದರು. ಪಾರಮಾರ್ಥಿಕ ಜೀವನವನ್ನು ಸಾಧಿಸಿ ಸಕಲರಿಗೂ ಲೇಸು ಬಯಸಿ, ಮುಕ್ತಿ ಪಡೆದರು. ರಾಮಕೃಷ್ಣ ಪರಮಹಂಸರು, ತಮ್ಮ ಪತ್ನಿ ಶಾರದಾದೇವಿಯಲ್ಲಿ ಕಾಳಿಕಾ ದೇವಿಯನ್ನು ಸಾಕ್ಷಾತ್ಕಾರ ಗಳಿಸಿಕೊಂಡರು. ಸಂಸಾರದಲ್ಲಿ ಸಂಸ್ಕಾರ ಇದ್ದಲ್ಲಿ, ಸಂಸಾರವು ಸಸಾರದಿಂದ ಕೂಡಿರುತ್ತದೆ. ಅತ್ತೆಯು ತನ್ನ ಸೊಸೆಗೆ ತಾಯಿಯಾಗಬೇಕು. ಸೊಸೆಯು ತನ್ನ ಅತ್ತೆಗೆ ಮಗಳಾಗಿರಬೇಕು. ಅಂದಾಗ ಆ ಕುಟುಂಬವು ಸದ್ಗತಿಯನ್ನು ಕಾಣುತ್ತದೆ. ಸಂಸಾರದಲ್ಲಿ ಎಲ್ಲ ಸದಸ್ಯರು ಎಲ್ಲರಿಗೂ ಬೇಕಾಗಿ ಬೆಳಕಾಗಿ ಬದುಕಿದಾಗ ಅದು ಸುಖಿ ಸಂಸಾರವಾಗುತ್ತದೆ. ಸತಿಪತಿಗಳೊಂದಾದ ಭಕ್ತಿ ಬಲು ಹಿತವಾದುದು ಎಂಬುದಾಗಿ ಶರಣರು ಹೇಳಿದ್ದಾರೆ’ ಎಂದರು.

ADVERTISEMENT