
ರಾಣೆಬೆನ್ನೂರು: ‘ಬದುಕು ಅಂದರೆ ಕೇವಲ ಹಣ ಗಳಿಸುವುದು, ಆಸ್ತಿ ಮಾಡುವುದು, ಅಧಿಕಾರ ಅನುಭವಿಸುವುದು, ಹೆಸರು ಗಳಿಸುವುದು, ಸಂಸಾರ ನಡೆಸುವುದು ಅಲ್ಲ. ಬದಲಾಗಿ ಇತರರಿಗೆ ಮಾದರಿಯಾಗುವಂತಹ ಜೀವನವನ್ನು ನಡೆಸಬೇಕು’ ಎಂದು ಶಂಕರಾಚಾರ್ಯ ಸಂಸ್ಥಾನ ದೈವಜ್ಞ ಬ್ರಾಹ್ಮಣ ಮಠಾಧೀಶ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಹೇಳಿದರು.
ಇಲ್ಲಿನ ಮೃತ್ಯುಂಜಯ ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜ , ದೈವಜ್ಞ ಸುವರ್ಣಕಾರರ ವಿವಿಧೋದ್ದೇಶ ಸಹಕಾರ ಸಂಘ, ದೈವಜ್ಞ ಮಹಿಳಾ ಮಂಡಳಿ ಹಾಗೂ ದೈವಜ್ಞ ಯುವಕ ಸಂಘ ಇವರ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ದೈವಜ್ಞ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಇಂದಿನ ದಿನಮಾನಗಳಲ್ಲಿ ಶಾಂತಿ, ಸಮಾಧಾನದ ಕೊರತೆ ಎಲ್ಲರಲ್ಲೂ ಎದ್ದು ಕಾಣುತ್ತಿದೆ. ಸಂಕುಚಿತ ಭಾವನೆ ಹೆಚ್ಚಾಗುತ್ತಿದೆ. ದ್ವೇಷ, ಅಹಂಕಾರಗಳು ಹೆಚ್ಚುತ್ತಿವೆ. ಉಪಕಾರಗಳು ಕ್ಷೀಣಿಸುತ್ತಿವೆ’ ಎಂದರು.
‘ಬದುಕು ಭವ್ಯವಾಗಿ ಇರಿಸಿಕೊಳ್ಳಲು ಜೀವನದುದ್ದಕ್ಕೂ ಮಹಾತ್ಮರ ದಿವ್ಯದರ್ಶನ ಅತ್ಯವಶ್ಯ. ಅವರ ಆದರ್ಶಗಳನ್ನು ಪಾಲಿಸಿಕೊಂಡು ಮುಂದೆ ಬರಬೇಕು’ ಎಂದು ತಿಳಿಸಿದರು.
ಸುಜ್ಞಾನೇಶ್ವರ ಭಾರತಿ ಸ್ವಾಮೀಜಿ ಮಾತನಾಡಿ, ‘ಹಿಂದೂ ಧರ್ಮದ ಮೂಲ ಸನಾತನವಾಗಿದೆ. ಧರ್ಮವಿಲ್ಲದೆ ಜನರಿಲ್ಲ, ಜನರಿಲ್ಲದೆ ಧರ್ಮವಿಲ್ಲ. ಧರ್ಮದ ಉದ್ದಾರಕ್ಕಾಗಿ, ಬಲವರ್ಧನೆಗಾಗಿ ಎಲ್ಲರೂ ಒಗ್ಗೂಡಿ ಧರ್ಮವನ್ನು ಉಳಿಸಿಕೊಳ್ಳಬೇಕಾಗಿದೆ’ ಎಂದರು.
ಕರ್ಕಿ ಶ್ರೀಮಠದ ಧರ್ಮದರ್ಶಿ ಸತ್ಯನಾರಾಯಣ ರಾಯ್ಕರ, ಸಮಾಜದ ಗೌರವ ಅಧ್ಯಕ್ಷ ದತ್ತಣ್ಣ ಶೇಜವಾಡಕರ, ಸಹಕಾರ ಸಂಘದ ಅಧ್ಯಕ್ಷ ರಾಜು ರೇವಣಕರ, ಮಹಿಳಾ ಘಟಕದ ಅಧ್ಯಕ್ಷೆ ಪದ್ಮಾವತಿ ದೈವಜ್ಞ, ರಾಘವೇಂದ್ರ ರೇವಣಕರ ತಿಳವಳ್ಳಿ, ವಿಠಲ್ ಶೇಜವಾಡಕರ, ಜಗದೀಶ್ ವರ್ಣೇಕರ್, ಮಂಜಣ್ಣ, ರಾಜು ಶೇಜವಾಡಕರ ಹಾಗೂ ಭಕ್ತರು, ಅಭಿಮಾನಿಗಳು ಇದ್ದರು.
ರಾಜ್ಯದ 70 ಸ್ಥಳಗಳಲ್ಲಿ ಈಗಾಗಲೇ ದೈವಜ್ಞ ದರ್ಶನ ಕೈಗೊಳ್ಳಲಾಗುತ್ತಿದೆ. ಸ್ವಾಮೀಜಿಗಳು ಭಕ್ತರಿಗೆ ಜ್ಞಾನಾಮೃತ ನೀಡಿ ಸಂಘಟನೆ ಮಾಡಬೇಕಾಗಿದೆ. ಅದಕ್ಕಾಗಿಯೇ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದೇವೆ-ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ, ಶಂಕರಾಚಾರ್ಯ ಸಂಸ್ಥಾನ ದೈವಜ್ಞ ಬ್ರಾಹ್ಮಣ ಮಠಾಧೀಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.