
ಹಾವೇರಿ: ‘ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷೆ ಸುಧಾರಣೆ ಉದ್ದೇಶದಿಂದ 29 ಅಂಶಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಉಸ್ತುವಾರಿಗಾಗಿ ಪ್ರತಿ 10–15 ಶಾಲೆಗೊಬ್ಬರಂತೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ’ ಎಂದು ಶಾಲಾ ಶಿಕ್ಷಣ ಇಲಾಖೆಯ ಧಾರವಾಡ ಹೆಚ್ಚುವರಿ ಆಯುಕ್ತ ಈಶ್ವರ ಉಳ್ಳಾಗಡ್ಡಿ ಹೇಳಿದರು.
ನಗರದ ಜಿ.ಎಚ್. ಕಾಲೇಜಿನ ಸಭಾಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗಾಗಿ ಬುಧವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
‘ಹಾವೇರಿ ಜಿಲ್ಲೆ, ಶಿಕ್ಷಣ ಕ್ಷೇತ್ರ ಸೇರಿದಂತೆ ವಿವಿಧ ರಂಗಗಳಲ್ಲಿ ವಿಶೇಷ ಪಾತ್ರ ವಹಿಸಿದೆ. ಕಲಿಕೆಯಲ್ಲಿ ನಿಧಾನಗತಿಯಲ್ಲಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಶಿಕ್ಷಕರು ಆರಂಭದಲ್ಲೇ ಗುರುತಿಸಿ, ವಿಶೇಷ ತರಗತಿ ಮಾಡುತ್ತಿದ್ದಾರೆ. ಮುಂಬರುವ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಸಾಧಿಸುವು ಗುರಿ ಇಟ್ಟುಕೊಳ್ಳಲಾಗಿದೆ’ ಎಂದರು.
‘ಸರ್ಕಾರದ ಮಿಷನ್ ಅನ್ವಯ ಶೇ. 40ರಷ್ಟು ಫಲಿತಾಂಶ ಹೊಂದುವುದು ಮುಖ್ಯ ಗುರಿಯಾಗಿದೆ. ಇದಕ್ಕೆ ಅನುಗುಣವಾಗಿ ತರಬೇತಿ ನೀಡಲಾಗುತ್ತಿದೆ. ಪ್ರತಿ ವಿಷಯಕ್ಕೆ ಎಷ್ಟು ಅಂಕಗಳ ಪ್ರಶ್ನೆ ಬರುತ್ತದೆ ? ಈಗಾಗಲೇ ನೀಲನಕ್ಷೆ ನೀಡಲಾಗಿದೆ. ನೀಲನಕ್ಷೆ ಹಾಕಿಕೊಂಡು ಎಲ್ಲ ಮಕ್ಕಳು ಕನಿಷ್ಠ ಪಾಸಾಗುವಂತೆ ತರಬೇತಿ ನೀಡಲಾಗುತ್ತಿದೆ’ ಎಂದರು ಹೇಳಿದರು.
‘ಧಾರವಾಡ ವಿಭಾಗ ವ್ಯಾಪ್ತಿಯಲ್ಲಿ 9 ಶೈಕ್ಷಣಿಕ ಜಿಲ್ಲೆಗಳಿವೆ. ಕಳೆದ ಬಾರಿ ವಿಭಾಗದಲ್ಲಿ ಶೇ. 67ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ನೂರರಷ್ಟು ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಸಿದ್ಧತೆ ಹಾಗೂ ಮಕ್ಕಳ ತಯಾರಿ ಮಾಡಲಾಗುತ್ತಿದೆ’ ಎಂದರು.
ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಮಾತನಾಡಿ, ‘ಶಿಕ್ಷಕ ವೃತ್ತಿ ಎಲ್ಲ ವೃತ್ತಿಗಳಿಗಿಂತ ಶ್ರೇಷ್ಠವಾದದ್ದು. ಗುರುವಿನ ಅನುಗ್ರಹ ಇದ್ದರೆ, ಜಗತ್ತಿನಲ್ಲಿ ಏನು ಬೇಕಾದರೂ ಸಾಧಿಸಬಹುದು. ಅನೇಕ ರಾಜ–ಮಹಾರಾಜರ ಸಾಧನೆಗಳಿಗೆ ಗುರುಗಳೇ ಮುಖ್ಯ ಕಾರಣ’ ಎಂದು ಹೇಳಿದರು.
‘ಎಸ್‌ಎಸ್‌ಎಲ್‌ಸಿ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಪ್ರಮುಖ ಘಟ್ಟವಾಗಿದೆ. ಸರ್ಕಾರವು ಉಚಿತ ಶಿಕ್ಷಣ ನೀಡುತ್ತಿದೆ. ತಾಂತ್ರಿಕ ಹಾಗೂ ಕೌಶಲದಲ್ಲಿ ಪರಿಣಿತರಿದ್ದರೂ ಕೆಲಸ ಪಡೆಯಬೇಕಾದರೆ ಅಂಕಪಟ್ಟಿ ಬೇಕಾಗುತ್ತದೆ. ಹೀಗಾಗಿ, ಪೋಷಕರು ತಮ್ಮ ಮಕ್ಕಳಿಗೆ ಕನಿಷ್ಠ ಶಿಕ್ಷಣವನ್ನಾದರೂ ಕೊಡಿಸಬೇಕು’ ಎಂದರು.
ಜಿಲ್ಲಾ ಎಸ್.ಪಿ ಯಶೋಧಾ ವಂಟಗೋಡಿ ಮಾತನಾಡಿ, ‘ನಾನು ಸರ್ಕಾರಿ ಶಾಲೆಯಲ್ಲಿ ಓದಿದ್ದೇನೆ. ನೀವು ಅರ್ಹತೆ ಪಡೆದು ಶಿಕ್ಷಕರಾದವರು. ಎಲ್ಲ ಶಿಕ್ಷಕರು, ತಂಡವಾಗಿ ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಸಾಧ್ಯವಾಗುತ್ತದೆ’ ಎಂದರು.
ಜಿ.ಪಂ. ಸಿಇಒ ರುಚಿ ಬಿಂದಲ್ ಮಾತನಾಡಿ, ‘ವಿದ್ಯಾರ್ಥಿಗಳ ವಿಷಯದಲ್ಲಿ ಏನಾದರೂ ಸಮಸ್ಯೆ ಇದ್ದರೆ ಸಂಬಂಧಪಟ್ಟವರು ಕೂಡಲೇ ಗಮನಕ್ಕೆ ತನ್ನಿ. ನಾನು ಶಾಲೆಗಳಿಗೆ ಭೇಟಿ ನೀಡಿದಾಗ ಕೇವಲ ಬುದ್ದಿವಂತ ಮಕ್ಕಳನ್ನೇ ಪರಿಚಯಿಸುತ್ತೀರಿ. ಕಲಿಕೆಯಲ್ಲಿ ಹಿಂದಿರುವ ಮಕ್ಕಳನ್ನೂ ಮುನ್ನಲೆಗೆ ತನ್ನಿ. ಅವರ ಬಗ್ಗೆಯೂ ಗಮನಹರಿಸಿ. ಪ್ರೋತ್ಸಾಹಿಸಬೇಕು’ ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನ ದಂಡಿನ, ಹೆಚ್ಚುವರಿ ಆಯುಕ್ತ ಕಚೇರಿಯ ನಿರ್ದೇಶಕ ಈಶ್ವರ ನಾಯಕ, ಗಿರೀಶ ಪದಕಿ, ನಿಜಲಿಂಗಪ್ಪ ಬಸೇಗೆಣ್ಣಿ, ಎಂ.ಎಂ. ಖಾಜಿ ಹಾಗೂ ಇತರರು ಇದ್ದರು.
‘ಬೀದಿ ದೀಪದ ಕೆಳಗೆ ಓದು’
‘ರಾಣೆಬೆನ್ನೂರು ತಾಲ್ಲೂಕಿನ ಅಂತರವಳ್ಳಿ ಕ್ರಾಸ್‌ನ ಮನೆಗಳಲ್ಲಿ ವಿದ್ಯುತ್ ದೀಪಗಳಿಲ್ಲ. ಮನೆಗಳಲ್ಲಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಬೀದಿ ದೀಪಗಳ ಕೆಳಗೆ ಕುಳಿತು ಓದುತ್ತಿರುವ ಮಾಹಿತಿ ನನಗೆ ಸಿಕ್ಕಿತ್ತು. ಇಂಥ ಸಮಸ್ಯೆಗಳನ್ನು ಶಿಕ್ಷಕರು ಗುರುತಿಸಿ ಸಂಬಂಧಪಟ್ಟವರ ಗಮನಕ್ಕೆ ತಂದು ಪರಿಹರಿಸಬೇಕು’ ಎಂದು ಜಿಲ್ಲಾಧಿಕಾರಿಯವರು ಶಿಕ್ಷಕರಿಗೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.