ರಾಣೆಬೆನ್ನೂರು:ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಶಾಲಾ ಶಿಕ್ಷಣ ಇಲಾಖೆ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅವುಗಳನ್ನು ಅನುಷ್ಠಾನಗೊಳಿಸುವ ಮೂಲಕ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ಧಿಗೆ ವಿಶೇಷ ಒತ್ತು ನೀಡಬೇಕು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಪ್ರಾಚಾರ್ಯ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಅಭಿವೃದ್ಧಿ) ಜೆಡ್.ಎಂ.ಖಾಜಿ ಹೇಳಿದರು.
ಇಲ್ಲಿನ ವಿದ್ಯಾನಗರದ ಡಾ.ಬಿ.ಆರ್.ಅಂಬೇಡ್ಕರ್ ಪ್ರೌಢ ಶಾಲೆಯಲ್ಲಿ ಶುಕ್ರವಾರ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಸುಧಾರಣೆ –29 ಅಂಶದ ಕಾರ್ಯಕ್ರಮಗಳ ಕುರಿತು ಮತ್ತು ಎಲ್‌ಬಿಎ ಮತ್ತು ಎಫ್‌ಎಲ್‌ಎನ್ ಕಾರ್ಯ ತಂತ್ರಗಳನ್ನು ಶಾಲಾ ಹಂತದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಮುಖ್ಯ ಶಿಕ್ಷಕಕರಿಗೆ ಏರ್ಪಡಿಸಿದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಮುಖ್ಯ ಶಿಕ್ಷಕರು ಶಿಕ್ಷಣದಲ್ಲಿ ಹಿಂದುಳಿದಿರುವ ಮಕ್ಕಳನ್ನು ಗುರುತಿಸಿ, ಶಾಲಾ ಹಂತದಲ್ಲಿ ಕಠಿಣ ವಿಷಯಗಳ ಬಗ್ಗೆ ಪರೀಕ್ಷೆ ಬರೆಸಬೇಕು. ಮೌಲ್ಯಮಾಪನ ಮಾಡಿ ಮಕ್ಕಳು ಪಡೆದ ಅಂಕಗಳ ಬಗ್ಗೆ ಅರಿತು ಅವರಿಗೆ ಮಾರ್ಗದರ್ಶನ ನೀಡಬೇಕು. ಇದರೊಂದಿಗೆ ಪೋಷಕರ ಸಭೆ ಕರೆದು ಚರ್ಚೆ ನಡೆಸಬೇಕು’ ಎಂದರು.
‘ಮನೆ ಭೇಟಿ ಕಾರ್ಯಕ್ರಮ ಮಾಡಿ , ರಸಪ್ರಶ್ನೆ ಹಾಗೂ ಸಂವಾದ ಕಾರ್ಯಕ್ರಮ, ತರಗತಿ ಮುಗಿದ ನಂತರ ತೆರೆದ ಪುಸ್ತಕ ಪರೀಕ್ಷೆ ಮಾಡಿ ಉತ್ತಮ ಫಲಿತಾಂಶಕ್ಕೆ ಕಠಿಣ ವಿಷಯಗಳ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡಿ ತಾಲ್ಲೂಕಿನಲ್ಲಿ ಉತ್ತಮ ಫಲಿತಾಂಶ ಬರುವಂತೆ ಶ್ರಮಿಸಬೇಕು’ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ ಮಾತನಾಡಿ, ‘ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಕರನ್ನು ಮತ್ತಷ್ಟು ಸಜ್ಜುಗೊಳಿಸಲು ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಪ್ರತಿ ವರ್ಷ ತಾಲ್ಲೂಕಿನಲ್ಲಿ ಉತ್ತಮ ಫಲಿತಾಂಶ ದಾಖಲಾಗುತ್ತಿದ್ದು ಮುಂದೆಯೂ ಇದೇ ರೀತಿ ಸಾಧನೆ ಮಾಡಬೇಕು’ ಎಂದರು.
ಕ್ಷೇತ್ರ ಸಮನ್ವಯ ಶಿಕ್ಷಣಾಧಿಕಾರಿ ಮಂಜುನಾಯಕ, ಡಯಟ್ ಉಪನ್ಯಾಸಕ ಮಾಹಾಂತೇಶ ಡಿ.ಆರ್, ಸರ್ಕಾರಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ ಕಾಳೆ, ಅನುದಾನಿತ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರ ಚಲವಾದಿ, ಇಸಿಎ ಎಂ.ಎಂ.ಮಾಗನೂರ, ಎಸ್,ಎಂ ಬನ್ನಿಕೋಡ, ಅಂಬೇಡ್ಕರ ಸ್ಕೂಲ್ ಮುಖ್ಯ ಶಿಕ್ಷಕಿ ಜಯಲಲಿತಾ ಹಾಗೂ ಸರ್ಕಾರಿ, ಅನುದಾನಿತ, ಅನುದಾನರಹಿತ ಮತ್ತು ಖಾಸಗಿ ಶಾಲೆ ಮುಖ್ಯ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.