ADVERTISEMENT

ಹಾವೇರಿಯಲ್ಲಿ ಬೀದಿನಾಯಿಗಳ ಸಂತಾನಶಕ್ತಿಹರಣ ಶುರು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 3:22 IST
Last Updated 19 ಡಿಸೆಂಬರ್ 2025, 3:22 IST
ಹಾವೇರಿಯ ಗುತ್ತಲ ರಸ್ತೆಯಲ್ಲಿರುವ ಹಳೇ ಎಪಿಎಂಸಿ ಆವರಣದಲ್ಲಿ ನಿರ್ಮಿಸಿರುವ ‘ಬೀದಿನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸಾ ಕೇಂದ್ರ ಹಾಗೂ ಆಶ್ರಯ ತಾಣ’ 
ಹಾವೇರಿಯ ಗುತ್ತಲ ರಸ್ತೆಯಲ್ಲಿರುವ ಹಳೇ ಎಪಿಎಂಸಿ ಆವರಣದಲ್ಲಿ ನಿರ್ಮಿಸಿರುವ ‘ಬೀದಿನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸಾ ಕೇಂದ್ರ ಹಾಗೂ ಆಶ್ರಯ ತಾಣ’    

ಹಾವೇರಿ: ಜಿಲ್ಲೆಯ ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿರುವ ಬೀದಿನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದ್ದು, ಅದಕ್ಕಾಗಿ ಜಿಲ್ಲೆಯ ಹಲವು ಕಡೆಗಳಲ್ಲಿ ಕೇಂದ್ರಗಳನ್ನು ತೆರೆಯಲಾಗಿದೆ.

ಜಿಲ್ಲಾ ಕೇಂದ್ರ ಹಾವೇರಿಯ ಗುತ್ತಲ ರಸ್ತೆಯಲ್ಲಿರುವ ಹಳೇ ಎಪಿಎಂಸಿ ಆವರಣದಲ್ಲಿ ಕೇಂದ್ರ ನಿರ್ಮಿಸಲಾಗಿದ್ದು, ಶುಕ್ರವಾರದಿಂದ ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಶುರುವಾಗಲಿದೆ. ಇದಕ್ಕಾಗಿ ನುರಿತ ತಜ್ಞರು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಹಾನಗಲ್, ರಾಣೆಬೆನ್ನೂರು, ಬ್ಯಾಡಗಿ ತಾಲ್ಲೂಕಿನಲ್ಲಿ ಈಗಾಗಲೇ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಯುತ್ತಿದೆ. ನಗರ ಹಾಗೂ ಪಟ್ಟಣ ವ್ಯಾಪ್ತಿಯಲ್ಲಿರುವ ಬೀದಿನಾಯಿಗಳನ್ನು ಹಿಡಿದು ಕೇಂದ್ರಕ್ಕೆ ಕೊಂಡೊಯ್ದು, ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಇದೀಗ ಹಾವೇರಿಯಲ್ಲಿಯೂ ಈ ಪ್ರಕ್ರಿಯೆ ಶುರುವಾಗುತ್ತಿದೆ.

ADVERTISEMENT

ಶಿಗ್ಗಾವಿ, ಸವಣೂರು ಹಾಗೂ ಬಂಕಾಪುರ ಒಳಗೊಂಡು ಕೇಂದ್ರವೊಂದನ್ನು ತೆರೆಯಲಾಗುತ್ತಿದೆ. ಅದು ಪೂರ್ಣಗೊಂಡ ಬಳಿಕ, ಮೂರು ಕಡೆಯ ಬೀದಿನಾಯಿಗಳನ್ನು ಹಿಡಿದು ಶಸ್ತ್ರಚಿಕಿತ್ಸೆ ಮಾಡುವ ಕೆಲಸವಾಗಲಿದೆ.

‘ಸುಪ್ರೀಂಕೋರ್ಟ್ ಆದೇಶದಂತೆ ‘ಬೀದಿನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸಾ ಕೇಂದ್ರ ಹಾಗೂ ಆಶ್ರಯ ತಾಣ’ ತೆರೆಯಲಾಗಿದೆ. ಜಿಲ್ಲೆಯಲ್ಲಿ ಪ್ರಾಥಮಿಕ ಹಂತದಲ್ಲಿ ಸುಮಾರು 5000 ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ’ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಚಂದ್ರಪ್ಪ ತಿಳಿಸಿದರು.

‘ಹಾವೇರಿಯಲ್ಲಿಯೂ ಸುಮಾರು 1000 ಬೀದಿನಾಯಿಗಳನ್ನು ಹಿಡಿದು ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು. ಶುಕ್ರವಾರ (ಡಿ. 19) ಶಸ್ತ್ರಚಿಕಿತ್ಸೆ ಪ್ರಕ್ರಿಯೆಗೆ ಜಿಲ್ಲಾಧಿಕಾರಿಯವರು ಚಾಲನೆ ನೀಡಲಿದ್ದಾರೆ’ ಎಂದರು.

ಶಸ್ತ್ರಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದ ಹಾವೇರಿ ನಗರಸಭೆ ಪೌರಾಯುಕ್ತ ಎಚ್‌. ಕಾಂತರಾಜು, ‘ನಗರಸಭೆಯಿಂದ ಬೀದಿನಾಯಿ ಹಿಡಿಯುವ ಕಾರ್ಯಾಚರಣೆ ಆರಂಭಿಸಲಾಗುತ್ತಿದೆ. ಪಶು ವೈದ್ಯರಿಂದ ಶಸ್ತ್ರಚಿಕಿತ್ಸೆ ಮಾಡಿಸಿ, ರೇಬಿಸ್ ಲಸಿಕೆ ನೀಡಿ ಮೂರು ದಿನ ಆರೈಕೆ ಮಾಡಲಾಗುವುದು’ ಎಂದರು.

‘ಶಿಕ್ಷಣ ಸಂಸ್ಥೆಗಳ ಆವರಣ, ಕ್ರೀಡಾ ಸಂಕೀರ್ಣ, ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಇತರೆಡೆ ಇರುವ ಬೀದಿನಾಯಿಗಳನ್ನು ಹಿಡಿಯಲಾಗುವುದು. ಜೊತೆಗೆ, ಬೀದಿನಾಯಿಗಳ ಬಗ್ಗೆ ಮಾಹಿತಿ ತಿಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.