ADVERTISEMENT

ಬೀದಿನಾಯಿಗಳ ಸಂತಾನಹರಣ: ಮೊದಲ ದಿನ 22 ಶಸ್ತ್ರಚಿಕಿತ್ಸೆ

ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಆರಂಭ | ಹಳೇ ಎಪಿಎಂಸಿ ಕೇಂದ್ರದಲ್ಲಿ ಆರೈಕೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 2:27 IST
Last Updated 20 ಡಿಸೆಂಬರ್ 2025, 2:27 IST
ಹಾವೇರಿಯ ಹಳೇ ಎಪಿಎಂಸಿ ಆವರಣದಲ್ಲಿ ತೆರೆದಿರುವ ‘ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸಾ ಕೇಂದ್ರ’ದಲ್ಲಿ ಶುಕ್ರವಾರ ಬೀದಿನಾಯಿಯೊಂದಕ್ಕೆ ಶಸ್ತ್ರಚಿಕಿತ್ಸೆಗೂ ಮುನ್ನ ಚುಚ್ಚುಮದ್ದು ನೀಡಲಾಯಿತು
ಹಾವೇರಿಯ ಹಳೇ ಎಪಿಎಂಸಿ ಆವರಣದಲ್ಲಿ ತೆರೆದಿರುವ ‘ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸಾ ಕೇಂದ್ರ’ದಲ್ಲಿ ಶುಕ್ರವಾರ ಬೀದಿನಾಯಿಯೊಂದಕ್ಕೆ ಶಸ್ತ್ರಚಿಕಿತ್ಸೆಗೂ ಮುನ್ನ ಚುಚ್ಚುಮದ್ದು ನೀಡಲಾಯಿತು   

ಪ್ರಜಾವಾಣಿ ವಾರ್ತೆ

ಹಾವೇರಿ: ಮಕ್ಕಳು ಹಾಗೂ ವೃದ್ಧರ ಮೇಲೆ ಬೀದಿನಾಯಿಗಳು ದಾಳಿ ಮಾಡಿ ಗಾಯಗೊಳಿಸುತ್ತಿರುವ ಘಟನೆಗಳು ನಡೆಯುತ್ತಿರುವ ಬೆನ್ನಲ್ಲೇ, ಬೀದಿನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸುವ ಪ್ರಕ್ರಿಯೆ ಆರಂಭವಾಗಿದೆ.

ನಗರದ ಗುತ್ತಲ ರಸ್ತೆಯಲ್ಲಿರುವ ಹಳೇ ಎಪಿಎಂಸಿ ಆವರಣದಲ್ಲಿ ‘ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸಾ ಕೇಂದ್ರ ಹಾಗೂ ಆಶ್ರಯ ತಾಣ’ ನಿರ್ಮಿಸಲಾಗಿದೆ. ಈ ಕೇಂದ್ರದಲ್ಲಿ ಶುಕ್ರವಾರ ಒಂದೇ ದಿನದಲ್ಲಿ 22 ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ADVERTISEMENT

ನಗರಸಭೆಯಿಂದ ತೆರೆದಿರುವ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ‘ಸುಪ್ರೀಂಕೋರ್ಟ್‌ ಆದೇಶದನ್ವಯ ಜಿಲ್ಲೆಯ 10 ಸ್ಥಳೀಯ ಸಂಸ್ಥೆಗಳ ವಿಭಾಗದಲ್ಲಿ ಬೀದಿನಾಯಿಗಳ ಸಂತಾನಹರಣದ ಶಸ್ತ್ರಚಿಕಿತ್ಸೆಗಾಗಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ’ ಎಂದರು.

‘ಬ್ಯಾಡಗಿ, ಹಾನಗಲ್, ಹಾವೇರಿ ಹಾಗೂ ರಾಣೆಬೆನ್ನೂರ ಸೇರಿ ನಾಲ್ಕು ಸ್ಥಳಗಳಲ್ಲಿ ಕೇಂದ್ರಗಳು ಆರಂಭಗೊಂಡಿವೆ. ಈಗಾಗಲೇ 400ಕ್ಕೂ ಹೆಚ್ಚು ಬೀದಿನಾಯಿಗಳನ್ನು ಸಂರಕ್ಷಣೆ ಮಾಡಿ ಕೇಂದ್ರದಲ್ಲಿ ಇರಿಸಲಾಗಿದೆ. ಉಳಿದ ಕಡೆಗಳಲ್ಲಿ ಶೀಘ್ರವೇ ಕೇಂದ್ರ ತೆರೆಯಲಾಗುವುದು’ ಎಂದರು.

‘ವಿವಿಧ ಸಂಸ್ಥೆಗಳ ಆವರಣ, ಕ್ರೀಡಾಂಗಣ, ಶಿಕ್ಷಣ ಸಂಸ್ಥೆಗಳ ಆವರಣ, ಆಸ್ಪತ್ರೆ ಆವರಣ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಿದೆ. ಅಂಥ ಕಡೆಗಳಲ್ಲಿರುವ ಬೀದಿನಾಯಿಗಳನ್ನು ಹಿಡಿದು ಕೇಂದ್ರಕ್ಕೆ ತಂದು ಶಸ್ತ್ರಚಿಕಿತ್ಸೆ ಮಾಡಲಾಗುವುದು. ನಂತರ, ಆರೈಕೆ ಮಾಡಿ ಮೂಲ ಜಾಗಕ್ಕೆ ನಾಯಿ ಬಿಡಲಾಗುವುದು’ ಎಂದರು.

6 ಮಂದಿ ಪಶು ವೈದ್ಯರು: ‘ಸರ್ಕಾರೇತರ ಸಂಸ್ಥೆಗಳ (ಎನ್‌ಜಿಒ) ಸಹಯೋಗದಲ್ಲಿ ಕೇಂದ್ರ ತೆರೆಯಬೇಕಿತ್ತು. ಟೆಂಡರ್‌ ಕರೆದರೂ ಯಾರೂ ಅರ್ಜಿ ಸಲ್ಲಿಸಿಲ್ಲ. ಹೀಗಾಗಿ, ಸ್ಥಳೀಯ ಸಂಸ್ಥೆಗಳು ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವೈದ್ಯರಿಂದ ಕೇಂದ್ರ ಆರಂಭಿಸಲಾಗಿದೆ. ಶಸ್ತ್ರಚಿಕಿತ್ಸೆಗಾಗಿ ಆರು ವೈದ್ಯರು ಹಾಗೂ ಇಬ್ಬರು ಇಂಟರ್ನಿ ವೈದ್ಯರನ್ನು ನಿಯೋಜಿಸಲಾಗಿದೆ’ ಎಂದು ಇಲಾಖೆಯ ಉಪನಿರ್ದೇಶಕ ಶಿವಯೋಗಿ ಎಲಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಣೆಬೆನ್ನೂರು, ಬ್ಯಾಡಗಿ ಕೇಂದ್ರವನ್ನು ನಡೆಸಲು ಕೆಲ ಎನ್‌ಜಿಒಗಳು ಮುಂದೆ ಬಂದಿದೆ. ಹಾವೇರಿಯ ಕೇಂದ್ರಕ್ಕೂ ಎನ್‌ಜಿಒ ಬರಬಹುದು. ಅಲ್ಲಿಯವರೆಗೂ ಇಲಾಖೆಯ ಪಶು ವೈದ್ಯರೇ ಶಸ್ತ್ರಚಿಕಿತ್ಸೆ ಮುಂದುವರಿಸಲಿದ್ದಾರೆ’ ಎಂದರು.

ಪಶು ವೈದ್ಯಾಧಿಕಾರಿ ಡಾ. ಬೀರೇಶ ಸಣ್ಣಪುಟ್ಟಕ್ಕನವರ, ‘ಹೆಣ್ಣು ನಾಯಿ ಶಸ್ತ್ರಚಿಕಿತ್ಸೆ ಮಾಡಲು ಸುಮಾರು 40 ನಿಮಿಷ ಬೇಕು. ಗಂಡು ನಾಯಿಗೆ 10 ನಿಮಿಷ ಸಾಕು. ಶಸ್ತ್ರಚಿಕಿತ್ಸೆ ನಂತರ ನಾಯಿಗಳಿಗೆ ಮೂರು ದಿನ ನಿರಂತರವಾಗಿ ಆಹಾರ ಕೊಟ್ಟು ಆರೈಕೆ ಮಾಡಲಾಗುತ್ತದೆ. ಸಂತಾನಹರಣ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರುವುದು ಖಾತ್ರಿಯಾದ ನಂತರವೇ, ನಾಯಿಗಳನ್ನು ಹೊರಗೆ ಬಿಡಲಾಗುವುದು’ ಎಂದರು.

ತರಬೇತಿ ಕೊರತೆ: ಬೀದಿನಾಯಿಗಳನ್ನು ಹಿಡಿಯುವ ಜವಾಬ್ದಾರಿಯನ್ನು ಪೌರ ಕಾರ್ಮಿಕರು ಹಾಗೂ ನಗರಸಭೆಯ ಸಿಬ್ಬಂದಿಗೆ ವಹಿಸಲಾಗಿದೆ. ಆದರೆ, ಅವರಿಗೆ ಸೂಕ್ತ ತರಬೇತಿ ನೀಡಿಲ್ಲ. ಹೀಗಾಗಿ, ತಮ್ಮಿಷ್ಟದಂತೆ ನಾಯಿ ಹಿಡಿದುಕೊಂಡು ಕಸ ತುಂಬುವ ವಾಹನದಲ್ಲಿ ಕೇಂದ್ರಕ್ಕೆ ತರುತ್ತಿದ್ದಾರೆ. ನಾಯಿ ಸಾಗಿಸುವ ವಾಹನಗಳ ಕೊರತೆಯೂ ಕಾಡುತ್ತಿದೆ.



ಹಾವೇರಿಯ ಹಳೇ ಎಪಿಎಂಸಿ ಆವರಣದಲ್ಲಿರುವ ‘ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸಾ ಕೇಂದ್ರ’ದಲ್ಲಿ ಶುಕ್ರವಾರ ಇರಿಸಲಾಗಿದ್ದ ಬೀದಿನಾಯಿಗಳು 
ಹಾವೇರಿ ನಗರದಲ್ಲಿರುವ ಬೀದಿನಾಯಿಗಳನ್ನು ಹಿಡಿದು ಕೇಂದ್ರಕ್ಕೆ ಕೊಂಡೊಯ್ದು ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು. ಇದಕ್ಕಾಗಿ ಅಧಿಕಾರಿ–ಸಿಬ್ಬಂದಿಯನ್ನು ನಿಯೋಜಿಸಲಾಗಿದೆ
ಎಚ್‌. ಕಾಂತರಾಜು ನಗರಸಭೆ ಪೌರಾಯುಕ್ತ

ಒಂದು ನಾಯಿಗೆ ₹1650 ಖರ್ಚು

‘ಬೀದಿನಾಯಿಗಳನ್ನು ಹಿಡಿದು ಶಸ್ತ್ರಚಿಕಿತ್ಸೆ ಮಾಡಿ ಆರೈಕೆ ಮಾಡಲು ನಿಯಮಾವಳಿ ಪ್ರಕಾರ ₹ 1650 ಖರ್ಚು ಮಾಡಬೇಕು. ಆದರೆ ಇಂದಿನ ದಿನಮಾನಗಳಲ್ಲಿ ಎಲ್ಲ ಕೆಲಸಗಳಿಗೆ ಹೆಚ್ಚಿನ ದರವಿದೆ. ನಾಯಿ ಹಿಡಿಯುವ ಕಾರ್ಮಿಕರಿಗೆ ನಿರಂತರವಾಗಿ ಕೂಲಿ ನೀಡಬೇಕು. ವೈದ್ಯರಿಗೂ ಸಂಭಾವನೆ ನೀಡಬೇಕು. ಹೀಗಾಗಿಯೇ ಎನ್‌ಜಿಒಗಳು ಕೇಂದ್ರದ ನಿರ್ವಹಣೆಗೆ ಮುಂದೆ ಬರುತ್ತಿಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.