ADVERTISEMENT

ಹಾವೇರಿ: ಉದ್ಯೋಗಾಕಾಂಕ್ಷಿಯೇ ಈಗ ಉದ್ಯೋಗದಾತ

ಸವಣೂರ ಪಟ್ಟಣದ ಹಾಲೊ ಬ್ಲಾಕ್‌ ಉದ್ಯಮಿ ಅಬ್ದುಲ್ ಘನಿ ಖಾನ್ ಚೆಂಗೇಸ್‌ ಖಾನ್ ಖಾಂಜಾದೆ

ಗಣೇಶಗೌಡ ಎಂ.ಪಾಟೀಲ
Published 29 ಆಗಸ್ಟ್ 2018, 11:18 IST
Last Updated 29 ಆಗಸ್ಟ್ 2018, 11:18 IST
ಸವಣೂರ ಪಟ್ಟಣದ ಕೈಗಾರಿಕಾ ನಿವೇಶನದಲ್ಲಿ ಹಾಲೊ ಬ್ಲಾಕ್ ಘಟಕದಲ್ಲಿ  ಅಬ್ದುಲ್‌ ಘನಿ ಖಾನ್ ಚೆಂಗೇಸ್ ಖಾನ್ ಖಾಂಜಾದೆ 
ಸವಣೂರ ಪಟ್ಟಣದ ಕೈಗಾರಿಕಾ ನಿವೇಶನದಲ್ಲಿ ಹಾಲೊ ಬ್ಲಾಕ್ ಘಟಕದಲ್ಲಿ  ಅಬ್ದುಲ್‌ ಘನಿ ಖಾನ್ ಚೆಂಗೇಸ್ ಖಾನ್ ಖಾಂಜಾದೆ    

ಸವಣೂರ:ಅತ್ತ ಬೇಸಾಯ ಕೈ ಹಿಡಿಯಲಿಲ್ಲ, ಇತ್ತ ಸಣ್ಣಪುಟ್ಟ ಸರ್ಕಾರಿ ಉದ್ಯೋಗವೂ ಸಿಗಲಿಲ್ಲ. ಈ ನಡುವೆಯೇ ಆರಂಭಿಸಿದ ಬಟ್ಟೆ ವ್ಯಾಪಾರವೂ ಯಶಸ್ಸು ಕಾಣಲಿಲ್ಲ. ಸಾಲು ಸಾಲು ಸೋಲಿನ ನಡುವೆಯೂ ಎದೆಗುಂದದೇ ‘ಹಾಲೊ ಬ್ಲಾಕ್‌ ಇಟ್ಟಿಗೆ ತಯಾರಿಕೆ’ ಉದ್ಯಮ ಆರಂಭಿಸಿದ ಪಟ್ಟಣದ ಹೊರಕೇರಿ ಓಣಿಯ ಅಬ್ದುಲ್‌ ಘನಿ ಖಾನ್‌ ಚೆಂಗೇಸ್‌ ಖಾನ್ ಖಾಂಜಾದೆ, ಈಗ 14 ಮಂದಿಗೆ ಉದ್ಯೋಗ ನೀಡುತ್ತಿರುವ ‘ಉದ್ಯೋಗದಾತ’.

ಅಬ್ದುಲ್ ಘನಿ ಖಾನ್ ಓದಿದ್ದು ಹತ್ತನೇ ತರಗತಿ ತನಕ ಮಾತ್ರ. ಇವರ ಕಲಿಕೆಗೆ ಅಂದೂ ಸಣ್ಣಪುಟ್ಟ ಸರ್ಕಾರಿ ಕೆಲಸವೂ ಸಿಗಲಿಲ್ಲ. ಹೀಗಾಗಿ, ಮನೆಯ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಮಳೆಯಾಶ್ರಿತ ಕೃಷಿಯಿಂದಾಗಿ ಹೊಲದಲ್ಲಿ ಸಫಲತೆ ಕಾಣಲು ಸಾಧ್ಯವಾಗಲಿಲ್ಲ. ಒಮ್ಮೆ ಅತಿವೃಷ್ಟಿ, ಮತ್ತೊಮ್ಮೆ ಅನಾವೃಷ್ಟಿಯ ಕಾರಣ ನಿರೀಕ್ಷಿತ ಆದಾಯ ಕಾಣದೇ ನಷ್ಟ ಅನುಭವಿಸಿದರು.

ವ್ಯಾಪಾರಕ್ಕಿಳಿದ ಅವರು, ಸಿದ್ಧ ಉಡುಪುಗಳ ಮಾರಾಟದ ಬಟ್ಟೆ ಅಂಗಡಿಯೊಂದನ್ನು ತೆರೆದರು. ಆದರೆ, ಅತಿವೃಷ್ಟಿ ಮತ್ತು ಅನಾವೃಷ್ಟಿಯ ಛಾಯೆಯು ಅವರನ್ನು ಪರೋಕ್ಷವಾಗಿ ಬೆನ್ನತ್ತಿ ಬಂತು. ಕೃಷಿ ವಲಯವೇ ಸಂಕಷ್ಟ ಎದುರಿಸದ ಕಾರಣ, ಮಾರುಕಟ್ಟೆಯೂ ಹಿನ್ನಡೆ ಅನುಭವಿಸಿ, ಬಟ್ಟೆ ವ್ಯಾಪಾರ–ವಹಿವಾಟು ಕುಸಿತ ಕಂಡಿತು.

ADVERTISEMENT

‘ಮಾರುಕಟ್ಟೆ ಕುಸಿದಾಗ ನಾನೊಬ್ಬನೇ ಏನು ಮಾಡಲು ಸಾಧ್ಯ. ಅನಿವಾರ್ಯವಾಗಿ ಬಟ್ಟೆ ಅಂಗಡಿಗೆ ಬಾಗಿಲು ಹಾಕಿದೆ’ ಎಂದು ಅಂದಿನ ಬೇಸರದ ದಿನಗಳನ್ನು ಖಾಂಜಾದೆ ನೆನೆದರು.

‘ಕೃಷಿ ಮತ್ತು ಬಟ್ಟೆ ವ್ಯಾಪಾರದ ನಷ್ಟವನ್ನು ಭರಿಸಲೇ ಬೇಕಾದ ಅನಿವಾರ್ಯತೆಯೂ ಬಂದೊದಗಿತ್ತು. ಮತ್ತೆ ಧೈರ್ಯ ಮಾಡಿಕೊಂಡು, ಸಿಮೆಂಟ್ ಹಾಲೊ ಬ್ಲಾಕ್ ಇಟ್ಟಿಗೆ ಉದ್ಯಮಕ್ಕೆ ಕೈ ಹಾಕಿದೆನು. 2012 ರಲ್ಲಿ ಹಾಲೊ ಬ್ಲಾಕ್ ಇಟ್ಟಿಗೆ ತಯಾರಿಸುವ ಘಟಕವನ್ನು ಆರಂಭಿಸಿದೆನು. ಈಗ 14 ಮಂದಿಗೆ ಕೆಲಸ ನೀಡುತ್ತಿದ್ದೇನೆ’ ಎಂದು ಹೆಮ್ಮೆಯಿಂದ ನುಡಿದರು.

ಈ ಉದ್ಯಮದಲ್ಲಿ ಕಳೆದ ಆರು ವರ್ಷಗಳಲ್ಲಿ ಯಶಸ್ಸು ಕಂಡಿದ್ದೇನೆ. ಉತ್ತಮ ಸಾಮಗ್ರಿಗಳನ್ನು ಉಪಯೋಗಿಸಿ, ಗುಣಮಟ್ಟದಿಂದ ಇಟ್ಟಿಗೆ ತಯಾರಿಸುತ್ತೇವೆ. ಯೋಗ್ಯ ಬೆಲೆಗೆ ಮಾರಾಟ ಮಾಡುತ್ತೇವೆ. ಹೀಗಾಗಿ, ಸುತ್ತಲ ಪ್ರದೇಶದಲ್ಲಿ ಬೇಡಿಕೆ ಹೆಚ್ಚಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಈ ಹಿಂದೆ ಉಂಟಾಗಿದ್ದ ನಷ್ಟವನ್ನೂ ಭರಿಸಿಕೊಂಡಿದ್ದೇನೆ. ಕಾರ್ಮಿಕರಿಗೂ ಸರಿಯಾಗಿ ವೇತನ ನೀಡುತ್ತಿದ್ದೇನೆ. ನನ್ನ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.