ಹಾವೇರಿ: ರಾಜ್ಯದಾದ್ಯಂತ ಬಹುತೇಕ ಜಮೀನುಗಳಲ್ಲಿ ಕಬ್ಬು ಕಟಾವು ಶುರುವಾಗಿದ್ದು, ಸಕ್ಕರೆ ಕಾರ್ಖಾನೆಗಳಿಗೆ ಕಬ್ಬಿನ ಸಾಗಿಸುವ ಕೆಲಸವೂ ಆರಂಭವಾಗಿದೆ. ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಅಕ್ಟೋಬರ್ 20ರಿಂದಲೇ ಕಬ್ಬು ನುರಿಸುವಂತೆ ಎಲ್ಲ ಕಾರ್ಖಾನೆಗಳಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಜಿಲ್ಲೆಯ ಸಂಗೂರಿನಲ್ಲಿ ಜಿ.ಎಂ. ಶುಗರ್ ಆ್ಯಂಡ್ ಎನರ್ಜಿ ಕಂಪನಿ, ಶಿಗ್ಗಾವಿ ತಾಲ್ಲೂಕಿನ ಶಿವಪುರ- ಕೋಣನಕೇರಿ ರಸ್ತೆಯಲ್ಲಿ ವಿ.ಐ.ಎನ್.ಪಿ ಡಿಸ್ಟಿಲರೀಸ್ ಮತ್ತು ಶುಗರ್ಸ್ ಕಂಪನಿ ಹಾಗೂ ರಟ್ಟೀಹಳ್ಳಿ ತಾಲ್ಲೂಕಿನ ಭೈರನಪಾದ ಬಳಿ ಜಿ.ಎಂ. ಶುಗರ್ಸ್ ಕಾರ್ಖಾನೆ ಇದೆ. ಈ ಕಾರ್ಖಾನೆಗಳಲ್ಲಿಯೂ ಕಬ್ಬು ನುರಿಸುವ ಕೆಲಸ ಆರಂಭಿಸಲು ರಾಜ್ಯ ಸರ್ಕಾರ ಅವಕಾಶ ನೀಡಿದೆ. ಮೂರು ಕಾರ್ಖಾನೆಗಳಿಗೂ ಈಗಾಗಲೇ ಹಂತ ಹಂತವಾಗಿ ಕಬ್ಬು ಸರಬರಾಜು ಆಗುತ್ತಿದೆ.
‘ಹಾವೇರಿ, ಬೆಳಗಾವಿ, ವಿಜಯಪುರ, ಬೀದರ್, ಕಲಬುರಗಿ, ಬಾಗಲಕೋಟೆ, ಗದಗ, ಯಾದಗಿರಿ, ದಾವಣಗೆರೆ, ಉತ್ತರ ಕನ್ನಡ, ಬಳ್ಳಾರಿ, ಹಾಗೂ ವಿಜಯನಗರ ಜಿಲ್ಲೆಗಳಲ್ಲಿರುವ ಸಕ್ಕರ ಕಾರ್ಖಾನೆಗಳಲ್ಲಿ 2025–26ನೇ ಸಾಲಿನ ಹಂಗಾಮಿನ ಕಬ್ಬು ನುರಿಸುವ ಕಾರ್ಯವನ್ನು ಅಕ್ಟೋಬರ್ 20ರಿಂದ ಆರಂಭಿಸಿ’ ಎಂದು ರಾಜ್ಯ ಸರ್ಕಾರವು ಆದೇಶದಲ್ಲಿ ತಿಳಿಸಿದೆ.
ಜಿಲ್ಲೆಯ ಹಾವೇರಿ, ಹಾನಗಲ್, ಬ್ಯಾಡಗಿ, ಶಿಗ್ಗಾವಿ, ಸವಣೂರು, ರಟ್ಟೀಹಳ್ಳಿ, ರಾಣೆಬೆನ್ನೂರು, ಹಿರೇಕೆರೂರು ತಾಲ್ಲೂಕಿನಲ್ಲಿ ಹಲವು ರೈತರು ಕಬ್ಬು ಬೆಳೆದಿದ್ದಾರೆ. ಕಾರ್ಖಾನೆಯವರು ಈಗಾಗಲೇ ರೈತರನ್ನು ಸಂಪರ್ಕಿಸಿ, ಕಬ್ಬು ಕಟಾವು ಮಾತುಕತೆ ನಡೆಸುತ್ತಿದ್ದಾರೆ. ಸರ್ಕಾರದ ಆದೇಶ ಹೊರಬಿದ್ದಿದ್ದರಿಂದ, ಕಾರ್ಖಾನೆಗಳು ಅ. 20ರಿಂದ ಕಬ್ಬು ನುರಿಸುವ ಕೆಲಸ ಆರಂಭಿಸಲಿವೆ.
ಟನ್ ಕಬ್ಬಿಗೆ ₹3,550 ದರ ನಿಗದಿಗೆ ಆಗ್ರಹ: ‘ಜಿಲ್ಲೆಯ ಹಲವು ರೈತರು, ಕಬ್ಬು ಬೆಳೆದಿದ್ದಾರೆ. ಈ ವರ್ಷದಲ್ಲಿ ಕಬ್ಬು ಬೆಳೆಗೆ ಪ್ರತಿ ಟನ್‌ಗೆ ₹ 3,550 ದರ ನೀಡಬೇಕು’ ಎಂದು ರೈತರು ಆಗ್ರಹಿಸಿದ್ದಾರೆ.
ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಕಬ್ಬು ಬೆಳೆಗಾರರ ಸಭೆಯಲ್ಲಿ ಪಾಲ್ಗೊಂಡಿದ್ದ ರೈತರು, ಕಾರ್ಖಾನೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ಬಿಚ್ಚಿಟ್ಟರು.
‘ಕಾರ್ಖಾನೆಯವರು ಹಣ ಕೊಡುವುದರಲ್ಲಿ ರೈತರಿಗೆ ಪ್ರತಿ ವರ್ಷವೂ ಮೋಸ ಮಾಡುತ್ತಿದ್ದಾರೆ. ಕಬ್ಬು ಸಾಗಾಣಿಕೆ ಮಾಡಿ 10 ತಿಂಗಳಾದರೂ ಜಿ.ಎಂ. ಶುಗರ್ಸ್ ಅವರು ರೈತರಿಗೆ ಪೂರ್ತಿ ಹಣ ಸಂದಾಯ ಮಾಡಿಲ್ಲ. ಬಡ್ಡಿ ಸಮೇತ ಹಣ ನೀಡಲು ಕಬ್ಬು ಆಯುಕ್ತರು ಸೂಚಿಸಿದರೂ ಕ್ಯಾರೆ ಎಂದಿಲ್ಲ. ಹಳೇ ಬಿಲ್ ಕೊಡುವವರೆಗೂ ಸಂಗೂರು ಹಾಗೂ ಭೈರನಪಾದದಲ್ಲಿರುವ ಕಾರ್ಖಾನೆ ಆರಂಭಕ್ಕೆ ಅನುಮತಿ ನೀಡಬಾರದು’ ಎಂದು ರೈತರು ಒತ್ತಾಯಿಸಿದರು.
‘ಕಬ್ಬು ಬೆಳೆಗಾರರ ಹಿತ ಕಾಯುವುದಕ್ಕಾಗಿ ಸಂಗೂರಿನಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲಾಗಿದೆ. ಕಾರ್ಖಾನೆ ನಿರ್ವಹಣೆಯನ್ನು ಗುತ್ತಿಗೆ ಪಡೆದಿರುವ ಜಿ.ಎಂ. ಶುಗರ್ಸ್‌ನವರು ಈಗಾಗಲೇ ₹ 92 ಕೋಟಿ ಸಾಲ ಮಾಡಿಕೊಂಡಿದ್ದಾರೆ. ಅವರಿಗೆ ಕಾರ್ಖಾನೆ ನಡೆಸಲು ಸಾಧ್ಯವಾಗದಿದ್ದರೆ, ಸಾಲವನ್ನು ಮರು ಪಾವತಿ ಮಾಡಿ ಕಾರ್ಖಾನೆಯನ್ನು ಬಿಟ್ಟು ಹೋಗಬೇಕು’ ಎಂದು ರೈತರು ಹೇಳಿದರು.
‘ಎಲ್ಲ ಕಾರ್ಖಾನೆಯಿಂದ ಒಂದು ಟನ್ ಕಬ್ಬಿಗೆ ₹ 3,550 ದರ ಕೊಡಿಸಬೇಕು. ಕಬ್ಬು ಕಟಾವು ಹಾಗೂ ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆಯವರಿಂದಲೇ ಭರಿಸಬೇಕು. ಕಾರ್ಖಾನೆ ಆವರಣದಲ್ಲಿ ಸರ್ಕಾರದಿಂದಲೇ ತೂಕದ ಯಂತ್ರ ಹಾಗೂ ಲ್ಯಾಬ್ ಸ್ಥಾಪಿಸಬೇಕು’ ಎಂದು ರೈತರು ಒತ್ತಾಯಿಸಿದರು.
ರೈತರ ಬೇಡಿಕೆ ಆಲಿಸಿದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ರಾಜ್ಯ ಕಬ್ಬು ಬೆಳೆಗಾರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪೂರ, ರಾಜಶೇಖರ್ ಬೆಟಗೇರಿ, ಚಂದ್ರಪ್ಪ ವರ್ದಿ, ಮಂಜುನಾಥ ಅಸುಂಡಿ, ದಾನೇಶಪ್ಪ ಕೆಂಗೊಡ, ರಾಜಶೇಖರ ಹಲಸೂರ, ಸೋಮಣ್ಣ ದೊಡ್ಮನಿ, ಮುತ್ತಣ್ಣ ಗುಡಿಗೇರಿ, ಆನಂದ್ ಕೆಳಗಲಮನಿ, ಶಂಕರ್ ಗೌಡ ಪಾಟೀಲ, ರಾಜು ಹೊನ್ನತ್ತಿ, ಶ್ರೀನಿವಾಸ್ ಶಿವಪೂಜಿ, ಗಿರೀಶ ಕರೆಗೌಡ್ರ, ಪಂಚಯ್ಯ ಹಿರೇಮಠ, ರವಿಕುಮಾರ್ ಸವಣೂರು, ಮಡ್ಲಿ ಪಾಟೀಲ, ಸಿದ್ದಲಿಂಗಪ್ಪ ಕಲಕೋಟಿ, ವಿರೂಪಾಕ್ಷಪ್ಪ ಕಲಕೋಟಿ, ಪ್ರಭು ಗೌರಿಮನಿ, ಮಂಜಣ್ಣ ಗಾಣಿಗೇರ, ಮುರಗೆಪ್ಪ ಅಂಗಡಿ, ಸುರೇಶ ಕಲ್ಲೇದೇವರ ಸಭೆಯಲ್ಲಿದ್ದರು.
ಈ ವರ್ಷದ ಕಬ್ಬಿಗೆ ಕೇಂದ್ರ ಸರ್ಕಾರವು ₹ 3550 ಎಫ್‌ಆರ್‌ಪಿ ನಿಗದಿಪಡಿಸಿದೆ. ಎಲ್ಲ ಕಾರ್ಖಾನೆಯವರು ರಿಕವರಿ ಕಡಿಮೆ ತೋರಿಸಿ ರೈತರಿಗೆ ಮೋಸ ಮಾಡುತ್ತಿದ್ದಾರೆರೈತ ಮುಖಂಡರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.