
ಹಾವೇರಿ/ಬಾಗಲಕೋಟೆ: ಹಾವೇರಿ ಮತ್ತು ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಬುಧವಾರವೂ ಕಬ್ಬು ಬೆಳೆಗಾರರ ಪ್ರತಿಭಟನೆ ಮುಂದುವರಿಯಿತು. ಹಾವೇರಿಯಲ್ಲಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ನೇತೃತ್ವದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ಸಂಧಾನ ಸಭೆ ನಡೆದರೂ ಫಲಕಾರಿಯಾಗಲಿಲ್ಲ.
ಬಾಗಲಕೋಟೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ ಅವರೂ ರೈತ ಮುಖಂಡರ ಜೊತೆ ಮಾತುಕತೆ ನಡೆಸಿದ್ದು, ರೈತರು ತಮ್ಮ ಪಟ್ಟು ಸಡಿಲಿಸಲಿಲ್ಲ. ಮುಧೋಳ ತಾಲ್ಲೂಕಿನ ವಿವಿಧೆಡೆ ರಸ್ತೆ ತಡೆ, ಪ್ರತಿಭಟನೆ ನಡೆಯಿತು.
‘ಹಾವೇರಿ ಜಿಲ್ಲೆ ಬೆಳೆಗಾರರಿಗೆ ಕಬ್ಬಿನ ದರ ನಿಗದಿ ಆಗುವಲ್ಲಿ ಅನ್ಯಾಯ ಆಗುತ್ತಿದೆ. ಟನ್ ಕಬ್ಬಿಗೆ ₹3,300 ಅಥವಾ ₹3,200 ದರ ನಿಗದಿ ಪಡಿಸಬೇಕು. ಅಲ್ಲಿವರೆಗೂ ಹೋರಾಟ ಕೈಬಿಡುವುದಿಲ್ಲ’ ಎಂದು ರೈತರು ಪಟ್ಟು ಹಿಡಿದರು. ಆದರೆ, ಆ ದರ ನಿಗದಿಗೆ ಜೆ.ಎಂ.ಶುಗರ್ ಕಂಪನಿ (ಸಂಗೂರು–ಭೈರನಪಾದ) ಮತ್ತು ವಿಐಎನ್‌ಪಿ ಕಂಪನಿ (ಕೋಣನಕೇರಿ) ಮಾಲೀಕರು ಒಪ್ಪಲಿಲ್ಲ.
‘ಹಾವೇರಿ ಜಿಲ್ಲೆಯನ್ನು ಕಡೆಗಣಿಸಲಾಗಿದೆ. ಸಕ್ಕರೆ ಇಳುವರಿ ಆಧಾರದಲ್ಲಿ ಬೆಳಗಾವಿ ಜಿಲ್ಲೆಗಷ್ಟೇ ಹೆಚ್ಚಿನ ದರ ನಿಗದಿಪಡಿಸಿದೆ. ಹಾವೇರಿ ಜಿಲ್ಲೆಗೂ ಅನ್ವಯವಾಗುವಂತೆ ₹3,300 ದರ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಬೇಕು’ ಎಂದು ರೈತರು ಆಗ್ರಹಿಸಿದರು. ಚಿತ್ತಾಪುರ ಕರದಾಳ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ಧರಣಿ ಸ್ಥಳಕ್ಕೆ ಭೇಟಿ ನೀಡಿ, ಬೆಂಬಲಿಸಿದರು.
ಟನ್ ಕಬ್ಬಿಗೆ ₹3,500 ದರ ನಿಗದಿಗೆ ಆಗ್ರಹಿಸಿ ಮುಧೋಳ ಪಟ್ಟಣ ಸೇರಿದಂತೆ ತಾಲ್ಲೂಕಿನ ಶಿರೋಳ ಕ್ರಾಸ್, ಸೊರಗಾವಿ, ಕಸಬಾ ಜಂಬಗಿ, ಚಿಚಖಂಡಿ, ಹಲಗಲಿ, ಮರಿಕಟ್ಟಿ, ಮಂಟೂರ, ಬುದ್ನಿ ಸೇರಿ ವಿವಿಧೆಡೆ ಪ್ರತಿಭಟನೆ ನಡೆಯಿತು. ವಾಹನ ಸುಗಮ ಸಂಚಾರಕ್ಕೆ ತೊಂದರೆಯಾಯಿತು.
ಕಸಬಾ ಜಂಬಗಿಯಲ್ಲಿ ರಸ್ತೆಯಲ್ಲೇ ಅಡುಗೆ ಮಾಡಿ, ಊಟ ಮಾಡಿದರು. ವಿಜಯಪುರ- ಮುಧೋಳ, ಜಮಖಂಡಿ- ಲೋಕಾಪುರ ಸೇರಿದಂತೆ ವಿವಿಧ ಕಡೆಗೆ ಹೊರಟಿದ್ದ ಸಾರಿಗೆ ಸಂಸ್ಥೆ ವಾಹನಗಳು ವಿವಿಧ ಬಸ್ ನಿಲ್ದಾಣದಲ್ಲಿ ನಿಂತಿದ್ದವು. ಕಚೇರಿ, ಶಾಲಾ-ಕಾಲೇಜು, ಆಸ್ಪತ್ರೆಗ್ರಳಿಗೆ ತೆರಳುತ್ತಿದ್ದವರಿಗೂ ಸಮಸ್ಯೆಯಾಯಿತು.
ಮುಧೋಳ ತಾಲ್ಲೂಕಿನ ಕಸಬಾ ಜಂಬಗಿ ಕ್ರಾಸ್ ಬಳಿ ಬುಧವಾರ ರಸ್ತೆಗೆ ಬೇಲಿ ಹಚ್ಚಿ ವಾಹನಗಳ ಸಂಚಾರ ತಡೆದಿರುವುದು
ಸಿದ್ದರಾಮಯ್ಯ ಭಾವಚಿತ್ರಕ್ಕೆ ಮಸಿ ಬಳಿದು ರೈತರ ಪ್ರತಿಭಟನೆ
ಹುಮನಾಬಾದ್: ಬೆಳಗಾವಿ ಜಿಲ್ಲೆಯಂತೆ ಪ್ರತಿ ಟನ್ ಕಬ್ಬಿಗೆ ₹3300 ನಿಗದಿಪಡಿಸಬೇಕು ಎಂದು ಆಗ್ರಹಿಸಿ ಕಬ್ಬು ಬೆಳೆಗಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರ ಭಾವಚಿತ್ರಕ್ಕೆ ಮಸಿ ಬಳಿದು ಬುಧವಾರ ಇಲ್ಲಿ ಪ್ರತಿಭಟಿಸಿದರು.
ಬೆಲೆ ನಿಗದಿ ಸಂಬಂಧ ಜಿಲ್ಲಾಡಳಿತ–ಕಬ್ಬು ಬೆಳೆಗಾರರ ನಡುವೆ ನಡೆದ ನಾಲ್ಕು ಸಭೆಗಳು ವಿಫಲಗೊಂಡ ಬಳಿಕ ರೈತರು ಬುಧವಾರ ಹೈದರಾಬಾದ್–ಮುಂಬೈ ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿಗೆ ಕರೆ ಕೊಟ್ಟಿದ್ದರು. ವಿವಿಧ ಭಾಗಗಳಿಂದ ಎತ್ತಿನ ಬಂಡಿಗಳಲ್ಲಿ ಬಂದಿದ್ದ ರೈತರು ಹೆದ್ದಾರಿ ತಡೆಗೆ ಮುಂದಾದಾಗ ಪೊಲೀಸರು ಅವರನ್ನು ತಡೆದರು. ಈ ನಡುವೆ ವಾಗ್ವಾದ ನಡೆಯಿತು. ಆನಂತರ ರೈತರು ಹುಮನಾಬಾದ್ ಪಟ್ಟಣದಲ್ಲಿ ಧರಣಿ ಪ್ರತಿಭಟನಾ ರ್‍ಯಾಲಿ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೀದರ್ ಜಿಲ್ಲಾ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ರೈತ ಸಂಘಟನೆಗಳ ಒಕ್ಕೂಟ ಸಿಪಿಎಂ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರೂ ಕಬ್ಬು ಬೆಳೆಗಾರರನ್ನು ಬೆಂಬಲಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಧರಣಿ ಸ್ಥಳಕ್ಕೆ ಬಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮನವಿ ಪತ್ರ ಸ್ವೀಕರಿಸಿ ‘ಕಾರ್ಖಾನೆಗಳ ಮನವೊಲಿಸಿ ಸಮಸ್ಯೆ ಇತ್ಯರ್ಥಕ್ಕೆ ಶ್ರಮಿಸಲಾಗುವುದು. ಗುರುವಾರ (ನ. 13) ನಡೆಯಲಿರುವ ಸಭೆಯಲ್ಲಿ ಕಬ್ಬು ಬೆಳೆಗಾರರು ಭಾಗವಹಿಸಬೇಕು’ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.