
ಹಾವೇರಿ: ‘ಜಿಲ್ಲೆಯಲ್ಲಿ ಕ್ಷಯರೋಗ ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಕ್ಷಯರೋಗಿಗಳಿಗೆ ₹1,000 ಸಹಾಯಧನ ನೀಡುವ ಬದಲು, ಪೌಷ್ಠಿಕ ಆಹಾರ ಕಿಟ್ ನೀಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಜಿಲ್ಲಾ ಮಟ್ಟದ ಕ್ಷಯರೋಗ ವೇದಿಕೆ ಸಮಿತಿ ಸಭೆ’ಯಲ್ಲಿ ಅವರು ಮಾತನಾಡಿದರು.
‘ಆರಂಭದ ಹಂತದಲ್ಲೇ ಕ್ಷಯರೋಗ ಗುರುತಿಸಿ, ಚಿಕಿತ್ಸೆ ನೀಡಿದರೆ ಕ್ಷಯರೋಗ ಗುಣಪಡಿಸಬಹುದು. ಈ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಕ್ಷಯ ಪರೀಕ್ಷೆ ಹೆಚ್ಚಿನ ಪ್ರಮಾಣದಲ್ಲಿ ಮಾಡಬೇಕು’ ಎಂದು ಹೇಳಿದರು.
‘ಕ್ಷಯರೋಗಿಗಳು ಇರುವ ಸ್ಥಳಗಳಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಕ್ಷಯರೋಗಿಗಳ ಪರಿಶೀಲನೆ ಮಾಡಬೇಕು. ಧೂಮಪಾನ, ಮದ್ಯಪಾನ ಮಾಡದಂತೆ ತಿಳಿವಳಿಕೆ ನೀಡಬೇಕು. ದುಶ್ಚಟಗಳಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕು’ ಎಂದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ನಿಲೇಶ್ ಎಂ.ಎನ್. ಮಾತನಾಡಿ, ‘ಮೊದಲಿಗಿಂತ ಈಗ ಕ್ಷಯರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕ್ಷಯ ಪರೀಕ್ಷೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಲಾಗುತ್ತಿದೆ. ಧೂಮಪಾನ ಹಾಗೂ ಮದ್ಯಪಾನ ಮತ್ತು ಪೌಷ್ಠಿಕ ಆಹಾರದ ಕೊರತೆಯಿಂದ ಕ್ಷಯರೋಗಿಗಳ ಮರಣ ಕಂಡುಬರುತ್ತಿದೆ. ಕ್ಷಯರೋಗಿಗಳಿಗೆ ಧೂಮಪಾನ ಹಾಗೂ ಮದ್ಯಪಾನ ಮಾಡದಂತೆ ತಿಳಿವಳಿಕೆ ಮೂಡಿಸಲಾಗುತ್ತಿದೆ. ಅಷ್ಟಾದರೂ ಕೆಲವರು ಮದ್ಯಪಾನ ಹಾಗೂ ಧೂಮಪಾನ ಬಿಡುತ್ತಿಲ್ಲ’ ಎಂದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪುನೀತ್ ಹಾಗೂ ಅಧಿಕಾರಿಗಳು ಹಾಜರಿದ್ದರು.