
ಘಟನೆ ನಡೆದ ಸಂದರ್ಭ
ಹಾವೇರಿ: ‘ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂಬ ಆರೋಪದಡಿ ಸರ್ಕಾರಿ ಉರ್ದು ಶಾಲೆ ಶಿಕ್ಷಕ ಜಗದೀಶ್ ಅವರನ್ನು ಥಳಿಸಿ ಚಪ್ಪಲಿ ಹಾರ ಹಾಕಿ ರಸ್ತೆಗಳಲ್ಲಿ ಮೆರವಣಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸವಣೂರು ಪೊಲೀಸ್ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಹಾಗೂ ಹೆಡ್ ಕಾನ್‌ಸ್ಟೆಬಲ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಡಿ. 10ರಂದು ನಡೆದಿದ್ದ ಘಟನೆ ಬಗ್ಗೆ ಪ್ರಾಥಮಿಕ ಮಾಹಿತಿ ಕಲೆಹಾಕಿದ್ದ ಜಿಲ್ಲಾ ಎಸ್ಪಿ ಯಶೋಧಾ ವಂಟಗೋಡಿ ಅವರು ದಕ್ಷಿಣ ವಲಯ ದಾವಣಗೆರೆ ಐಜಿಪಿ ಬಿ.ಆರ್. ರವಿಕಾಂತೇಗೌಡ ಅವರಿಗೆ ವರದಿ ಸಲ್ಲಿಸಿದ್ದರು. ವರದಿ ಆಧರಿಸಿ ಇನ್‌ಸ್ಪೆಕ್ಟರ್ ಎಸ್. ದೇವಾನಂದ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಐಜಿಪಿ ಆದೇಶ ಹೊರಡಿಸಿದ್ದಾರೆ. ಇಲಾಖಾ ವಿಚಾರಣೆಗೂ ನಿರ್ದೇಶನ ನೀಡಿದ್ದಾರೆ.
ಹೆಡ್ ಕಾನ್‌ಸ್ಟೆಬಲ್ ಮಲ್ಲಿಕಾರ್ಜುನ ಒದನವರ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಎಸ್ಪಿ ಯಶೋಧಾ ಅವರೇ ಆದೇಶಿಸಿದ್ದಾರೆ.
ಅನೈತಿಕ ಪೊಲೀಸ್‌ಗಿರಿ
ಡಿ. 10ರಂದು ಸವಣೂರಿನಲ್ಲಿರುವ ಸರ್ಕಾರಿ ಉರ್ದು ಶಾಲೆಗೆ ನುಗ್ಗಿದ್ದ ಪೋಷಕರು ಹಾಗೂ ಸ್ಥಳೀಯರು, ಶಿಕ್ಷಕ ಜಗದೀಶ್ ಅವರನ್ನು ಥಳಿಸಿ ಚಪ್ಪಲಿಯಿಂದ ಹೊಡೆದಿದ್ದರು. ನಂತರ, ಚಪ್ಪಲಿ ಹಾರ ಹಾಕಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿದ್ದರು. ‘ಅನೈತಿಕ ಪೊಲೀಸ್‌ಗಿರಿ’ ಎಂದು ಆರೋಪಿಸಿದ್ದ ಹಲವು ಸಂಘಟನೆ ಮುಖಂಡರು, ಸವಣೂರು ಬಂದ್‌ಗೂ ಕರೆ ನೀಡಿದ್ದಾರೆ.
‘ಶಿಕ್ಷಕ ತಪ್ಪು ಮಾಡಿದ್ದರೆ, ಕಾನೂನು ಪ್ರಕಾರ ಶಿಕ್ಷೆ ನೀಡಲು ಪೊಲೀಸರು ಹಾಗೂ ನ್ಯಾಯಾಲಯವಿದೆ. ಆದರೆ, ಸ್ಥಳೀಯರೇ ಕಾನೂನು ಕೈಗೆತ್ತಿಕೊಂಡು ಶಿಕ್ಷಕನನ್ನು ಥಳಿಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿ ಅಪಮಾನ ಮಾಡುವುದು ಯಾವ ನ್ಯಾಯ’ ಎಂದು ಮುಖಂಡರು ಪ್ರಶ್ನಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.