
ಹಾವೇರಿ: ‘ಸಮಾಜದಲ್ಲಿ ಶಿಕ್ಷಕನಿಗೆ ಗೌರವದ ಸ್ಥಾನವಿದೆ. ಅದನ್ನು ಅರಿತು ಶಿಕ್ಷಕರಾದವರು, ಮಕ್ಕಳಿಗೆ ಪ್ರಾಮಾಣಿಕವಾಗಿ ಶ್ರದ್ಧೆಯಿಂದ ಪಾಠ ಮಾಡಬೇಕು. ಸರಿಯಾಗಿ ಪಾಠ ಮಾಡದಿದ್ದರೆ ಅಂಥ ಶಿಕ್ಷಕನಿಗೆ ದೇವರು, ವಿದ್ಯಾರ್ಥಿಗಳು ಹಾಗೂ ಇಡೀ ಸಮಾಜವೇ ಶಾಪ ಕೊಡುತ್ತದೆ’ ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರು ಹೇಳಿದರು.
ನಗರದ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ‘ಹುಕ್ಕೇರಿಮಠ ಶಿವಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳ ಸುವರ್ಣ ಮಹೋತ್ಸವ’ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ‘ಹಿರಿಯ ವಿದ್ಯಾರ್ಥಿಗಳ ಸಮಾವೇಶ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಪಠ್ಯಕ್ಕಷ್ಟೇ ಸೀಮಿತವಾಗುವ ಶಿಕ್ಷಕರನ್ನು ವಿದ್ಯಾರ್ಥಿಗಳು ಹಾಗೂ ಸಮಾಜ ಬೇಗನೇ ಮರೆತುಬಿಡುತ್ತದೆ. ಪಠ್ಯದ ಜೊತೆಯಲ್ಲಿ ಒಳ್ಳೆಯ ವಿಷಯಗಳನ್ನು ತಿಳಿಸುವ ಉತ್ತಮ ಶಿಕ್ಷಕರನ್ನು ಎಂದಿಗೂ ನೆನಪು ಇಟ್ಟುಕೊಳ್ಳುತ್ತಾರೆ. ತಂದೆ–ತಾಯಿ ಸ್ಥಾನದಲ್ಲಿ ನಿಂತು ಮಕ್ಕಳ ಭವಿಷ್ಯಕ್ಕಾಗಿ ಅತ್ಯುತ್ತಮವಾಗಿ ಕೆಲಸ ಮಾಡುವ ಶಿಕ್ಷಕರನ್ನು ಸಮಾಜ ಹಾಗೂ ವಿದ್ಯಾರ್ಥಿಗಳು ಜೀವನಪೂರ್ತಿ ಪೂಜೆ ಮಾಡುತ್ತಾರೆ’ ಎಂದರು.
‘ಗುರುಗಳನ್ನು ದೇವರ ರೂಪದಲ್ಲಿ ಕಾಣುವ ಸಂಸ್ಕೃತಿ–ಪರಂಪರೆ ನಮ್ಮದು. ಅಮೆರಿಕದಲ್ಲಿ ವಿಜ್ಞಾನಿ ಹಾಗೂ ಶಿಕ್ಷಕರನ್ನು ವಿವಿಐಪಿ ರೀತಿಯಲ್ಲಿ ಗೌರವಿಸಲಾಗುತ್ತದೆ. ಫ್ರಾನ್ಸ್‌ನ ನ್ಯಾಯಾಲಯಗಳ ಕಲಾಪಗಳಲ್ಲಿ ಶಿಕ್ಷಕರಿಗೆ ಮಾತ್ರ ಕುಳಿತುಕೊಂಡು ಮಾತನಾಡುವ ಅವಕಾಶವಿದೆ. ಜಪಾನ್‌ನಲ್ಲಿ ಯಾವುದೇ ಶಿಕ್ಷಕನನ್ನು ಪೊಲೀಸರು ಬಂಧಿಸಬೇಕಾದರೆ, ಅಲ್ಲಿಯ ಸರ್ಕಾರದ ವಿಶೇಷ ಅನುಮತಿ ಪಡೆಯಬೇಕು. ಕೋರಿಯಾದಲ್ಲಿ ಕ್ಯಾಬಿನೆಟ್ ಸಚಿವರಿಗೆ ಸಿಗುವ ಸೌಲಭ್ಯಗಳು ಶಿಕ್ಷಕರಿಗೆ ಸಿಗುತ್ತಿವೆ’ ಎಂದರು.
ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ಮಾತನಾಡಿ, ‘ಸಮಾಜದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಶಿಕ್ಷಕರು ಶಿಲ್ಪಿಗಳಾಗಿ ಕಲ್ಲುಗಳನ್ನು ಕೆತ್ತನೆ ಮಾಡಿ ಸುಂದರ ಮೂರ್ತಿ ಮಾಡಿ ಸಮಾಜಕ್ಕೆ ಕೊಡುತ್ತಾರೆ. ಅಂತ ಮೂರ್ತಿಗಳೇ ಸಮಾಜದ ಆಸ್ತಿಗಳಾಗುತ್ತವೆ. ಇಂದು ಸಮಾಜದಲ್ಲಿ ಶಾಂತಿ, ನೆಮ್ಮದಿ, ಸಹಭಾಳ್ವೆ ಬರಬೇಕಾದರೆ ಅದು ಯುವಕರಿಂದ ಮಾತ್ರ ಸಾಧ್ಯ’ ಎಂದರು.
ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ‘ತಂದೆ–ತಾಯಿಯ ನಂತರದ ಸ್ಥಾನ ಗುರುವಿಗಿದೆ. ನಾನು ಸಹ ಮಠದ ಶಾಲೆಯ ವಿದ್ಯಾರ್ಥಿ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವ ಸಂಕಲ್ಪ ಶಕ್ತಿಗೆ ದಿಕ್ಕು–ಅರ್ಥಗರ್ಭಿತ ಅಡಿಪಾಯ ಹಾಕಿಕೊಟ್ಟ ಸಂಸ್ಥೆ ಶಿವಲಿಂಗೇಶ್ವರ ವಿದ್ಯಾಪೀಠ. ಶಿಸ್ತು, ದಕ್ಷತೆ, ಪ್ರಾಮಾಣಿಕತೆ, ವಿನಯತೆ, ಸಹಕಾರ, ಸಹಭಾಳ್ವೆ, ಸದಾಚಾರ, ಸಮಾನತೆ, ನಮ್ಯತೆ, ನಂಬಿಕೆ, ಮಾನವೀಯತೆ, ಅನುಕಂಪ, ರಾಷ್ಟ್ರಭಕ್ತಿಯನ್ನು ಶಿಕ್ಷಕರು ಕಲಿಸಿದ್ದಾರೆ’ ಎಂದರು.
ನಿವೃತ್ತ ಶಿಕ್ಷಕರಾದ ಬಿ. ಬಸವರಾಜ, ಎಸ್.ಎನ್. ದೊಡ್ಡಗೌಡರ, ಪಿ.ಆರ್. ಭಗವಂತಗೌಡರ, ಸಿ.ಎಸ್. ಮರಳಿಹಳ್ಳಿ, ಆರ್.ಎಸ್. ಪಾಟೀಲ, ಎಸ್.ಆರ್. ಹೊಸಮನಿ, ಸರೋಜಾ ಸುಂಕಾಪುರ, ರೇಣುಕಾ ಮಡಿವಾಳರ, ಎ.ಎಚ್. ಕೋಳಿವಾಡ, ಎಸ್.ಪಿ. ಹಳೇಮನಿ, ಟಿ.ಎಲ್. ಲಮಾಣಿ, ಆರ್.ಸಿ. ಚಿಕ್ಕಮಠ, ಆರ್.ಎಸ್. ಪಾಟೀಲ, ಎ.ಎಚ್. ಕೋಳಿವಾಡ, ಎಸ್.ಎನ್. ಕಾಳಿ, ಬಿ.ಸಿ. ಹಿರೇಮಠ, ಎಂ.ಎನ್. ಮಾಗನೂರ, ಶಶಿಕಲಾ ತಗಣಿಮಠ, ಎಂ.ಐ. ಮಸಾಲಜಿ, ಕೆ. ಚಂದ್ರಶೇಖರಪ್ಪ, ಬಿ.ವಿ. ಕನವಳ್ಳಿ, ಆರ್.ಪಿ. ಕನವಳ್ಳಿ, ವಿದ್ಯಾ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.
ಸದಾಶಿವ ಸ್ವಾಮೀಜಿ, ಸವಣೂರಿನ ಅಟವಿ ಸ್ವಾಮಿಮಠದ ಕುಮಾರ ಸ್ವಾಮೀಜಿ, ದೊಡ್ಡ ಹುಣಸೆ ಕಲ್ಮಠದ ಚನ್ನಬಸವ ಸ್ವಾಮೀಜಿ, ಮಾದನ ಹಿಪ್ಪರಗಿ ಶಿವಲಿಂಗ ಸ್ವಾಮೀಜಿ, ಮೂಲೆಗದ್ದೆಯ ಚನ್ನಬಸವ ಸ್ವಾಮೀಜಿ ಇದ್ದರು.
ಶಾಲೆಯಲ್ಲಿ ಕಲಿತ ಹಳೇ ವಿದ್ಯಾರ್ಥಿಗಳು ಸಮಾರಂಭದಲ್ಲಿ ಹಾಜರಿದ್ದರು. ತಮ್ಮ ಬಾಲ್ಯದ ಗೆಳೆಯ–ಗೆಳತಿಯರನ್ನು ಕಂಡು ಖುಷಿಪಟ್ಟರು. ತಾವು ಓದಿದ ಶಾಲೆಯ ಕೊಠಡಿ ಹಾಗೂ ಆವರಣದಲ್ಲಿ ಸಂಚರಿಸಿ ಮಕ್ಕಳಾಗಿ ಸಂಭ್ರಮಿಸಿದರು.
ಸರ್ವಧರ್ಮಗಳ ಸಂಗಮವಾಗಿರುವ ಹುಕ್ಕೇರಿಮಠ ಜಾತಿ–ಧರ್ಮವೆಂಬ ಬೇಧ–ಭಾವ ಮಾಡದೇ ಎಲ್ಲರನ್ನೂ ಒಗ್ಗೂಡಿಸುತ್ತಿದೆ. ನಾನು 25 ವರ್ಷಗಳಿಂದ ಈ ಮಠದ ಭಕ್ತ. ಮಠದ ಶಾಲೆಯ ಅಭಿವೃದ್ಧಿಗೆ ಶಾಸಕರ ನಿಧಿಯಿಂದ ₹ 10 ಲಕ್ಷ ನೀಡುತ್ತೇನೆ-ಸಲೀಂ ಅಹ್ಮದ್, ವಿಧಾನಪರಿಷತ್ ಸದಸ್ಯ
ಶಾಲೆಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ 1 ಸಾವಿರ ವಿದ್ಯಾರ್ಥಿಗಳಿಗೆ ವಸತಿಯುತ ಉಚಿತ ಪ್ರಸಾದ ನಿಲಯದ ‘ವಿದ್ಯಾರ್ಥಿ ಭವನ’ ನಿರ್ಮಿಸಲಾಗುತ್ತಿದ್ದು ಒಂದು ವರ್ಷದೊಳಗೆ ಉದ್ಘಾಟನೆಗೊಂಡು ಸೇವೆಗೆ ಲಭ್ಯವಾಗಲಿದೆ-ಸದಾಶಿವ ಸ್ವಾಮೀಜಿ, ಹುಕ್ಕೇರಿಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.