ADVERTISEMENT

ವಿಚಾರ ಮಾಡಿಯೇ ಮಠದ ಜಾಗವನ್ನು ಮೆಡಿಕಲ್‌ ಕಾಲೇಜು ಕಟ್ಟಲು ಕೊಟ್ಟಿದ್ದೇವೆ: ಹೊರಟ್ಟಿ

ವಿಧಾನ ಪರಿಷತ್‌ ಸಭಾಪತಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 14:32 IST
Last Updated 12 ಫೆಬ್ರುವರಿ 2021, 14:32 IST
ಹಾವೇರಿ ನಗರ ಹುಕ್ಕೇರಿಮಠಕ್ಕೆ ಶುಕ್ರವಾರ ಭೇಟಿ ನೀಡಿದ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು ಸದಾಶಿವ ಶ್ರೀಗಳ ಆರ್ಶಿರ್ವಾದ ಪಡೆದರು  
ಹಾವೇರಿ ನಗರ ಹುಕ್ಕೇರಿಮಠಕ್ಕೆ ಶುಕ್ರವಾರ ಭೇಟಿ ನೀಡಿದ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು ಸದಾಶಿವ ಶ್ರೀಗಳ ಆರ್ಶಿರ್ವಾದ ಪಡೆದರು     

ಹಾವೇರಿ: ‘ಮೂರುಸಾವಿರ ಮಠದ ಗಂಗಾಧರ ಶ್ರೀಗಳ ಅಪೇಕ್ಷೆಯಂತೆ, ಮೆಡಿಕಲ್‌ ಕಾಲೇಜು ಕಟ್ಟಲು ಮಠದ ಜಾಗವನ್ನು ಕೆ.ಎಲ್‌.ಇ. ಸಂಸ್ಥೆಗೆ ಕೊಟ್ಟಿದ್ದೇವೆ.ಅಖಂಡ ಧಾರವಾಡದ ಶಾಸಕರು ಒಮ್ಮತದ ತೀರ್ಮಾನ ಕೈಗೊಂಡು, ವಿಚಾರ ಮಾಡಿಯೇ ಈ ನಿರ್ಣಯ ಕೈಗೊಳ್ಳಲಾಗಿದೆ’ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

‌ನಗರದ ಹುಕ್ಕೇರಿ ಮಠಕ್ಕೆ ಶುಕ್ರವಾರ ಭೇಟಿ ನೀಡಿ, ಸದಾಶಿವ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ‘ನನಗೆ ಎಲ್ಲ ವಿಷಯ ಗೊತ್ತಿದೆ, ಹೀಗಾಗಿ ತಪ್ಪು ನುಡಿಯುವುದಿಲ್ಲ. ನಾಟಕ ಮಾಡಿದರೆ ಜನ ಒಪ್ಪುವುದಿಲ್ಲ. ಮಾತು ಕೊಟ್ಟಂತೆ ನಡೆಯುತ್ತಿದ್ದೇವೆ. ಸೂರ್ಯ ಚಂದ್ರರು ಇರುವವರೆಗೆ ಪೂಜ್ಯರ ಹೆಸರು ಅಜರಾಮರವಾಗಿರಬೇಕು ಎಂಬುದು ನಮ್ಮ ಅಪೇಕ್ಷೆ’ ಎಂದು ನುಡಿದರು.

ದಿಂಗಾಲೇಶ್ವರ ಶ್ರೀಗಳು ಪಾದಯಾತ್ರೆ, ಹೋರಾಟ ನಡೆಸಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವತಂತ್ರರಿದ್ದಾರೆ. ತಪ್ಪುಗಳನ್ನು ತಿಳಿಸಿದರೆ ಸರಿಪಡಿಸಲು ಪ್ರಯತ್ನಿಸುತ್ತೇವೆ ಎಂದರು.

ADVERTISEMENT

‘ನಾನು ಸಭಾಪತಿಯಾಗಿ ಆಯ್ಕೆಯಾಗಿದ್ದಕ್ಕೆ ಉತ್ತರ ಕರ್ನಾಟಕದ ಜನರು ಹೆಮ್ಮೆ ಪಡುತ್ತಿದ್ದಾರೆ.ಈ ಜನರ ಪ್ರೀತಿ, ವಿಶ್ವಾಸವನ್ನು ಉಳಿಸಿಕೊಂಡು ಹೋಗಬೇಕಿದೆ. ಸಂದಿಗ್ಧ ಪರಿಸ್ಥಿತಿಯಲ್ಲಿ ದೇವೇಗೌಡರು ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರು ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಇದನ್ನು ನಿಭಾಯಿಸಿಕೊಂಡು ಹೋಗುತ್ತೇನೆ. ಹೊರಟ್ಟಿ ಅವರ ಕಾಲವನ್ನು ಜನರು ನೆನಪಲ್ಲಿ ಇಟ್ಟುಕೊಳ್ಳುವಂತೆ ಕೆಲಸ ಮಾಡಿ ತೋರಿಸುತ್ತೇನೆ’ ಎಂದರು.

ಜೆಡಿಎಸ್‌ ಮುಖಂಡರಾದ ಕೋನರಡ್ಡಿ, ವಸಂತ ಹೊರಟ್ಟಿ, ಡಿಡಿಪಿಐ ಅಂದಾನೆಪ್ಪ ವಡಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ, ಎನ್.ಐ. ಇಚ್ಚಂಗಿ, ಶಿವಲಿಂಗೇಶ್ವರ ವಿದ್ಯಾಪೀಠದ ಚೇರ್‌ಮನ್‌ ಎಸ್.ಎಸ್. ಮುಷ್ಠಿ, ವಾಲಿಶೆಟ್ಟರ, ಎಸ್.ಎಸ್. ಬೇವಿನಮರದ, ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.