ADVERTISEMENT

ಸವಣೂರ: ಮೊಬೈಲ್‌ ಸ್ಫೋಟಗೊಂಡು ಬಾಲಕನಿಗೆ ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 13:02 IST
Last Updated 16 ಜುಲೈ 2021, 13:02 IST
ಕಾರ್ತಿಕ ಕಲಾದಗಿ
ಕಾರ್ತಿಕ ಕಲಾದಗಿ   

ಸವಣೂರ: ಮನೆಯಲ್ಲಿದ್ದ ಅನುಪಯುಕ್ತ ಮೊಬೈಲ್‌ನಲ್ಲಿ ಆಡವಾಡುತ್ತಿದ್ದ ವೇಳೆ, ಬ್ಯಾಟರಿ ಸ್ಫೋಟಗೊಂಡ ಪರಿಣಾಮ ಬಾಲಕ ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲ್ಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಕಾರ್ತಿಕ ರಮೇಶ ಕಲಾದಗಿ (10) ಗಾಯಗೊಂಡ ಬಾಲಕ. ಮೊಬೈಲ್‌ ಬ್ಯಾಟರಿ ಸ್ಫೋಟದ ರಭಸಕ್ಕೆ ಬಾಲಕನ ಬಲಗೈನ ಮೂರು ಬೆರಳುಗಳು ತುಂಡಾಗಿದ್ದು, ಮುಖಕ್ಕೆ ಬಲವಾದ ಪೆಟ್ಟು ಬಿದ್ದು, ಬ್ಯಾಟರಿಯಲ್ಲಿನ ರಾಸಾಯಿನಿಕ ದ್ರವ ಸಿಡಿದು ಎರಡೂ ಕಣ್ಣುಗಳಿಗೆ ಹಾನಿಯಾಗಿದೆ.

ಆಟವಾಡುವ ವೇಳೆ ಅನುಪಯುಕ್ತ ಮೊಬೈಲ್‌ ಅನ್ನು ಚಾರ್ಜ್‌ಗೆ ಹಾಕಲು ಹೋದ ಕಾರಣ ಈ ಅವಘಢ ಸಂಭವಿಸಿದೆ. ಗಾಯಗೊಂಡ ಬಾಲಕನನ್ನು ಕುಟುಂಬಸ್ಥರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದಿದ್ದಾರೆ. ಬ್ಯಾಟರಿಯ ವಿಷಕಾರಕ ವಸ್ತು ಮಗುವಿನ ದೇಹಕ್ಕೆ ಹೋಗದಂತೆ ತಡೆಯಲು ಹಾಗೂ ತುಂಡರಿಸಿದ ಕೈಬೆರಳುಗಳ ಶಸ್ತ್ರಚಿಕಿತ್ಸೆಯನ್ನು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಂಕರಗೌಡ ಹಿರೇಗೌಡ್ರ, ಡಾ.ನವೀನ, ಡಾ.ಆಜಿಖಾನ್ ತಂಡ ಕೈಗೊಂಡಿತು.

ADVERTISEMENT

ಬಲಗಣ್ಣಿಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸವಣೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.