
ತಿಳವಳ್ಳಿ: ತಿಳವಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜೀವನಾಡಿಯಾದ ದೊಡ್ಡಕೆರೆಯ ನೀರು ತೂಬುಗಳ ಮೂಲಕ ಸೋರಿಕೆಯಾಗುತ್ತಿದ್ದು, ಕಳಪೆ ಕಾಮಗಾರಿ ಮತ್ತು ಅವೈಜ್ಞಾನಿಕ ತೂಬುಗಳ ನಿರ್ಮಾಣವೇ ಇದಕ್ಕೆ ಕಾರಣವೆಂದು ರೈತರು ಆರೋಪಿಸುತ್ತಿದ್ದಾರೆ.
ಜಾನುವಾರುಗಳಿಗೆ ಮತ್ತು ಪ್ರಾಣಿ ಪಕ್ಷಿಗಳಿಗೆ ಹಾಗೂ ರೈತರಿಗೆ ನೀರಿನ ಜೀವನಾಡಿಯಾದ ಕೆರೆಯ ನೀರು ವ್ಯರ್ಥವಾಗಿ ನಾಗರಹಳ್ಳ ಸೇರುತ್ತಿದೆ. ಬೇಸಿಗೆ ಕಾಲ ಆರಂಭವಾಗುತ್ತಿರುವ ದಿನಗಳಲ್ಲಿಯೇ ನೀರು ಸೋರಿಕೆಯಾಗುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮತ್ತು ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ.
ಕಳೆದ ಐದಾರು ವರ್ಷಗಳ ಹಿಂದೆ ಬರಗಾಲವಿದ್ದರೂ ದೊಡ್ಡಕೆರೆ ಮಾತ್ರ ನೀರಿನಿಂದ ಮೈದುಂಬಿ ನಿಂತಿತ್ತು. ಇದಕ್ಕೆ ತಿಳವಳ್ಳಿ ಏತ ನೀರಾವರಿ ಯೋಜನೆ ಕಾರಣ. ಈ ಯೋಜನೆಯಡಿ ವರದಾ ನದಿಯಿಂದ ಕೆರೆಗೆ ನೀರು ಹಾಯಿಸಲಾಗುತ್ತಿದೆ. ಐತಿಹಾಸಿಕ ತಿಳವಳ್ಳಿ ದೊಡ್ಡಕೆರೆ ತುಂಬಿದ್ದು, ಸುಮಾರು 3 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.
ತಿಳವಳ್ಳಿ ಏತ ನೀರಾವರಿಯ ಮೊದಲ ಹಂತದಲ್ಲಿ ನೀರಾವರಿ ಹಾಗೂ ಅರೆ ನೀರಾವರಿ ಬೆಳೆಗಳಿಗೆ ನೀರು ಒದಗಿಸಲು 0.76 ಟಿಎಂಸಿ ನೀರು ಸಂಗ್ರಹಿಸಲು ಸುಮಾರು 18 ಕೋಟಿ ವೆಚ್ಛದಲ್ಲಿ ವರದಾ ನದಿಯ ಬಲದಂಡೆಯ ಮೇಲೆ ಜಾಕ್‌ವೆಲ್ ಮತ್ತು ಪಂಪ್ ಹೌಸ್ ನಿರ್ಮಿಸಿ 650 ಎಚ್.ಪಿ ಯ ಮೂರು ಪಂಪ್ ಗಳನ್ನು ಅಳವಡಿಸಿ 1.40 ಮೀ. ವ್ಯಾಸದ ಪೈಪ್ ಮೂಲಕ 3 ಕೀ.ಮೀ ದೂರದ ತಿಳವಳ್ಳಿ ಕೆರೆಗೆ 2.79 ಕ್ಯುಸೆಕ್ಸ್ ನೀರನ್ನು ತುಂಬಿಸಿತು.
ಎರಡನೇ ಹಂತದ ಕಾಮಗಾರಿಯಲ್ಲಿ ತೂಬುಗಳ ಮರು ನಿರ್ಮಾಣದ ಕಾಮಗಾರಿಯು ಕಳಪೆ ಮತ್ತು ಅವೈಜ್ಞಾನಿವಾಗಿ ನಿರ್ಮಾಣ ಮಾಡಲಾಗಿದೆ. ಇದರಿಂದ ಕೆರೆಯ ನೀರು ತೂಬುಗಳಿಂದ ನೀರು ಸೋರಿಕೆಯಾಗಿ ವ್ಯರ್ಥವಾಗಿ ಕಾಲುವೆಗಳ ಮೂಲಕ ನಾಗರಹಳ್ಳ ಸೇರಿ ಅಲ್ಲಿಂದ ವರದಾ ನದಿಯನ್ನು ಸೇರುತ್ತಿದೆ. ಇದರಿಂದ ಕೆರೆಯ ನೀರು ಕೆರೆಗೆ ಚಲ್ಲುವ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ದೂರಿದರು.
ತಿಳವಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮದ ರೈತರಿಗೆ ಬೇಸಿಗೆ ಕಾಲದಲ್ಲಿ ಬೆಳೆ ಬೆಳೆಯಲು ಮತ್ತು ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲದಂತಾಗುತ್ತಿದೆ. ಆದಕಾರಣ ಸಂಬಂಧಪಟ್ಟ ಅಧಿಕಾರಿಗಳು ಬೇಗನೆ ತೂಬುಗಳನ್ನು ದುರಸ್ತಿ ಮಾಡಬೇಕು ಎಂಬುದು ರೈತರ ಆಗ್ರಹವಾಗಿದೆ.
ತೂಬುಗಳ ದುರಸ್ತಿಗೆ ಅಂದಾಜು ವೆಚ್ಛಗಳ ಬಗ್ಗೆ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಬೇಗನೇ ಟೆಂಡರ ಕರೆದು ತೂಬುಗಳ ದುರಸ್ತಿ ಕಾರ್ಯವನ್ನು ಆರಂಭಿಸಲಾಗುವುದುರವೀಂದ್ರ ಡಿ. ಎಲಿಗಾರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನೀರಾವರಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.