ತಿಳವಳ್ಳಿಯ ದೊಡ್ಡಕೆರೆಗೆ ತಡೆಗೋಡೆ ಇಲ್ಲದಿರುವುದು
ತಿಳವಳ್ಳಿ: ಗ್ರಾಮದ ಹೊರವಲಯದಲ್ಲಿರುವ ದೊಡ್ಡಕೆರೆಗೆ ಹೊಂದಿಕೊಂಡಿರುವ ರಸ್ತೆಯಲ್ಲಿ ತಡೆಗೋಡೆ ಇಲ್ಲದಿದ್ದರಿಂದ, ಜನರು ಭಯದಲ್ಲೇ ಸಂಚರಿಸುವಂತಾಗಿದೆ.
ತಿಳವಳ್ಳಿಯಿಂದ ಹಾವೇರಿ–ಬ್ಯಾಡಗಿಗೆ ಸಂಪರ್ಕ ಕಲ್ಪಿಸುವ ರಸ್ತೆ ತಿರುವಿನಿಂದ ಕೂಡಿದೆ. ರಸ್ತೆಯಂಚಿಗೆ ಇರುವ ದೊಡ್ಡಕೆರೆ ದಡಕ್ಕೆ ತಡೆಗೋಡೆ ಇಲ್ಲ. ವಾಹನಗಳ ಚಾಲನೆ ಸಂದರ್ಭದಲ್ಲಿ ಸ್ವಲ್ಪ ಯಾಮಾರಿದರೂ, ವಾಹನ ಕೆರೆ ಪಾಲಾಗುತ್ತದೆ. ಕೆರೆಯ ದಡದಲ್ಲಿ ಇದುವರೆಗೂ ತಡೆಗೋಡೆ ನಿರ್ಮಿಸದಿರುವುದು ಸಾರ್ವಜನಿಕರ ಆತಂಕಕ್ಕೂ ಕಾರಣವಾಗಿದೆ.
ಸುಮಾರು 1,500 ಎಕರೆ ವಿಸ್ತೀರ್ಣದಲ್ಲಿ ದೊಡ್ಡಕೆರೆಯಿದೆ. ಸತತ ಮಳೆ ಹಾಗೂ ಏತ ನೀರಾವರಿ ಯೋಜನೆಯಿಂದ ಕೆರೆ ಸಂಪೂರ್ಣ ಭರ್ತಿಯಾಗಿದೆ. ಕೋಡಿ ಸಹ ಬಿದ್ದಿದೆ. ಕೆರೆ ಏರಿಯ ರಸ್ತೆ ಮೂಲಕವೇ ಹಾವೇರಿ ಮತ್ತು ಬ್ಯಾಡಗಿ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ವಾಹನಗಳು ತೆರಳುತ್ತವೆ.
ಈ ಪ್ರಮುಖ ರಸ್ತೆಯಲ್ಲಿ ನಿತ್ಯವೂ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಗುಡ್ಡಗಾಡು ಭಾಗದ ಜನರಿಗೆ ಮತ್ತು ಮಕ್ಕಳಿಗೆ ತಿಳವಳ್ಳಿ ಪ್ರಮುಖ ವಾಣಿಜ್ಯ ಮತ್ತು ವಿದ್ಯಾಕೇಂದ್ರವಾಗಿದೆ. ಈ ಮಾರ್ಗವಾಗಿಯೇ ಹೆಚ್ಚು ಮಕ್ಕಳು ಶಾಲಾ–ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕೆ ಬಂದು ಹೋಗುತ್ತಾರೆ. ಮಕ್ಕಳು ಸಹ ಕೆರೆ ಏರಿಯ ರಸ್ತೆ ಮೂಲಕವೇ ಸಂಚರಿಸಬೇಕಿದೆ.
‘ದೊಡ್ಡಕೆರೆಯು ನಮ್ಮ ಭಾಗದ ಜೀವನಾಡಿಯಾಗಿದೆ. ಆದರೆ, ಕೆರೆಯ ದಡದಲ್ಲಿ ರಸ್ತೆ ಅಭಿವೃದ್ಧಿಯಾಗಿಲ್ಲ. ಜೊತೆಗೆ, ದಡದಲ್ಲಿ ತಡೆಗೋಡೆಯೂ ಇಲ್ಲ. ಇದರಿಂದಾಗಿ ರಸ್ತೆಯಲ್ಲಿ ಸಂಚಾರ ಅಪಾಯಕಾರಿ ಆಗಿದೆ’ ಎಂದು ಸ್ಥಳೀಯರು ಆತಂಕ
ವ್ಯಕ್ತಪಡಿಸಿದರು.
ಈಗಾಗಲೇ ರಾಜ್ಯದ ಹಲವೆಡೆ ತಡೆಗೋಡೆ ಇಲ್ಲದ ಕೆರೆಗಳಿಗೆ ಬಸ್ ಮತ್ತು ಹಲವು ವಾಹನಗಳು ಬಿದ್ದು ಜೀವ ಹಾನಿಯಾದ ಘಟನೆಗಳು ನಡೆದಿವೆ. ಆ ಘಟನೆಗಳು ಇಲ್ಲಿ ಸಂಭವಿಸಬಾರದು. ಅಧಿಕಾರಿಗಳು ಎಚ್ಚೆತ್ತುಕೊಂಡು ತಡೆಗೋಡೆ ನಿರ್ಮಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ತಿಳವಳ್ಳಿಯಿಂದ ಬ್ಯಾಡಗಿ-ಹಾವೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣವಾಗಿ ಹಾಳಾಗಿದೆ. ವಾಹನ ಸವಾರರಿಗೆ ತುಂಬಾ ತೊಂದರೆ ಉಂಟಾಗಿದೆ. ಸತತ ಮಳೆಯಿಂದಾಗಿ ಕೆರೆ ಏರಿಯ ಮೇಲಿನ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಅದೇ ಗುಂಡಿಯಲ್ಲಿ ನೀರು ನಿಂತುಕೊಳ್ಳುತ್ತದೆ. ಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬಿದ್ದ ಉದಾಹರಣೆಗಳಿವೆ.
ಗ್ರಾಮದ ದೊಡ್ಡಕೆರೆಯನ್ನು ಹೊರತುಪಡಿಸಿ ಇಟಗಿ ಹೊಂಡ ಮತ್ತು ಸಿದ್ದನ ಹೊಂಡಗಳು ರಾಜ್ಯ ಹೆದ್ಧಾರಿಗೆ ಹೊಂದಿಕೊಂಡಿವೆ. ಈ ಮಾರ್ಗವಾಗಿ ಸೊರಬ ಮತ್ತು ತಾಲ್ಲೂಕು ಕೇಂದ್ರವಾದ ಹಾನಗಲ್‌ಗೆ ಹೋಗಬಹುದು. ರಸ್ತೆಯ ಬದಿಯಲ್ಲಿ ಎರಡು ಹೊಂಡಗಳು ಇರುವುದರಿಂದ, ಈ ಎರಡು ಹೊಂಡಗಳಿಗೂ ತಡೆಗೋಡೆಗಳಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.