ಬ್ಯಾಡಗಿ: ಎಲ್ಲೆಂದರಲ್ಲಿ ನಿಲುಗಡೆಯಾಗಿರುವ ಖಾಸಗಿ ಅನಧಿಕೃತ ವಾಹನ, ಬೇಕಾಬಿಟ್ಟಿಯಾಗಿ ನಿಲ್ಲಿಸಿರುವ ಆಟೊ ರಿಕ್ಷಾ, ಬಹುಪಾಲು ರಸ್ತೆ ಆಕ್ರಮಿಸಿಕೊಂಡಿರುವ ಗೂಡಂಗಡಿ ಇವು ಬಸ್ ನಿಲ್ದಾಣದ ಮುಂದಿನ ನೆಹರೂ ನೆಹರೂ ವೃತ್ತದಲ್ಲಿ ಕಂಡು ಬರುವ ದೃಶ್ಯ.
ಬಸ್ ನಿಲ್ದಾಣದಿಂದ 500 ಮೀಟರ್ ದೂರದೊಳಗೆ ಅನಧಿಕೃತ ಖಾಸಗಿ ಮ್ಯಾಕ್ಸಿ ಕ್ಯಾಬ್‌ಗಳು ನಿಲ್ಲಿಸಬಾರದೆನ್ನುವ ನಿಯಮವಿದೆ. ಆದರೆ 50 ಮೀಟರ್ ದೂರದಲ್ಲಿಯೇ ಜಮಾವಣೆಗೊಂಡಿವೆ. ಇದರಿಂದ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ಖಾಸಗಿ ಬಸ್‌ಗಳ ನಿಲ್ದಾಣಕ್ಕೆ ಸೂಕ್ತ ಜಾಗವಿಲ್ಲದೆ ರಸ್ತೆ ಬದಿಯೇ ನಿಲ್ಲಬೇಕಾಗಿದ ಅನಿವಾರ್ಯತೆ ಎದುರಾಗಿದೆ.
ಇದರಿಂದಾಗಿ ಬಸ್ ನಿಲ್ದಾಣದ ಒಳಗೆ, ಹೊರಗೆ ಹೋಗುವ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಈ ಕುರಿತು ಪೊಲೀಸ್ ಇಲಾಖೆ ಹಾಗೂ ಸಾರಿಗೆ ಘಟಕ ವ್ಯವಸ್ಥಾಪಕರ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಇಲ್ಲಿಯ ಸಾರ್ವಜನಿಕರು.
ರಸ್ತೆ ಬದಿ ತಲೆ ಎತ್ತಿರುವ ಚಹಾ ಅಂಗಡಿಗಳ ಮುಂದೆ ನಿಂತು ರಸ್ತೆಯ ಮೇಲೆ ಜನರು ಉಗುಳುತ್ತಾರೆ. ಇದರಿಂದ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಸಾಂಕ್ರಾಮಿಕ ರೋಗ ಉಲ್ಭಣಿಸುವ ಭೀತಿ ಎದುರಾಗಿದೆ. ಇಷ್ಟೆಲ್ಲ ಅವಾಂತರಗಳು ನಡೆದಿದ್ದರೂ ಪೊಲೀಸ್ ಇಲಾಖೆ ಕೈಕಟ್ಟಿ ಕುಳಿತಿರುವುದು ಸೋಜಿಗವೆನಿಸಿದೆ.
ಬಸ್ ನಿಲ್ದಾಣದ ಮುಂದೆ ವಿಶಾಲವಾದ ಜಾಗೆಯಿದ್ದರೂ ಖಾಸಗಿ ವಾಹನಗಳ ಅನಧಿಕೃತ ನಿಲುಗಡೆಯಿಂದ ಇನ್ನಿತರ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. 50 ಮೀಟರ್ ದೂರದಲ್ಲಿ ನಿಲ್ಲುವ ಟಂಟಂ, ಮ್ಯಾಕ್ಸಿ ಕ್ಯಾಬ್ ಹಾಗೂ ಇನ್ನಿತರ ವಾಹನಗಳ ಚಾಲಕರು ತಮ್ಮ ವಾಹನಗಳನ್ನು ನಿಲ್ಲಿಸಿಕೊಂಡು ಬಸ್ ಮತ್ತು ನಿಲ್ದಾಣದಲ್ಲಿರುವ ಪ್ರಯಾಣಿಕರನ್ನು ಕೂಗಿ ಕರೆದು ಹತ್ತಿಸಿಕೊಂಡು ಹೋಗುವುದು ನಡೆದಿದೆ.
ಇದೊಂದು ಕಾನೂನು ಬಾಹಿರ ಕ್ರಮವಾಗಿದ್ದು, ಸಾರಿಗೆ ಸಂಸ್ಥೆಯ ವಾಹಗಳಿಗೆ ಸಮಾನಾಂತರವಾಗಿ ಕಾರ್ಯಾಚರಣೆ ಮಾಡುತ್ತಿರುವುದರಿಂದ ಅನಾರೋಗ್ಯಕರ ಪೈಪೋಟಿ ನೀಡಲಾಗುತ್ತಿದೆ. ಈ ಕಾರಣದಿಂದ ಸಾರಿಗೆ ಸಂಸ್ಥೆಗೆ ಸಲ್ಲಬೇಕಾಗಿದ್ದ ಆದಾಯದಲ್ಲಿಯೂ ಕುಂಠಿತಗೊಳ್ಳಲು ಕಾರಣವಾಗಿದೆ ಎನ್ನಲಾಗಿದೆ.
ರಸ್ತೆ ಬದಿ ಅಂಗಡಿಗಳನ್ನು ತೆರವುಗೊಳಿಸಿ: ಬಸ್ ನಿಲ್ದಾಣದ ಮುಂದೆ ನೆಹರೂ ವೃತ್ತದ ರಸ್ತೆ ಬದಿಯಲ್ಲಿ ಚಹಾ, ಗುಟ್ಕಾ, ಎಗ್ ರೈಸ್ ಅಂಗಡಿಗಳು ತಲೆ ಎತ್ತಿವೆ. ಜಾಗೆ ವಿಶಾಲವಾಗಿದ್ದರೂ ರಸ್ತೆ ಇಕ್ಕಟ್ಟಾಗಿದೆ. ಇನ್ನಿತರ ವಾಹನಗಳ ಸಂಚಾರಕ್ಕೂ ತೊಂದರೆಯಾಗಿದೆ. ಅಂಗಡಿಗಳ ಮುಂದೆ ಬೈಕ್ ನಿಲ್ಲಿಸಿದ್ದರಿಂದ ಸಂಚಾರಕ್ಕೆ ಮತ್ತಷ್ಟು ತೊಂದರೆಯಾಗಲಿದೆ.
ಬಸ್ ನಿಲ್ದಾಣದ ಮುಂದೆ ಅನಧಿಕೃತವಾಗಿ ಖಾಸಗಿ ಪ್ರಯಾಣಿಕರ ವಾಹನಗಳನ್ನು 500 ಮೀಟರ್ ಅಂತರದಲ್ಲಿ ನಿಲ್ಲಿಸಬೇಕು ಎನ್ನುವ ನಿಯಮವಿದೆ. ಇದನ್ನು ವಾಹನ ಮಾಲೀಕರು ಉಲ್ಲಂಘಿಸಿದ್ದಾರೆಗುರುಬಸಪ್ಪ ಅಡರಗಟ್ಟಿ ಘಟಕ ವ್ಯವಸ್ಥಾಪಕ
ನೆಹರೂ ವೃತ್ತದಲ್ಲಿ ರಸ್ತೆಯ ಮೇಲೆ ಗೂಡಂಗಡಿ ತೆರೆಯಲಾಗಿದೆ. ಕೊಳ್ಳುವ ಜನರು ಅಂಗಡಿಗಳ ಮುಂದೆ ನಿಲ್ಲುತ್ತಾರೆ. ಇದರಿಂದಾಗಿ ಬಸ್ ಹೊರಗೆ ಹೋಗಲು ತುಂಬಾ ತೊಂದರೆಯಾಗಲಿದೆನವೀನ ಪ್ರಯಾಣಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.