ADVERTISEMENT

ಹಾವೇರಿ | ಚಾಲನೆ ವೇಳೆ ಮೊಬೈಲ್ ಬಳಕೆ: ಜೀವಕ್ಕೆ ಕುತ್ತು

* ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಪಘಾತಗಳು * ಸಾವಿಗೆ ‘ಮಿಸ್ಡ್‌ ಕಾಲ್’ ಕೊಡುತ್ತಿರುವ ಚಾಲಕರು– ಸವಾರರು * ಮೌನವಾದ ಪೊಲೀಸರು

ಸಂತೋಷ ಜಿಗಳಿಕೊಪ್ಪ
Published 24 ಫೆಬ್ರುವರಿ 2025, 6:19 IST
Last Updated 24 ಫೆಬ್ರುವರಿ 2025, 6:19 IST
ರಾಣೆಬೆನ್ನೂರಿನಿಂದ ಹುಬ್ಬಳ್ಳಿಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್‌ (ಕೆಎ 27 ಎಫ್‌ 0874) ಚಾಲಕ, ಚಾಲನೆ ವೇಳೆ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದು
ರಾಣೆಬೆನ್ನೂರಿನಿಂದ ಹುಬ್ಬಳ್ಳಿಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್‌ (ಕೆಎ 27 ಎಫ್‌ 0874) ಚಾಲಕ, ಚಾಲನೆ ವೇಳೆ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದು   

ಹಾವೇರಿ: ಇಂದಿನ ಆಧುನಿಕ ಯುಗದಲ್ಲಿ ಬಹುತೇಕರು ಮೊಬೈಲ್ ದಾಸರಾಗಿದ್ದಾರೆ. ನಿಂತರೆ, ಕುಳಿತರೆ, ಮಲಗಿದರೆ, ಎಲ್ಲ ಸಂದರ್ಭದಲ್ಲೂ ಮೊಬೈಲ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ವಾಹನ ಚಾಲನೆ ಸಂದರ್ಭದಲ್ಲಿ ಹಲವರು ಮೊಬೈಲ್ ಬಳಕೆ ಮಾಡುತ್ತಿದ್ದು, ಇವರ ನಿರ್ಲಕ್ಷ್ಯದಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ಸವಾರರು ಹಾಗೂ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಪಾದಚಾರಿಗಳ ಜೀವಕ್ಕೂ ಕುತ್ತು ಬರುತ್ತಿದೆ.

‘ಕಾರು ಚಾಲನೆ ಮಾಡುವ ಸಂದರ್ಭದಲ್ಲಿ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ದ್ವಿಚಕ್ರ ವಾಹನ ಸವಾರಿ ಸಂದರ್ಭದಲ್ಲಿ ಕಡ್ಡಾಯವಾಗಿ ಹೆಲ್ಮೆಟ್ ಬಳಸಬೇಕು’ ಎಂಬುದಾಗಿ ಸಂಚಾರಿ ನಿಯಮ ರೂಪಿಸಲಾಗಿದೆ. ಆದರೆ, ಹಾವೇರಿ ಜಿಲ್ಲೆಯಾದ್ಯಂತ ಈ ನಿಯಮಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಚಾಲಕರು ಹಾಗೂ ಸವಾರರು, ಸಂಚಾರ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದಾರೆ. ಇದನ್ನು ತಡೆಯಬೇಕಾದ ಪೊಲೀಸರು, ಮೌನವಾಗಿದ್ದಾರೆ.

ಜಿಲ್ಲಾ ಕೇಂದ್ರವಾದ ಹಾವೇರಿ ನಗರದಲ್ಲಿ ನಿತ್ಯವೂ ಸಾವಿರಾರೂ ವಾಹನಗಳು ಸಂಚರಿಸುತ್ತಿವೆ. ಹಳೇ ಪಿ.ಬಿ.ರಸ್ತೆ, ಗುತ್ತಲ ರಸ್ತೆ, ಎಂ.ಜಿ.ರಸ್ತೆ, ಹಾನಗಲ್ ರಸ್ತೆ, ರಾಷ್ಟ್ರೀಯ ಹೆದ್ದಾರಿ ಸಂಪರ್ಕ ರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನಗಳ ಸಂಚಾರವಿರುತ್ತದೆ. ಈ ರಸ್ತೆಗಳಲ್ಲಿ ಚಾಲಕರು ಹಾಗೂ ಸವಾರರು, ನಿರಂತರವಾಗಿ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳುವ ಜೊತೆಯಲ್ಲಿ, ಪಾದಚಾರಿಗಳ ಜೀವಕ್ಕೂ ಸಂಚಕಾರ ತರುತ್ತಿದ್ದಾರೆ. ಇಂಥವರ ವರ್ತನೆಯಿಂದ ಪಾದಚಾರಿಗಳು ರಸ್ತೆಯಲ್ಲಿ ನಡೆದುಕೊಂಡು ಹೋಗಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ಹಳೇ ಪಿ.ಬಿ.ರಸ್ತೆಯಲ್ಲಿ ಸುತ್ತಾಡುವ ದ್ವಿಚಕ್ರ ವಾಹನಗಳ ಸವಾರರ ಪೈಕಿ, ಹಲವರು ಮೊಬೈಲ್‌ನಲ್ಲಿ ಮಾತನಾಡುತ್ತ ಸವಾರಿ ಮಾಡುತ್ತಿದ್ದಾರೆ. ಮುಂದೆ ಹೋಗುವ ಹಾಗೂ ಹಿಂದೆ ಬರುವ ವಾಹನಗಳ ಜ್ಞಾನವಿಲ್ಲದೇ ತಮ್ಮದೇ ಗುಂಗಿನಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತ ಸವಾರಿ ಮಾಡುತ್ತಿದ್ದಾರೆ. ಈ ಪೈಕಿ ಹಲವರು ಮಾರ್ಗಮಧ್ಯೆ ಅಪಘಾತವನ್ನುಂಟು ಮಾಡುತ್ತಿದ್ದು, ಹಲವು ಪ್ರಕರಣಗಳು ಸ್ಥಳದಲ್ಲಿಯೇ ಸಂಧಾನವಾಗುತ್ತಿವೆ. ಸವಾರರ ವರ್ತನೆ ಹೀಗೆ ಮುಂದುವರಿದರೆ ಮುಂಬರುವ ದಿನಗಳಲ್ಲಿ ಜನರ ಜೀವಕ್ಕೆ ಅಪಾಯ ಉಂಟಾಗುವ ಸಂಭವ ಹೆಚ್ಚಿದೆ.

ಕಾರು, ಆಟೊ, ಲಾರಿ ಸೇರಿದಂತೆ ಇತರೆ ವಾಹನಗಳ ಚಾಲಕರ ಪೈಕಿ ಹಲವರು, ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಮೊಬೈಲ್‌ನಲ್ಲಿ ಮಾತನಾಡುತ್ತ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸುತ್ತಿದ್ದಾರೆ. ಇತರೆ ವಾಹನಗಳ ಸಂಚಾರಕ್ಕೂ ಅಡ್ಡಿಪಡಿಸುತ್ತಿದ್ದಾರೆ.

ಹಾವೇರಿ ಮಾತ್ರವಲ್ಲದೇ ರಾಣೆಬೆನ್ನೂರು, ಹಾನಗಲ್, ಬ್ಯಾಡಗಿ, ಹಿರೇಕೆರೂರು, ಶಿಗ್ಗಾವಿ, ಸವಣೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನಲ್ಲೂ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಿದೆ. ಬಹುತೇಕರು ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುತ್ತಿರುವುದು ಕಂಡುಬರುತ್ತಿದೆ. ಇಂಥವರ ವರ್ತನೆಗಳಿಂದ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿದ್ದೇವೆ.

ಮೊಬೈಲ್‌ನಲ್ಲಿ ಹೆಚ್ಚು ಮಾತನಾಡುವ ಬೈಕ್ ಸವಾರರು: ‘ಹಾವೇರಿ ನಗರದ ಬಹುತೇಕ ರಸ್ತೆಗಳಲ್ಲಿ ಬೈಕ್‌ಗಳು ಹೆಚ್ಚಾಗಿ ಓಡಾಡುತ್ತವೆ. ಈ ಪೈಕಿ ಹಲವರು, ಮೊಬೈಲ್‌ನಲ್ಲಿ ಮಾತನಾಡುತ್ತಲೇ ಬೈಕ್ ಚಲಾಯಿಸಿಕೊಂಡು ಹೋಗುತ್ತಾರೆ. ಇಂಥವರಿಗೆ ಬುದ್ದಿವಾದ ಹೇಳಲು ಹೋದರೆ, ನಮ್ಮ ಮೇಲೆಯೇ ಹರಿಹಾಯುತ್ತಾರೆ. ಕೇಳಲು ನೀನ್ಯಾರು ? ಎಂದು ಜಗಳ ತೆಗೆಯುತ್ತಾರೆ’ ಎಂದು ಎಂ.ಜಿ.ರಸ್ತೆ ವ್ಯಾಪಾರಿ ರಮಣ್ ಹೇಳಿದರು.

‘ಮೊಬೈಲ್‌ನಲ್ಲಿ ಮಾತನಾಡುತ್ತ ಬೈಕ್‌ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಅಪಘಾತವಾಗಿ ನಮ್ಮ ಸಂಬಂಧಿಯೊಬ್ಬರು ಮೃತಪಟ್ಟಿದ್ದಾರೆ. ಅವರಿಗೆ ಬಂದ ಸ್ಥಿತಿ ಬೇರೆಯವರಿಗೆ ಬರಬಾರದೆಂದು ಬುದ್ದಿವಾದ ಹೇಳುತ್ತಿದ್ದೇನೆ. ಆದರೆ, ಜನರು ಅದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಅಪಘಾತದಲ್ಲಿ ಸತ್ತರೆ, ಅವರ ಕುಟುಂಬದವರ ಗತಿ ಏನಾಗಬಹುದೆಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಹಳೇ ಪಿ.ಬಿ.ರಸ್ತೆಯ ಹೋಟೆಲ್‌ವೊಂದರ ಸಿಬ್ಬಂದಿ ರಾಘವೇಂದ್ರ, ‘ಕೆಲದಿನಗಳ ಹಿಂದೆಯಷ್ಟೇ ನಮ್ಮ ಹೋಟೆಲ್ ಎದುರು ಅಪಘಾತವಾಯಿತು. ಮೊಬೈಲ್‌ನಲ್ಲಿ ಮಾತನಾಡುತ್ತ ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿ, ಅಜ್ಜಿಯೊಬ್ಬರಿಗೆ ಬೈಕ್ ಡಿಕ್ಕಿ ಹೊಡೆಸಿದ್ದ. ಇದರಿಂದಾಗಿ ಅಜ್ಜಿ ಕುಸಿದು ಬಿದ್ದಿದ್ದರು. ಸ್ಥಳೀಯರೇ ಅಜ್ಜಿಯನ್ನು ಆರೈಕೆ ಮಾಡಿದರು. ಅದೃಷ್ಟವಶಾತ್ ಅಜ್ಜಿಗೆ ಹೆಚ್ಚು ಪೆಟ್ಟಾಗಿರಲಿಲ್ಲ’ ಎಂದು ಹೇಳಿದರು.

ಹಾವೇರಿ ನಗರದ ರಸ್ತೆಯಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತ ದ್ವಿಚಕ್ರ ವಾಹನ ಚಲಾಯಿಸುತ್ತಿರುವ ಸವಾರರು 
ಹಾವೇರಿ ನಗರದ ರಸ್ತೆಯಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತ ದ್ವಿಚಕ್ರ ವಾಹನ ಚಲಾಯಿಸುತ್ತಿರುವ ಸವಾರರು – ಪ್ರಜಾವಾಣಿ ಚಿತ್ರಗಳು/ ಮಾಲತೇಶ ಇಚ್ಚಂಗಿ 
‘ಶಾಲಾ ಮಕ್ಕಳಿಗೆ ಅಪಾಯ’
‘ಹಾವೇರಿ ಹಾಗೂ ರಾಣೆಬೆನ್ನೂರು ನಗರದಲ್ಲಿ ನಿತ್ಯವೂ ಬಹುತೇಕ ಮಕ್ಕಳು ಬೆಳಿಗ್ಗೆ ಹಾಗೂ ಸಂಜೆ ನಡೆದುಕೊಂಡು ಶಾಲೆಗೆ ಹೋಗಿ ಬರುತ್ತಿದ್ದಾರೆ. ಇವರು ಹೋಗುವ ರಸ್ತೆಯಲ್ಲಿಯೇ ಹಲವರು ಮೊಬೈಲ್‌ನಲ್ಲಿ ಮಾತನಾಡುತ್ತ ಚಾಲನೆ ಮಾಡುತ್ತಿದ್ದಾರೆ. ಇವರ ವರ್ತನೆಯಿಂದಾಗಿ ಶಾಲಾ ಮಕ್ಕಳಿಗೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿದೆ’ ಎಂದು ಜನರು ಆತಂಕ ವ್ಯಕ್ತಪಡಿಸಿದರು. ‘ಶಾಲೆ ಮಕ್ಕಳು ರಸ್ತೆಯಲ್ಲಿ ಹೊರಟಿರುವುದು ಗೊತ್ತಿದ್ದರೂ ಸವಾರರು ತಮ್ಮ ವರ್ತನೆಯನ್ನು ಮುಂದುವರಿಸಿದ್ದಾರೆ. ಇಂಥ ಸವಾರರು ಹಾಗೂ ಚಾಲಕರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸುವವರ ವಾಹನವನ್ನು ಜಪ್ತಿ ಮಾಡಿ ಚಾಲನಾ ಪರವಾನಗಿಯನ್ನು ರದ್ದುಪಡಿಸಬೇಕು’ ಎಂದು ಅವರು ಒತ್ತಾಯಿಸಿದರು.
ಕರ್ಕಶ ಸೈಲೆನ್ಸರ್ ದೋಷಪೂರಿತ ಫಲಕ
‘ಜಿಲ್ಲೆಯ ಹಲವು ಬೈಕ್ ಹಾಗೂ ವಾಹನಗಳ ಮಾಲೀಕರು ಕರ್ಕಶ ಶಬ್ದದ ಸೈಲೆನ್ಸರ್ ಅಳವಡಿಸಿದ್ದಾರೆ. ಕೆಲವರು ನೋಂದಣಿ ಸಂಖ್ಯೆ ಫಲಕದಲ್ಲಿ ನಂಬರ್ ಬದಲು ತಮ್ಮಿಷ್ಟದಂತೆ ಬರೆದುಕೊಂಡಿದ್ದಾರೆ. ಇಂಥ ಬೈಕ್ ಹಾಗೂ ವಾಹನಗಳು ಕಂಡರೂ ಪೊಲೀಸರು ಕ್ರಮ ಜರುಗಿಸುತ್ತಿಲ್ಲ’ ಎಂದು ಜನರು ಬೇಸರ ವ್ಯಕ್ತಪಡಿಸಿದರು.
ಕಣ್ಣಿದ್ದು ಕುರುಡಾದ ಸಂಚಾರ ಪೊಲೀಸರು
‘ಹಳೇ ಪಿ.ಬಿ.ರಸ್ತೆಯಲ್ಲಿ ನಿತ್ಯವೂ ಹಲವರು ಮೊಬೈಲ್‌ನಲ್ಲಿ ಮಾತನಾಡುತ್ತ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದಾರೆ. ಇದೇ ರಸ್ತೆಯಲ್ಲಿ ಸಂಚಾರ ಪೊಲೀಸ್ ಠಾಣೆಯಿದೆ. ಜೊತೆಗೆ ಹಲವು ವೃತ್ತಗಳಲ್ಲಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಮೊಬೈಲ್‌ನಲ್ಲಿ ಮಾತನಾಡುತ್ತ ವಾಹನ ಚಾಲನೆ ಮಾಡುವವರು ಕಣ್ಣಿಗೆ ಬಿದ್ದರೂ ಕುರುಡರಂತೆ ವರ್ತಿಸುತ್ತಿದ್ದಾರೆ’ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು. ‘ಮೊಬೈಲ್‌ನಲ್ಲಿ ಮಾತನಾಡುತ್ತ ವಾಹನ ಚಾಲನೆ ಮಾಡಿದರೆ ಅವರಿಗಷ್ಟೇ ತೊಂದರೆಯಾದರೆ ಪರವಾಗಿಲ್ಲ. ಆದರೆ ಅವರಿಂದ ರಸ್ತೆಯಲ್ಲಿ ಹೋಗುವ ಅಮಾಯಕರಿಗೆ ತೊಂದರೆ ಆಗುವುದು ಬೇಡ. ಇನ್ನಾದರೂ ಪೊಲೀಸರು ಎಚ್ಚೆತ್ತುಕೊಂಡು ಪ್ರತಿ ರಸ್ತೆಯಲ್ಲೂ ತಪಾಸಣೆ ಬಿಗಿಗೊಳಿಸಬೇಕು. ಚಾಲನೆ ವೇಳೆ ಮೊಬೈಲ್‌ನಲ್ಲಿ ಮಾತನಾಡುವವರು ಹಾಗೂ ಹೆಲ್ಮೆಟ್ ಧರಿಸದವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಮೊಬೈಲ್ ಬಳಸುವ ಕೆಎಸ್‌ಆರ್‌ಟಿಸಿ ಚಾಲಕರು
ಜಿಲ್ಲೆಯಲ್ಲಿ ಸಂಚಸಿರುವ ಕೆಎಸ್‌ಆರ್‌ಟಿಸಿ ಬಸ್ ಚಾಲಕರು ಸಹ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡುತ್ತಿದ್ದು ಇವರ ವರ್ತನೆಯಿಂದಾಗಿ ಬಸ್‌ ಪ್ರಯಾಣಿಕರು ಭಯದಲ್ಲಿ ಸಂಚರಿಸುತ್ತಿದ್ದಾರೆ. ಹಾವೇರಿ ರಾಣೆಬೆನ್ನೂರು ಬ್ಯಾಡಗಿ ಹಾನಗಲ್ ರಟ್ಟೀಹಳ್ಳಿ ಹಿರೇಕೆರೂರು ಶಿಗ್ಗಾವಿ ಹಾಗೂ ಸವಣೂರಿನಲ್ಲಿ ಬಸ್ ಚಾಲನೆ ಮಾಡುವ ಹಲವು ಚಾಲಕರ ಬಳಿ ಮೊಬೈಲ್ ಇದೆ. ಬಸ್ ಚಾಲನೆ ಸಂದರ್ಭದಲ್ಲಿ ಅವರು ಮೊಬೈಲ್‌ ಬಳಕೆ ಮಾಡುತ್ತಿದ್ದಾರೆ. ಮೊಬೈಲ್‌ನಲ್ಲಿ ಮಾತನಾಡುತ್ತಲೇ ಬಸ್‌ ಚಾಲನೆ ಮಾಡುತ್ತಿದ್ದಾರೆ. ಇಂಥ ಚಾಲಕರ ವರ್ತನೆಗಳನ್ನು ಪ್ರಯಾಣಿಕರು ಚಿತ್ರೀಕರಣ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುತ್ತಿದ್ದಾರೆ. ‘ಚಾಲನೆ ವೇಳೆ ಮೊಬೈಲ್ ಬಳಸಬೇಡಿ’ ಎಂದು ಪ್ರಯಾಣಿಕರು ಆಗಾಗ ಚಾಲಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಪ್ರಯಾಣಿಕರ ಮೇಲೆಯೇ ಹರಿಹಾಯುತ್ತಿರುವ ಚಾಲಕರು ‘ನಾನು ಮೊಬೈಲ್ ಬಳಕೆ ಮಾಡುತ್ತೇವೆ. ಯಾರಿಗೆ ಬೇಕಾದರೂ ದೂರು ಕೊಡು’ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ. ಚಾಲಕರು ಮೊಬೈಲ್ ಬಳಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಇದ್ದರೂ ಹಿರಿಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ‘ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಪ್ರಯಾಣಿಕರಿಗೆ ಹೆಚ್ಚು ಸುರಕ್ಷತೆ ಒದಗಿಸುವುದು ಸಂಸ್ಥೆಯ ಕರ್ತವ್ಯ. ಆದರೆ ಚಾಲಕರು ಚಾಲನೆ ವೇಳೆ ಮೊಬೈಲ್ ಬಳಸಿ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ತರುತ್ತಿದ್ದಾರೆ. ಇಂಥವರ ವಿರುದ್ಧ ಹಿರಿಯ ಅಧಿಕಾರಿಗಳು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ಅಧಿಕಾರಿಗಳು ಹಾಗೂ ಕೆಎಸ್‌ಆರ್‌ಟಿಸಿ ಹೊಣೆಯಾಗಬೇಕಾಗುತ್ತದೆ’ ಎಂದು ಜನರು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.