ADVERTISEMENT

ರಾಣೆಬೆನ್ನೂರು: ಫಲಾನುಭವಿಗಳ ‍ಪಾರದರ್ಶಕ ಆಯ್ಕೆ

ಎಸ್‌ಎಫ್‌ಸಿ, ನಗರಸಭೆ ನಿಧಿ ಅನುದಾನದಡಿ ವಿವಿಧ ಸೌಲಭ್ಯ ವಿತರಣೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 4:01 IST
Last Updated 20 ಜುಲೈ 2025, 4:01 IST
ರಾಣೆಬೆನ್ನೂರಿನ ನಗರಸಭೆ ಆವರಣದಲ್ಲಿ ಶನಿವಾರ 2024-25ರ ಎಸ್‌ಎಫ್‌ಸಿ ಅನುದಾನದಡಿ 22 ಫಲಾನುಭವಿಗಳಿಗೆ ಶಾಸಕ ಪ್ರಕಾಶ ಕೋಳಿವಾಡ ಲ್ಯಾಪ್‌ ಟಾಪ್‌ ವಿತರಣೆ ಮಾಡಿದರು
ರಾಣೆಬೆನ್ನೂರಿನ ನಗರಸಭೆ ಆವರಣದಲ್ಲಿ ಶನಿವಾರ 2024-25ರ ಎಸ್‌ಎಫ್‌ಸಿ ಅನುದಾನದಡಿ 22 ಫಲಾನುಭವಿಗಳಿಗೆ ಶಾಸಕ ಪ್ರಕಾಶ ಕೋಳಿವಾಡ ಲ್ಯಾಪ್‌ ಟಾಪ್‌ ವಿತರಣೆ ಮಾಡಿದರು   

ರಾಣೆಬೆನ್ನೂರು: ಯಾವುದೇ ಪಕ್ಷಪಾತ ಮಾಡದೇ ನ್ಯಾಯಯುತವಾಗಿ ಮೆರಿಟ್ ಆಧಾರದ ಮೇಲೆ ಅಧಿಕಾರಿಗಳು ಅರ್ಹ 80 ಫಲಾನುಭವಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಿದ್ದಾರೆ. ಫಲಾನುಭವಿಗಳು ಅನುದಾನವನ್ನು ಸದುಪಯೋಗ ಪಡಿಸಿಕೊಂಡು ಒಳ್ಳೆಯ ಉದ್ಯೋಗ ಹೊಂದಿ ನಾಡಿಗೆ ಕೊಡುಗೆ ನೀಡಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ಇಲ್ಲಿನ ನಗರಸಭೆ ಆವರಣದಲ್ಲಿ ಶನಿವಾರ ಎಸ್‌ಎಫ್‌ಸಿ ಮತ್ತು ನಗರಸಭೆ ನಿಧಿ ಅನುದಾನದಡಿ ವಿವಿಧ ಸೌಲಭ್ಯಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಒಟ್ಟು ₹ 33ಲಕ್ಷ ಅನುದಾನದಲ್ಲಿ ಅರ್ಹ ಫಲಾನುಭವಿಗಳಿಗೆ ಲ್ಯಾಪ್‌ಟಾಪ್‌ ಮತ್ತು ತ್ರಿಚಕ್ರವಾಹನ ವಿತರಿಸಿ ಅವರು ಮಾತನಾಡಿದರು.

ಫಲಾನುಭವಿಗಳ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ನಿಜವಾದ ಪ್ರಜಾಪ್ರಭುತ್ವದ ತಳಹದಿಯ ಮೇಲೆ ಕೆಲಸ ಮಾಡುತ್ತಿದ್ದೇನೆ. ಹೊರಗಡೆ ಉದ್ಯೋಗಕ್ಕೆ ಹೋದಾಗ ಶಾಲೆಯಲ್ಲಿ ಓದಿದ್ದು ಹೆಚ್ಚು ಮಹತ್ವಕ್ಕೆ ಬರುವುದಿಲ್ಲ. ವಿದ್ಯಾರ್ಥಿಗಳು ಶಾಲೆಯಲ್ಲಿ ಓದುವುದು ಬೇರೆ, ಪದವಿ ಮುಗಿಸಿದ ಶೇ 70ರಷ್ಟು ವಿದ್ಯಾರ್ಥಿಗಳು ಕಂಪನಿಯವರಿಗೆ ಬೇಕಾದ ಕೌಶಲಗಳಿಲ್ಲದ ಕಾರಣ ಅರ್ಹರಾಗುವುದಿಲ್ಲ. ಹಾಗಾಗಿ ಸ್ವಾವಲಂಬಿಯಾಗಲು ಕೌಶಲ ಬಹಳ ಮುಖ್ಯ. ನಮ್ಮ ಪಿಕೆಕೆ ಸಂಸ್ಥೆಯಿಂದ ಕಂಪ್ಯೂಟರ್‌ ಮತ್ತು ಸ್ಪೋಕನ್‌ ಇಂಗ್ಲೀಷ್‌ ಕೌಶಲ ತರಬೇತಿ ನೀಡುತ್ತಿದ್ದೇವೆ. ಆಸಕ್ತ ವಿದ್ಯಾರ್ಥಿಗಳು ಕಲಿಯಬಹುದು ಎಂದರು.

ADVERTISEMENT

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೀರೇಶ್ ಮೋಟಗಿ ಮತ್ತು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಕರಡೆಮ್ಮನವರ, ಸದಸ್ಯರಾದ ಮಲ್ಲಿಕಾರ್ಜುನ ಅಂಗಡಿ, ಪ್ರಕಾಶ ಪೂಜಾರ, ಪ್ರಭಾವತಿ ತಿಳವಳ್ಳಿ ಮಾತನಾಡಿದರು.

ಶೇ.24.10ರ ನಗರಸಭೆ ನಿಧಿ ಅನುದಾನದಡಿ ಪರಿಸಿಷ್ಟ ಜಾತಿಯ ವಿವಿಧ ಹಂತಗಳಲ್ಲಿ ವ್ಯಾಸಂಗ ಮಾಡುತ್ತಿರುವ 18 ವಿದ್ಯಾರ್ಥಿಗಳಿಗೆ ವ್ಯಾಸಂಗದ ಆಧಾರದ ಮೇಲೆ ಒಟ್ಟು ₹ 1.89 ಲಕ್ಷ ಪ್ರೋತ್ಸಾಹ ಧನ, ಪರಿಶಿಷ್ಟ ಪಂಗಡದ 8 ಫಲಾನುಭವಿಗಳಿಗೆ ನಗರಸಭೆ ಅನುದಾದಡಿ ₹ 1.39 ಲಕ್ಷ ಪ್ರೋತ್ಸಾಹ ಧನ, ವಿವಿಧ ಹಂತಗಳಲ್ಲಿ ಓದುತ್ತಿರುವ 23 ಫಲಾನುಭವಿಗಳಿಗೆ ₹ 2.25 ಲಕ್ಷ ಹಾಗೂ ₹ 22.95 ಲಕ್ಷ ಅನುದಾನದಲ್ಲಿ 17 ಅಂಗವಿಕಲ ಫಲಾನುಭವಿಗಳಿಗೆ ವಿದ್ಯುತ್‌ ಜಾರ್ಜೆಬಲ್‌ ಯಂತ್ರಚಾಲಿತ ವಾಹನಗಳನ್ನು, ಶೇ. 7.25 ಎಸ್‌ಎಫ್‌ಸಿ ಅನುದಾನದಡಿ 22 ಫಲಾನುಭವಿಗಳಿಗೆ ಲ್ಯಾಪ್‌ ಟಾಪ್‌ ಖರೀದಿಸಲು ಪ್ರತಿ ವಿದ್ಯಾರ್ಥಿಗೆ ₹ 17545 ಗಳಂತೆ ಸಹಾಯಧನ ನೀಡಲಾಯಿತು.
ಇದೇ ಸಂದರ್ಭದಲ್ಲಿ ಅಡವಿ ಆಂಜನೇಯ ಬಡಾವಣೆಗೆ ಹೋಗುವ ದೊಡ್ಡ ಕೆರೆಯ ಬಳಿ ಸೇತಿಬೆ ನಿರ್ಮಾಣ ಕಾಮಗಾರಿ ಮತ್ತು ಪಾರ್ವತಿ ಲೇ ಔಟ್‌ನಲ್ಲಿ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.

ನಗರಸಭೆ ಅಧ್ಯಕ್ಷೆ ಚಂಪಕಾ ಬಿಸಲಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪೌರಾಯುಕ್ತ ಎಫ್‌.ಐ. ಇಂಗಗಳಗಿ, ಎಂಜಿನಿಯರ್‌ ಮರಿಗೌಡ್ರ, ನಗರಸಭೆ ಸದಸ್ಯರಾದ ಶಶಿಧರ ಬಸೆನಾಯಕ, ಪ್ರಕಾಶ ಪೂಜಾರ, ಶೇಖಪ್ಪ ಹೊಸಗೌಡ್ರ, ಗಂಗಮ್ಮ ಹಾವಣೂರ, ಮಲ್ಲೇಶ ಮದ್ಲೇರ, ಹುಚ್ಚಪ್ಪ ಮೇಡ್ಲೆರಿ, ನೂರುಲ್ಲಾ ಖಾಜಿ, ಮಂಜುಳಾ ಹತ್ತಿ, ಜಯಶ್ರೀ ಪಿಸೆ, ಬಸವರಾಜ ಹುಚಗೊಂಡರ ಹಾಗೂ ಮಹೇಶ ಕೋಡಬಾಳ, ವ್ಯವಸ್ಥಾಪಕ ಮಂಜುನಾಥ, ನವನೀತ, ಮಧು ಸಾತೇನಹಳ್ಳಿ, ಪ್ರಭುರಾಜ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.