
ಹಾನಗಲ್: ತಾಲ್ಲೂಕಿನ ಕೃಷಿ ಭೂಮಿಯಲ್ಲಿ ಬೆಳೆದ ಮರಗಳ ತೆರವಿಗೆ ಈಗಿರುವ ನಿಯಮಗಳು ಕಠಿಣವಾಗಿದ್ದು, ಮರ ಕಟಾವು ಪರವಾನಗಿ ಪಡೆಯಲು ರೈತರು ಕಚೇರಿಯಿಂದ ಕಚೇರಿಗೆ ಅಲೆಯುವಂತಾಗಿದೆ. ವರ್ಷಗಟ್ಟಲೇ ಅಲೆದರೂ ಮರ ಕಟಾವು ಪರವಾನಿಗೆ ಲಭಿಸದೇ ರೈತರು ಹೈರಾಣಾಗಿದ್ದಾರೆ.
ಜಿಲ್ಲೆಯ ಇತರೆ ತಾಲ್ಲೂಕಿಗೆ ಹೋಲಿಸಿದರೆ, ಹಾನಗಲ್ ತಾಲ್ಲೂಕು ಪ್ರದೇಶವನ್ನು ದಟ್ಟ ಅರಣ್ಯ ಪಟ್ಟಿಗೆ ಸೇರಿಸಲಾಗಿದೆ. ಮರ ಕಟಾವಿಗೆ ಇರುವ ನಿಯಮಗಳನ್ನು ಕಠಿಣ ಮಾಡಲಾಗಿದೆ. ಇಡೀ ಜಿಲ್ಲೆಗೆ ಒಂದೇ ನಿಯಮ ಮಾಡಬೇಕು ಎಂಬುದು ತಾಲ್ಲೂಕಿನ ರೈತರ ಬೇಡಿಕೆಯಾಗಿದೆ.
ಬದಲಾದ ಕಾಲಕ್ಕೆ ಕುಟುಂಬಗಳು ಚಿಕ್ಕವಾಗಿದ್ದು, ಕೃಷಿ ಭೂಮಿಯೂ ಹಂಚಿಕೆಯಾಗುತ್ತಿದೆ. ಜಮೀನಿನಲ್ಲಿರುವ ಮರಗಳನ್ನು ತೆರವು ಮಾಡಿ, ಉಳುಮೆ ಮಾಡಲು ರೈತರು ತಯಾರಿ ನಡೆಸಿದ್ದಾರೆ. ಆದರೆ, ಅವರಿಗೆ ಮರ ತೆರವು ಮಾಡಲು ಅನುಮತಿ ಸಿಗುತ್ತಿಲ್ಲ.
ಮರ ಕಟಾವು ಪರವಾನಗಿಗಾಗಿ ಅರಣ್ಯ ಇಲಾಖೆ, ಕಂದಾಯ, ಸರ್ವೆ ಇಲಾಖೆ ಮತ್ತು ಉಪವಿಭಾಗಾಧಿಕಾರಿ ಕಚೇರಿಗೆ ಅಲೆದಾಡಿ ರೈತರು ಬೇಸತ್ತಿದ್ದಾರೆ. ಮರಗಳ ತೆರವಿನ ಪರವಾನಿಗೆ ಸಹವಾಸವೇ ಬೇಡವೆಂದು ರಾಜ್ಯ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
‘ಇದು ಇಲಾಖೆ ನಿಯಮ. ಪಾಲಿಸಬೇಕು’ ಎನ್ನುವ ಅಧಿಕಾರಿಗಳು, ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಜಮೀನು ಉತಾರ, ಅರ್ಜಿದಾರರ ಆಧಾರ ಕಾರ್ಡ್, ಸ್ಥಳದ ಮೋಜಣಿ ನಕ್ಷೆ, ಕಂದಾಯ ಇಲಾಖೆಯಿಂದ ಭೂಮಿ ಪಡೆದ ಖಾತಾ ಪತ್ರ, ಮರಗಳ ಮೇಲಿನ ಹಕ್ಕುಪತ್ರ, ಭೂಮಿ ಪಾಲುದಾರರಿದ್ದರೆ ಮಾಲೀಕರ ಒಪ್ಪಿಗೆ ಪತ್ರ, ಕಟಾವು ಮಾಡಬೇಕಾದ ಮರಗಳ ಅಳತೆ ಯಾದಿ ಸೇರಿದಂತೆ ಹತ್ತು ಹಲವು ದಾಖಲೆಗಳನ್ನು ಇಲಾಖೆಯವರು ಕೇಳುತ್ತಿದ್ದಾರೆ. ಈ ದಾಖಲೆಗಳನ್ನು ಹೊಂದಿಸಲು ರೈತರು ಕಚೇರಿಯಿಂದ ಕಚೇರಿಗೆ ಅಲೆದು ಹೈರಾಣಾಗುತ್ತಿದ್ದಾರೆ.
ಹಾನಗಲ್ ಅರಣ್ಯ ಇಲಾಖೆಯಲ್ಲಿ ಮರ ಕಟಾವು ಸಂಬಂಧ ಒಂದು ವರ್ಷಕ್ಕೆ 45 ರಿಂದ 50 ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಆದರೆ, ಅರ್ಜಿಯ ಪ್ರಕರಣಗಳಲ್ಲಿ ರೈತರಿಗೆ ಪರವಾನಿಗೆ ಸಿಗುವುದು ಮಾತ್ರ ಕಠಿಣವಾಗಿದೆ.
ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಅರ್ಜಿ ಕಳುಹಿಸಲಾಗುತ್ತದೆ. ಅಲ್ಲಿಂತ ಕಡತ ಮುಂದಕ್ಕೆ ಹೋಗುವುದಿಲ್ಲ. ಇಲ್ಲ ಸಲ್ಲದ ದಾಖಲೆ ಕೇಳುವ ಅಧಿಕಾರಿಗಳು ರೈತರನ್ನು ಅಲೆದಾಡುತ್ತಿದ್ದಾರೆ.
ಕೃಷಿ ಜಮೀನಿನಲ್ಲಿ ಬೆಳೆದ ಸಾಗವಾನಿ, ಬೀಟಿ, ಹೊನ್ನಿ, ಬೇವು, ಮಾವು, ಮತ್ತಿ ಮುಂತಾದ ಗಿಡಗಳನ್ನು ತೆರವುಗೊಳಿಸಿ ಅದೇ ಭೂಮಿಯನ್ನು ಕೃಷಿಗೆ ಬಳಸಿಕೊಳ್ಳಬೇಕು ಎಂಬ ರೈತನ ಪ್ರಯತ್ನ ವಿಫಲವಾಗುತ್ತಿದೆ.
‘ಜಿಲ್ಲೆಯ ಉಳಿದ ತಾಲ್ಲೂಕಿನಲ್ಲಿ ಇಲ್ಲದ ನಿಯಮ ಹಾನಗಲ್ ತಾಲ್ಲೂಕಿಗಷ್ಟೇ ಏಕೆ’ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.
‘ಮಹಾರಾಷ್ಟ್ರ ರಾಜ್ಯದಲ್ಲಿ ಮರ ತೆರವುಗೊಳಿಸಲು ಅರ್ಜಿ ಸಲ್ಲಿಸಿದ ಒಂದೇ ವಾರದಲ್ಲಿ ಪರವಾನಿಗೆ ದೊರೆಯುತ್ತದೆ. ಅಂತಹ ನಿಯಮಗಳು ನಮ್ಮಲ್ಲಿಯೂ ಜಾರಿಗೆ ಬರಬೇಕು’ ಎಂದು ರೈತರು ಒತ್ತಾಯಿಸುತ್ತಾರೆ.
ಪರವಾನಗಿ ಸಿಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕಾಮನಹಳ್ಳಿಯ ರೈತ ಮುತ್ತಣ್ಣ ಪೂಜಾರ, ‘ನನ್ನ ಜಮೀನಿನಲ್ಲಿ 2 ಸಾವಿರಕ್ಕೂ ಅಧಿಕ ಸಾಗವಾನಿ ಮರಗಳಿವೆ. ಅವುಗಳಲ್ಲಿ 600 ಮರಗಳನ್ನು ಕಟಾವು ಮಾಡುವ ಉದ್ದೇಶದಿಂದ ಇಲಾಖೆಗೆ ಅರ್ಜಿ ಸಲ್ಲಿಸಿದ್ದೇನೆ. ಆದರೆ, ಇದುವರೆಗೂ ಪರವಾನಗಿ ಸಿಕ್ಕಿಲ್ಲ. ಅಲೆದಾಡಿ ಸುಮ್ಮನಾಗಿದ್ದೇನೆ. ಜಮೀನುಗಳಲ್ಲಿನ ಮರಗಳ ತೆರವಿಗೆ ಸರಳ ನಿಯಮವಾಗಬೇಕು’ ಎಂದು ಆಗ್ರಹಿಸಿದರು.
ಮರ ಕಟಾವಿಗೆ ಬರುವ ಅರ್ಜಿಗಳನ್ನು ವಿಳಂಳ ಮಾಡದೇ ಕಂದಾಯ ಇಲಾಖೆಗೆ ಕಳುಹಿಸುತ್ತೇವೆ. ಸರ್ವೆ ಉಪವಿಭಾಗಾಧಿಕಾರಿ ಕಛೇರಿ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಂಡರಷ್ಟೆ ಪರವಾನಿಗೆ ಸಿಗುತ್ತದೆಶಿವಾನಂದ ಪೂಜಾರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ
ಹಾವೇರಿ ಜಿಲ್ಲೆಯ ಬೇರೆ ತಾಲ್ಲೂಕಿಗೆ ಹೋಲಿಸಿದರೆ ಹಾನಗಲ್ ದಟ್ಟ ಅರಣ್ಯಕ್ಕೆ ಹೊಂದಿಕೊಂಡಿದೆ. ಮರ ಕಟಾವು ನಿಯಮವೂ ಬದಲಾಗಿದೆ. ಸರ್ಕಾರದ ಹಂತದಲ್ಲೇ ನಿಯಮ ತಿದ್ದುಪಡಿಯಾಗಬೇಕುಗಣೇಶಪ್ಪ ಶೆಟ್ಟರ ವಲಯ ಅರಣ್ಯಾಧಿಕಾರಿ ಹಾನಗಲ್
‘ನಿಯಮ ತಿದ್ದುಪಡಿ ಮಾಡಿ’
‘ರೈತರು ಜಮೀನಿನಲ್ಲಿ ಬೆಳೆಸಿದ ಮರಗಳನ್ನು ಕಟಾವು ಮಾಡಲು ಪರವಾನಗಿ ನೀಡುವಾಗ ವಿಳಂಬ ಮಾಡುತ್ತಿರುವುದು ಸರಿಯಲ್ಲ. ನಿಯಮಗಳನ್ನು ತಿದ್ದುಪಡಿ ಮಾಡಿ ರೈತಸ್ನೇಹಿ ನಡೆಯ ಮೂಲಕ ತ್ವರಿತವಾಗಿ ಮರ ಕಟಾವು ಮಾಡಲು ಅನುಮತಿ ನೀಡಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ ಒತ್ತಾಯಿಸಿದ್ದಾರೆ. ಮರ ಕಟಾವು ಗೊಂದಲ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ರೈತರ ಜಮೀನಿನಲ್ಲಿ ಬೆಳೆಸಿದ ಮರಗಳ ಕಟಾವಿಗೆ ಸರ್ಕಾರ ರೂಪಿಸಿರುವ ನಿಯಮ ನಿಜಕ್ಕೂ ಅಪ್ರಸ್ತುತ. ಸರ್ಕಾರ ರೈತರ ಕಷ್ಟ ಅರಿತರೆ ಮಾತ್ರ ಇಂತಹ ಸಮಸ್ಯೆಗಳಿಗೆ ಪರಿಹಾರ ನೀಡಲು ಸಾಧ್ಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.