
ಹಾವೇರಿ: ‘ಚಿನ್ನ–ಬೆಳ್ಳಿ–ಅಧಿಕಾರವೆಂಬ ಸಂಪತ್ತು, ಅಣ್ಣ–ತಮ್ಮಂದಿರನ್ನು ಬೇರೆ ಮಾಡುತ್ತದೆ. ಕೋರ್ಟ್–ಕಚೇರಿಗೆ ಕೊಂಡೊಯ್ಯುತ್ತದೆ. ಆಪತ್ತು ತರುವ ಈ ಸಂಪತ್ತು, ನಿಜವಾದ ಸಂಪತ್ತಲ್ಲ. ಯಾವುದು ಇರುವುದರಿಂದ ನಾವು ಈ ಜಗತ್ತು ನೋಡುತ್ತಿದ್ದೇವೆಯೋ ಅಂಥ ‘ಜೀವನ’ವೇ ನಿಜವಾದ ಸಂಪತ್ತು’ ಎಂದು ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಹುಕ್ಕೇರಿಮಠದ ಶಿವಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆ ಸುವರ್ಣ ಮಹೋತ್ಸವ’ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
‘ಆಸ್ತಿ–ಬಂಗಾರ–ಹಣ ಇಲ್ಲದೇ ಬದುಕಬಹುದು. ಆದರೆ, ಜೀವನವೇ ಇರದಿದ್ದರೆ ಏನನ್ನೂ ಅನುಭವಿಸಲು ಆಗುವುದಿಲ್ಲ. ಬದುಕಿನ ಬೆಲೆ ಮನುಷ್ಯನಿಗೆ ಗೊತ್ತಿರಬೇಕು. ಅಂದಾಗ ಮಾತ್ರ ಬದುಕಿಗೆ ಅರ್ಥ ಬರುತ್ತದೆ. ದೇವರು ನಮಗೆ ಸುಂದರವಾಗಿದ್ದನ್ನು ಕೊಟ್ಟಿದ್ದಾನೆ. ನಾವು ಹುಟ್ಟುವಾಗಲೇ ನಮಗಾಗಿ ತಾಯಿ ಎದೆಯಲ್ಲಿ ಹಾಲು ಇರಿಸಿದ್ದಾನೆ. ಬದುಕಿನ ಉದ್ದೇಶ ಏನು? ಎಂಬುದನ್ನು ಅರಿತುಕೊಂಡು ಬಾಳಬೇಕು. ದೇವರು ಮಾಡಿಟ್ಟಿರುವುದನ್ನು ಕೆಡಿಸದಂತೆ ಬದುಕಬೇಕು’ ಎಂದು ಹೇಳಿದರು.
‘ಬಹುತೇಕರು ನಿತ್ಯ ಬೆಳಿಗ್ಗೆ ಎದ್ದ ಕೂಡಲೇ, ದೇವರು ಸುಮ್ಮನೇ ನಮ್ಮ ಕಣ್ಣು ಮುಚ್ಚಬಾರದೇ ? ಸುಮ್ಮನೇ ಕರೆದುಕೊಂಡು ಹೋಗಬಾರದೇ ? ಎಂದು ಅಂದುಕೊಳ್ಳುತ್ತೇವೆ. ನಿಮ್ಮ ಮಾತು ಕೇಳಿ ನಿಮ್ಮನ್ನು ದೇವರು ಮೇಲಕ್ಕೆ ಕರೆದೊಯ್ದು ಏನು ಮಾಡುತ್ತಾನೆ. ಮೇಲೆ ಯಾವುದೇ ಧಾರಾವಾಹಿ, ಐಪಿಎಲ್ ಕ್ರಿಕೆಟ್ ಪಂದ್ಯವಿಲ್ಲ. ಈ ರೀತಿ ನಿತ್ಯವೂ ಗೋಗರೆಯುವ ಬದಲು, ಜನ್ಮ ಕೊಟ್ಟ ದೇವರು ಸಂತೋಷ ಪಡುವ ರೀತಿಯಲ್ಲಿ ಬದುಕಿ ತೋರಿಸಬೇಕು. ಬದುಕಬೇಕೆಂಬ ಇಚ್ಛೆ, ಸಂತೋಷ ಹಾಗೂ ಉತ್ಸಾಹದಿಂದ ಬದುಕಬೇಕು. ಅದುವೇ ದೇವರ ನಿಜ ಆರಾಧನೆ’ ಎಂದರು.
‘ನಿತ್ಯವೂ ಮನೆಯಲ್ಲಿ ಆಡಂಬರದ ಪೂಜೆ ಬೇಕಿಲ್ಲ. ಜೀವನವೇ ಒಂದು ಪೂಜೆ. ಮನೆಯಲ್ಲಿ ಸಮಾಧಾದಿಂದ ಇರುವುದೇ ಪೂಜೆ. ಸದಾಚಾರ, ಸಜ್ಜನಿಕೆಯಿಂದ ಎದೆಯಲ್ಲಿ ಪ್ರೇಮವಿದ್ದರೆ ಅದುವೇ ಆರಾಧನೆ. ಜೀವನದಲ್ಲಿ ತಪ್ಪು–ಒಪ್ಪು ಸಹಜ. ನಿನ್ನೆ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಮುಂದೆ ತಪ್ಪು ಮಾಡದಂತೆ ನಡೆಯುವುದೇ ಪೂಜೆ’ ಎಂದು ಹೇಳಿದರು.
‘ದೇವರ ಗುಡಿಗೆ ಹೋದರೆ, ಮನೆಯಲ್ಲಿ ದೀಪ ಬೆಳಗಿದರೆ ಪೂಜೆ ಆಗಲ್ಲ. ಮನುಷ್ಯ ತನ್ನ ದುಶ್ಚಟಗಳನ್ನು ಬಿಟ್ಟರೆ ದೇವರೇ ದೀಪವಾಗಿ ಮನೆ ಬೆಳಗುತ್ತಾನೆ. ಮನುಷ್ಯ ಮೊದಲಿಗೆ ಸಮಾಧಾನದಿಂದ ಇರುವುದನ್ನು ಕಲಿಯಬೇಕು. ಜೀವನದಲ್ಲಿ ಬಯಸಿದ್ದೆಲ್ಲವೂ ಸಿಗುವುದಿಲ್ಲ. ಸಿಕ್ಕಿದ್ದನ್ನು ಬಯಸುವುದಿಲ್ಲ. ಆಟವನ್ನು ಮಾತ್ರ ನಾವು ಆಡಬೇಕು. ಮೇಲಿರುವ ಭಗವಂತ ನಿರ್ಣಾಯಕನಾಗಿ ತೀರ್ಮಾನ ಕೊಡುತ್ತಾನೆ’ ಎಂದು ಹೇಳಿದರು.
ಮುಂಡರಗಿ ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ‘ವೀರಶೈವ ಮಠಗಳು ಕಾಲಕಾಲಕ್ಕೆ ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿವೆ. ಶಿವಯೋಗಿ ಸಂಸ್ಥೆಯ ಬೆಳಕಿನಲ್ಲಿ ಸದಾಶಿವ ಸ್ವಾಮೀಜಿ ಬೆಳಗುತ್ತಿದ್ದಾರೆ. ಅವರು ಮಠಾಧೀಶರಾಗಬೇಕೆಂಬುದು ಇಚ್ಛೆಪಟ್ಟಿದ್ದ ಮೊದಲಿಗೆ ನಾನು. ಇಂದು ಜನ ಸಮೂಹ ನೋಡಿ ಸಂತೋಷವಾಗಿದೆ’ ಎಂದರು.
ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನಮಠದ ಫಕ್ಕೀರ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ‘ಹಾವೇರಿ ಭಕ್ತರ ಪರೀಕ್ಷೆಯಲ್ಲಿ ಸದಾಶಿವ ಸ್ವಾಮೀಜಿ ಮೊದಲ ಸ್ಥಾನ ಪಡೆದು ಉತ್ತೀರ್ಣರಾಗಿದ್ದಾರೆ. ಒಳ್ಳೆಯ ಗೆಳೆಯ, ಒಳ್ಳೆಯ ಹೆಂಡತಿ, ಒಳ್ಳೆಯ ಗುರು ಸಿಗಬೇಕಾದರೆ ಪುಣ್ಯ ಮಾಡಿರಬೇಕು. ಅಂಥ ಒಳ್ಳೆಯ ಗುರು ಹಾವೇರಿಗೆ ಸಿಕ್ಕಿದ್ದಾರೆ’ ಎಂದರು.
ಶೇಗುಣಸಿ ವಿರಕ್ತಮಠದ ಮಹಾಂತಪ್ರಭು ಸ್ವಾಮೀಜಿ ಅವರು ರಚಿಸಿದ ‘ನಿನ್ನೊಡವೆಯೆಂಬುದು ಜ್ಞಾನರತ್ನ’ ಸ್ಮರಣ ಸಂಪುಟವನ್ನು ಬಿಟುಗಡೆ ಮಾಡಲಾಯಿತು.
ಮೈಸೂರು ಸುತ್ತೂರು ವೀರ ಸಿಂಹಾಸನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹಾರನಹಳ್ಳಿಯ ಕೋಡಿಮಠದ ಶಿವಾನಂದ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ರುದ್ರಪ್ಪ ಲಮಾಣಿ, ಶ್ರೀನಿವಾಸ್ ಮಾನೆ, ಪ್ರಕಾಶ ಕೋಳಿವಾಡ, ಯಾಸೀರ ಅಹ್ಮದ್ ಖಾನ್ ಪಠಾಣ, ಬಿ.ಬಿ. ಚಿಮ್ಮನಕಟ್ಟಿ ಇದ್ದರು. ಗಂಗಾವತಿ ಪ್ರಾಣೇಶ ಹಾಗೂ ಸಂಗಡಿಗರು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.
‘ಮೈಸೂರು ಸಂಸ್ಥಾನ ಹಾಗೂ ರಾಜಮನೆತನದ ಇತಿಹಾಸ ನೋಡಿದಾಗ ವೀರಶೈವ ಪ್ರಭಾವವಿತ್ತು ಎಂಬುದು ಗೊತ್ತಾಗುತ್ತದೆ. ಜಂಗಮರ ನಿರ್ದೇಶನದಂತೆ ಎಲ್ಲವೂ ನಡೆಯಿತು ಎಂಬುದು ಇತಿಹಾಸದಲ್ಲಿದೆ’ ಎಂದು ಮೈಸೂರು ರಾಜವಂಶಸ್ಥರೂ ಆಗಿರುವ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ‘ಜಂಗಮರು ರಾಷ್ಟ್ರಧ್ವಜ ಲಾಂಛನ ಎಲ್ಲವನ್ನೂ ಕೊಟ್ಟಿದ್ದಾರೆ. ರಾಜಮನೆತನದ ಮೇಲೆಯೂ ವೀರಶೈವರ ಪ್ರಭಾವವಿದೆ. ಮೈಸೂರು ಸಂಸ್ಥಾನ ಧಾರ್ಮಿಕ ರಾಜ್ಯವಾಗಿತ್ತು. ನಮ್ಮ ವಂಶದವರು ಭಾರತೀಯ ಧರ್ಮ ರಕ್ಷಣೆಗಾಗಿ ನಿಂತಿದ್ದರು. ಮಠಾಧೀಶರ ಆಶೀರ್ವಾದದಿಂದ ಎಲ್ಲವೂ ಸಾಧ್ಯವಾಯಿತು’ ಎಂದರು.
‘ವಿಶ್ವಗುರು ಬಸವಣ್ಣ ಅವರ ಪರಂಪರೆ ಹಾಗೂ ಬೋಧನೆಯನ್ನು ನಾವು ಸ್ಮರಣೆ ಮಾಡಬೇಕು. ವಚನಗಳ ಮೂಲಕ ಮೂಲ ಧರ್ಮದ ತತ್ವಗಳನ್ನು ನಮಗೆ ತಿಳಿಸಿದ್ದಾರೆ. ಅವರ ತತ್ವಗಳನ್ನು ಸಮಸ್ತ ಕನ್ನಡಿಗರು ಅನುಸರಿಸಬೇಕು’ ಎಂದರು. ‘ಇದೇ ಮೊದಲ ಬಾರಿಗೆ ಹಾವೇರಿಗೆ ಬಂದು ಹುಕ್ಕೇರಿಮಠದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಸಿಕ್ಕಿರುವುದು ಖುಷಿ ತಂದಿದೆ. ಮುಂದೆಯೂ ನಾನು ಬರುತ್ತಲೇ ಇರುತ್ತೇನೆ. ಎಲ್ಲರೂ ಸೇರಿ ಧರ್ಮದ ನೆಲೆಗಟ್ಟಿನಲ್ಲಿ ವಿಕಸಿತ ಭಾರತ ನಿರ್ಮಾಣ ಮಾಡೋಣ. ಈ ಕೆಲಸಕ್ಕೆ ಎಲ್ಲರೂ ಕೈ ಜೋಡಿಸಬೇಕು’ ಎಂದರು.
ಬೆಳ್ಳಿ ತುಲಾಭಾರ ಇಂದು
ಜಿಲ್ಲಾ ಕ್ರೀಡಾಂಗಣದಲ್ಲಿ ಡಿ. 29ರಂದು ಸಂಜೆ 6 ಗಂಟೆಗೆ ಸದಾಶಿವ ಸ್ವಾಮೀಜಿಯವರ ಬೆಳ್ಳಿ ತುಲಾಭಾರ ಕಾರ್ಯಕ್ರಮ ಹಾಗೂ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭ ಜರುಗಲಿದೆ. ಮಾದನ ಹಿಪ್ಪರಗಿ ಶಿವಲಿಂಗೇಶ್ವರ ವಿರಕ್ತಮಠದ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಂಸದರಾದ ಬಸವರಾಜ ಬೊಮ್ಮಾಯಿ ಬಿ.ವೈ. ರಾಘವೇಂದ್ರ ಶಾಸಕರಾದ ರುದ್ರಪ್ಪ ಲಮಾಣಿ ಬಸವರಾಜ ಶಿವಣ್ಣನವರ ಸಿ.ಟಿ. ರವಿ ಬಿ.ವೈ. ವಿಜಯೇಂದ್ರ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಭಾರತದ ಪರಂಪರೆಗೆ ಮಹತ್ವದ ಸ್ಥಾನವಿದೆ. ಸಾಧು–ಸಂತರ ಗುಣದಿಂದ ಈ ಜಗತ್ತು ಉಳಿದಿದೆ. ಆಧ್ಯಾತ್ಮಿಕ ಚಿಂತನೆ ಹಾಗೂ ಪ್ರಾರ್ಥನೆಯಿಂದ ಜಗತ್ತು ಬೆಳೆಯುತ್ತಿದೆ-ಶಿವಾನಂದ ರಾಜೇಂದ್ರ ಸ್ವಾಮೀಜಿ, ಹಾರನಹಳ್ಳಿಯ ಕೋಡಿಮಠ
ಮನುಷ್ಯ ಯಾವುದೇ ಕಷ್ಟ ಬರಬಾರದೆಂದು ಬಯಸುತ್ತಾನೆ. ಕಷ್ಟ ಬಂದಾಗ ದುಃಖಿಸುತ್ತಾನೆ. ಯಾವ ಮನುಷ್ಯ ಸುಖ–ದುಃಖಗಳನ್ನು ಸಮಾನವಾಗಿ ಸ್ವೀಕರಿಸುತ್ತಾನೆಯೋ ಅವನು ಸದಾ ಸುಖಿಯಾಗಿರುತ್ತಾನೆ-ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮೈಸೂರು ಸುತ್ತೂರು ವೀರ ಸಿಂಹಾಸನ ಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.