ತುಮ್ಮಿನಕಟ್ಟಿ: ಗ್ರಾಮದಲ್ಲಿರುವ ಸರ್ಕಾರಿ ಮಾದರಿ ಕೇಂದ್ರ ಶಾಲೆ ಶತಮಾನೋತ್ಸವ ಪೂರೈಸಿದ್ದು, ಹಲವು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಶಾಲೆಯ ಸ್ಥಿತಿ ಕಂಡು ಹಳೇ ವಿದ್ಯಾರ್ಥಿ ನಾಗೇಂದ್ರಪ್ಪ ಮಹಾಲಿಂಗಪ್ಪ ಕರ್ಜಗಿ ಅವರು ಹೆತ್ತವರ ನೆನಪಿನಲ್ಲಿ ₹5 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
1886ರಲ್ಲಿ ಆರಂಭವಾದ ಶಾಲೆ ಇದಾಗಿದ್ದು, ಸದ್ಯ 170 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಹಳೆಯ ಕಟ್ಟಡ ನೆಲಸಮ ಮಾಡಲಾಗಿದೆ. ಅದೇ ಸ್ಥಳದಲ್ಲಿ ನಾಲ್ಕು ಹೊಸ ಕೊಠಡಿಗಳನ್ನು ಕಟ್ಟಿಸಲಾಗಿದೆ. ಒಂದು ಕೊಠಡಿ ಅಡುಗೆಗೆ, ಇನ್ನೊಂದು ಕಚೇರಿಗೆ ಹಾಗೂ ಉಳಿದ ಎರಡು ಕೊಠಡಿಗಳನ್ನು ತರಗತಿಗಳಿಗೆ ಬಳಸಿಕೊಳ್ಳಲಾಗುತ್ತಿದೆ.
ಶಾಲೆಗೆ ಕೊಠಡಿಗಳ ಅಗತ್ಯವಿರುವ ಮಾಹಿತಿ ತಿಳಿದ ಹಳೆಯ ವಿದ್ಯಾರ್ಥಿಯೂ ಆದ ನಿವೃತ್ತ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಾಗೇಂದ್ರಪ್ಪ ಕರ್ಜಗಿ, ತಾಯಿ ಅಕ್ಕನಾಗಮ್ಮ ಹಾಗೂ ತಂದೆ ಮಹಾಲಿಂಗಪ್ಪ ಅವರ ನೆನಪಿನಲ್ಲಿ ₹ 5 ಲಕ್ಷ ವೆಚ್ಚದಲ್ಲಿ (15 ಅಡಿ ಅಗಲ, 22 ಅಡಿ ಉದ್ದ) ಶಾಲಾ ಕಚೇರಿ ಕೊಠಡಿ ನಿರ್ಮಿಸುತ್ತಿದ್ದಾರೆ. ಇವರ ಕೆಲಸಕ್ಕೆ ಎಸ್‌ಡಿಎಂಸಿ ಸದಸ್ಯರು ಹಾಗೂ ಶಿಕ್ಷಕರು ಧನ್ಯವಾದ ತಿಳಿಸುತ್ತಿದ್ದಾರೆ.
‘ನಮ್ಮ ತಂದೆ, ಇದೇ ಶಾಲೆಯಲ್ಲಿ ಶಿಕ್ಷಕರಾಗಿ 15 ವರ್ಷ ಕೆಲಸ ಮಾಡಿದ್ದಾರೆ. ನಾನು ಇದೇ ಶಾಲೆಯಲ್ಲಿ ಓದಿದ್ದೇನೆ. ಕೊಠಡಿ ನಿರ್ಮಿಸುವಂತೆ ಎಸ್‌ಡಿಎಂಸಿ ಸದಸ್ಯರು ಹಾಗೂ ಶಿಕ್ಷಕರು ಕೋರಿದ್ದರು. ಅವರ ಮನವಿಗೆ ಒಪ್ಪಿ ಕಟ್ಟಡ ನಿರ್ಮಿಸುತ್ತಿದ್ದೇವೆ’ ಎಂದು ನಾಗೇಂದ್ರಪ್ಪ ಹೇಳಿದರು.
‘ಕೊಠಡಿ ನಿರ್ಮಾಣದ ಬುನಾದಿ ಕೆಲಸ ಪ್ರಗತಿಯಲ್ಲಿದೆ. ಗುಣಮಟ್ಟ ಕಾಯ್ದುಕೊಂಡು ಕೊಠಡಿ ನಿರ್ಮಿಸಲಾಗುತ್ತಿದೆ. ತಂದೆ-ತಾಯಿಯ ಆಶೀರ್ವಾದ ಹಾಗೂ ಶಾಲೆಯ ಶಿಕ್ಷಕರಿಂದ ಒಳ್ಳೆಯ ಬದುಕು ಕಟ್ಟಿಕೊಟ್ಟಿದ್ದೇನೆ. ಇದರ ಋಣವನ್ನು ತೀರಿಸುವ ಸೌಭಾಗ್ಯ ನನಗೆ ಸಿಕ್ಕಿದೆ’ ಎಂದು ತಿಳಿಸಿದರು.
Highlights - ₹5 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಿಸುವ ಗುರಿ 1886ರಲ್ಲಿ ಆರಂಭವಾದ ಶಾಲೆ ಶಾಲೆಯ ಸ್ಥಿತಿ ಕಂಡು ಕೊಠಡಿ ನಿರ್ಮಾಣದ ನಿರ್ಧಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.