ADVERTISEMENT

ಬೇಸಿಗೆ ಮುನ್ನವೇ ಬರಿದಾಗುತ್ತಿದೆ ತುಂಗಭದ್ರಾ! ಜಾತ್ರೆಗಳಿಗೆ ನೀರಿನ ಆತಂಕ

ರೈತರ ಬೆಳೆ, ಹಾವನೂರ, ಮೈಲಾರ, ಕುರುವೆತ್ತಿ ಜಾತ್ರೆಗಳಿಗೆ ನೀರಿನ ಆತಂಕ

​ಪ್ರಜಾವಾಣಿ ವಾರ್ತೆ
Published 8 ಜನವರಿ 2019, 15:04 IST
Last Updated 8 ಜನವರಿ 2019, 15:04 IST
ಹಾವೇರಿ ತಾಲ್ಲೂಕಿನ ಹಾವನೂರಿನ ಬಳಿ ತುಂಗಭದ್ರಾ ನದಿ ಬತ್ತಿ ಹೋಗಿರುವುದು
ಹಾವೇರಿ ತಾಲ್ಲೂಕಿನ ಹಾವನೂರಿನ ಬಳಿ ತುಂಗಭದ್ರಾ ನದಿ ಬತ್ತಿ ಹೋಗಿರುವುದು   

ಗುತ್ತಲ (ಹಾವೇರಿ ಜಿಲ್ಲೆ):ಬೇಸಿಗೆಗೂ ಮುನ್ನವೇ ತುಂಗಭದ್ರಾ ನದಿಯಲ್ಲಿ ನೀರು ಬತ್ತಲು ಶುರುವಾಗಿದ್ದು, ಈ ಭಾಗದ ಲಕ್ಷಾಂತರ ಭಕ್ತರು, ರೈತರನ್ನು ಆತಂಕಕ್ಕೀಡು ಮಾಡಿದೆ.

ಈ ಬಾರಿ ಮುಂಗಾರು ಆರಂಭದಲ್ಲಿ ಚೆನ್ನಾಗಿ ಸುರಿದಿತ್ತು. ಮಲೆನಾಡು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿತ್ತು. ಭದ್ರಾ ಜಲಾಶಯವು ಭರ್ತಿಯಾಗಿತ್ತು. ಇದನ್ನು ನಂಬಿದ ಇಲ್ಲಿನ ರೈತರು ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದರು.

ಆದರೆ, ಆ ಬಳಿಕ ಮಳೆ ಕೊರತೆ ಕಾಡಿತು. ರಾಜ್ಯ ಸರ್ಕಾರವು ಈಗಾಗಲೇ ಜಿಲ್ಲೆಯ ಎಂಟು ತಾಲ್ಲೂಕುಗಳನ್ನೂ ಬರಪೀಡಿತ ಎಂದು ಘೋಷಿಸಿದೆ. ಹೀಗಾಗಿ ನದಿಯನ್ನೇ ರೈತರು ನಂಬಿ ಕುಳಿತ್ತಿದ್ದು, ಬೇಸಿಗೆ ಮುನ್ನವೇ ಅದೂ ಬತ್ತಿ ಹೋಗುತ್ತಿದೆ. ರೈತರ ನಿದ್ದೆಗೆಡಿಸಿದೆ.

ADVERTISEMENT

ನದಿ ತೀರದ ರೈತರು ಈ ಹಿಂದೆ ಗೋವಿನ ಜೋಳ, ಅಲಸಂದಿ, ತರಕಾರಿ ಬೆಳೆಯುತ್ತಿದ್ದರೆ, ಈ ಬಾರಿ ಕಬ್ಬು ಮತ್ತು ಭತ್ತ ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದಾರೆ.ಈ ಬೆಳೆಗಳು ನೀರಿಲ್ಲದೇ ಕೈಕೊಡುವ ಆತಂಕ ಎದುರಾಗಿದೆ.

ತುಂಗಭದ್ರಾ ನದಿಗೆ ಜಲಾಶಯದಿಂದ ನೀರು ಬಿಡದಿದ್ದರೆ, ಜಾನುವಾರುಗಳು ಹಾಗೂ ನದಿ ತೀರದ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗಬಹುದು ಎನ್ನುತ್ತಾರೆ ರೈತ ದ್ಯಾವಣ್ಣ ಬೊಳಬುಳ್ಳಿ.

ಜಾತ್ರೆಗಳಿಗೆ ಆತಂಕ
ಸಂಕ್ರಾಂತಿಗೆ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಲು ಸಹಸ್ರಾರು ಮಂದಿ ಬರುತ್ತಾರೆ. ಫೆಬ್ರುವರಿಯಲ್ಲಿ ಹಾವನೂರ ಗ್ರಾಮ ದೇವತೆ ಜಾತ್ರೆ ನಡೆಯಲಿದೆ. ಅದೇ ತಿಂಗಳಲ್ಲಿ ನದಿ ತೀರದ ಇನ್ನೊಂದು ದಡದಲ್ಲಿರುವ (ಬಳ್ಳಾರಿ ಜಿಲ್ಲೆ) ಮೈಲಾರ ಜಾತ್ರೆ ಹಾಗೂ ಮಾರ್ಚ್‌ನಲ್ಲಿ ಕುರುವತ್ತಿ ಜಾತ್ರೆ ನಡೆಯಲಿದ್ದು, ಲಕ್ಷಾಂತರ ಭಕ್ತರು ಬರುತ್ತಾರೆ. ಹೀಗಾಗಿ ನೀರಿನ ಆತಂಕ ಎದುರಾಗಿದೆ ಎನ್ನುತ್ತಾರೆ ಹಾವನೂರಿನ ಶಿವಾನಂದಯ್ಯ ಕರಸ್ಥಳಮಠ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.