
ಹಾವೇರಿ: ಅಂತರರಾಷ್ಟ್ರೀಯ ಕೆಂಪು ಪುಸ್ತಕ ದಿನದ ಅಂಗವಾಗಿ ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಯು.ಎಸ್. ಸಾಮ್ರಾಜ್ಯಶಾಹಿ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ) ಜಿಲ್ಲಾ ಘಟಕಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ‘ದೇಶದ ಚುಕ್ಕಾಣಿ ಹಿಡಿದಿರುವ ಬಂಡವಾಳಶಾಹಿ ವರ್ಗ ತೊಲಗಲಿ, ಸಮಾಜವಾದ ಜಾರಿಯಾದರೆ ಮಾತ್ರ ಶ್ರಮಿಕರ ಶ್ರಮಕ್ಕೆ ಪ್ರತಿಫಲ ಸಿಗುತ್ತದೆ’ ಎಂದರು.
‘ಸಮಾನತೆಯ ಪ್ರತಿಪಾದಕರು, ಕಾರ್ಮಿಕರ ಪಿತಾಮಹ ಕಾರ್ಲ್ ಮಾರ್ಕ್ಸ್ ಮತ್ತು ಫೆಡ್ರಿಕ್ ಎಂಗೆಲ್ಸ್, ಕಮ್ಯೂನಿಸ್ಟ್ ಪ್ರಣಾಳಿಕೆಯನ್ನು 1948 ಫೆಬ್ರವರಿ 21ರಂದು ಪ್ರಕಟಿಸಿ ಬಿಡುಗಡೆ ಮಾಡಿದ್ದಾರೆ. ಅದರ ಭಾಗವಾಗಿ ಅಂದಿನಿಂದ ಇಂದಿನವರೆಗೂ ಚಳವಳಿಯ ನಾನಾ ಹಾದಿಯಲ್ಲಿ ಕಮ್ಯೂನಿಸ್ಟ್ ಸಾಹಿತ್ಯವನ್ನು ಒಂದುಗೂಡಿಸುವ ಭಾಗವೇ ಕೆಂಪು ಪುಸ್ತಕ ದಿನ’ ಎಂದರು.
‘ವಸಂತರಾಜ ಎನ್. ಕೆ. ಅವರು ಕನ್ನಡದಲ್ಲಿ ಬರೆದಿರುವ ‘ಯು.ಎಸ್. ಸಾಮ್ರಾಜ್ಯಶಾಹಿ ಪುಸ್ತಕ’ವನ್ನು ರಾಜ್ಯದಾದ್ಯಂತ ಬಿಡುಗಡೆ ಮಾಡಿ, ಅಮೆರಿಕಾದ ಸಾಮ್ರಾಜ್ಯಶಾಹಿ ನೀತಿಯನ್ನು ಜನರಿಗೆ ಅರ್ಥೈಸಲಾಗುತ್ತಿದೆ’ ಎಂದರು.
ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯರಾದ ಪರಿಮಳಾ ಜೈನ್ ಮಾತನಾಡಿ, ‘ಕಾರ್ಮಿಕರು ಶ್ರಮಿಸಿ ಸಿದ್ಧಪಡಿಸಿದ ಅನೇಕ ವಸ್ತುಗಳ ಮೇಲೆ ಅಧಿಕಾರ ಇಲ್ಲವಾಗಿಸುವುದೇ ಸಾಮ್ರಾಜ್ಯಶಾಹಿ. ವಸಾಹತುಶಾಹಿಗಳ ಸರ್ವಾಧಿಕಾರ ತಿರಸ್ಕರಿಸಬೇಕಾಗಿದೆ. ಯುವಜನತೆ ಸಾಮ್ರಾಜ್ಯಶಾಹಿ ಪುಸ್ತಕ ಓದಬೇಕು. ದೇಶದ ಮೇಲಿನ ಜಾಗತಿಕ ದಬ್ಬಾಳಿಕೆ ತಿಳಿದು, ಅದರ ವಿರುದ್ಧ ಧ್ವನಿ ಎತ್ತಬೇಕಿದೆ’ ಎಂದರು.
ಎಸ್ಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಎಸ್. ಮಾತನಾಡಿ, ‘ಅಮೆರಿಕಾ ಜೊತೆಗೆ ನಡೆದ ಒಪ್ಪಂದ, ದೇಶದ ರೈತರಿಗೆ ಭಾರಿ ಅನ್ಯಾಯ ಮಾಡಿದೆ. ಅಮೆರಿಕಾದ ಅಧ್ಯಕ್ಷ ಟ್ರಂಪ್, ತನ್ನ ಸರ್ವಾಧಿಕಾರಿ ನೀತಿಗಳಿಂದ ಸಣ್ಣಪುಟ್ಟ ದೇಶಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದಾರೆ. ನಮ್ಮ ಪ್ರಧಾನಿಯವರು ಎಚ್ಚರಿಕೆಯಿಂದ ಸ್ನೇಹವನ್ನು ಮಾಡಬೇಕು’ ಎಂದರು.
ನಿಮ್ಹಾನ್ಸ್ ಸಂಶೋಧಕ ಡಾ. ಶಿವಾನಂದ ಯರೆಸೀಮಿ, ಮುಖಂಡರಾದ ಅರುಣ ನಾಗಾವತ್, ಬಸವರಾಜ ಬಾರ್ಕಿ, ಖಲಂದರ ಅಲ್ಲಿಗೌಡ್ರ, ಬಸನಗೌಡ ಭರಮಗೌಡ್ರ, ಮಧುಕರ್ ಸನದಿ, ರವೀಂದ್ರನಾಥ್ ಭಟ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.